ರೋಮ್: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಪತಿ ಆಂಡ್ರಿಯಾ ಗಿಯಾಂಬ್ರುನೋ ಅವರ ಜೊತೆಗಿನ ದಾಂಪತ್ಯಿಕ ಸಂಬಂಧಕ್ಕೆ ಪೂರ್ಣ ವಿರಾಮವಿಡುವುದಕ್ಕೆ ತಯಾರಾಗಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಆಂಡ್ರಿಯಾ ಜೊತೆಗಿನ 10 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿರುವುದಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮೆಲೋನಿ ಬರೆದುಕೊಂಡಿದ್ದಾರೆ.
ಮೆಲೋನಿ ಪತಿ ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಲೈವ್ ಶೋವೊಂದರಲ್ಲೇ ಲೈಂಗಿಕತೆಯ ಕುರಿತು ಕೆಟ್ಟದಾಗಿ ಕಾಂಮೆಂಟ್‌ಗಳನ್ನು ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮೆಲೋನಿ ಕೆಲ ಸಮಯದಿಂದ ನಮ್ಮಿಬ್ಬರ ಹಾದಿ ಭಿನ್ನವಾಗಿದೆ. ಈಗ ಅವೆಲ್ಲವನ್ನೂ ಒಪ್ಪುವ ಸಮಯ ಬಂದಿದೆ ಎಂದು ಹೇಳಿಕೊಂಡಿದ್ಧಾರೆ.
ಸುದ್ದಿವಾಹಿನಿಯೊಂದರಲ್ಲಿ ನಿರೂಪಕನಾಗಿರುವ ಆಂಡ್ರಿಯಾ ಇತ್ತೀಚೆಗೆ ತಮ್ಮ ನಿರೂಪಣೆಯ ವೇಳೆ ಅಸಭ್ಯ ಭಾಷೆಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಪ್ರಸಾರದ ವೇಳೆಯೇ ಅವರು ತಮ್ಮ ಮಹಿಳಾ ಸಹೋದ್ಯೋಗಿಯ ಜೊತೆಗೆ ಫ್ಲರ್ಟ್ ಮಾಡಿದ್ದರು. ಆಕೆ ನಾನೇಕೆ ನಿನ್ನನ್ನು ಮೊದಲೇ ಭೇಟಿ ಮಾಡಲಿಲ್ಲ ಎಂದೂ ಕೇಳಿದ್ದಳು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.
ಇದನ್ನೂ ಓದಿ: Namo Bharat;ಭಾರತದ ಮೊದಲ ರಾಪಿಡ್ ರೈಲು “ನಮೋ ಭಾರತ್” ಲೋಕಾರ್ಪಣೆಗೈದ ಪ್ರಧಾನಿ ಮೋದಿ
ಗುರುವಾರದಂದು ಪ್ರಸಾರವಾದ ಮತ್ತೊಂದು ಕಾರ್ಯಕ್ರಮದಲ್ಲಿ ಆಂಡ್ರಿಯಾ ತಾವು ಹೊಂದಿರುವ ಅನೈತಿಕ ಸಂಬಂಧಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಮಹಿಳಾ ಸಹೋದ್ಯೋಗಿಗಳು ಗುಂಪು ಲೈಂಗಿಕತೆಯಯಲ್ಲಿ ಭಾಗವಹಿಸುವುದಾದರೆ ಅವರು ನನ್ನನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದು ಟೀಕೆಗೆ ಗುರಿಯಾಗಿತ್ತು.
ಕಳೆದ ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕುರಿತೂ ಆಂಡ್ರಿಯಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಈ ಎಲ್ಲಾ ವಿವಾದಗಳಿಂದಾಗಿ ಬೇಸತ್ತಿರುವ ಜಾರ್ಜಿಯಾ ನನ್ನ ಪತಿ ಆಡುತ್ತಿರುವ ಮಾತುಗಳಿಂದಾಗಿ ನನ್ನನ್ನು ಯಾರೂ ಪ್ರಶ್ನಿಸಬಾರದು. ಮುಂದಿನ ದಿನಗಳಲ್ಲಿ ಆತನ ನಡವಳಿಕೆಯ ಬಗ್ಗೆ ನಾನು ಉತ್ತರಿಸುವಂತಾಗಬಾರದು. ಅದಕ್ಕಾಗಿ ಕೊನೆಗೂ ಆತನಿಂದ ಬೇರಾಗುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮೆಲೋನಿ ತಿಳಿಸಿದ್ದಾರೆ.