Advertisement
ಈ ಸಂಬಂಧ ಪೊಲೀಸರು ಸೊಣ್ಣಪ್ಪನಹಳ್ಳಿ ನಿವಾಸಿಗಳಾದ ಮಂಜುನಾಥ್(35), ರವಿ (27), ಕೃಷ್ಣ (28) ಹಾಗೂ ಕಲಿಪುರದ ಪ್ರವೀಣ(25)ನನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ತಿಂಡ್ಲುವಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದಾರೆ. ಭಾನುವಾರ ರಾತ್ರಿ 9ಗಂಟೆ ಸುಮಾರಿಗೆ ಸ್ನೇಹಿತ ಸುಮಲ್ಯ ಗೌತಮ್ ಜತೆ ದ್ವಿಚಕ್ರ ವಾಹನದಲ್ಲಿ ಚಿಕ್ಕಜಾಲದ ಬಳಿ ತೆರಳುತ್ತಿದ್ದಾಗ ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಆರೋಪಿ ಮಂಜುನಾಥ್ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿದ್ದ.
Related Articles
ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಕೂಡಲೇ ಫೋನ್ ಮಾಡಿ ತನ್ನ ತಾಯಿಗೆ ಮಾಹಿತಿ ತಿಳಿಸಿದ್ದಾಳೆ. ಅಲ್ಲದೆ ಸ್ನೇಹಿತನ ಜತೆ ಚಿಕ್ಕಜಾಲ ಠಾಣೆಗೆ ತೆರಳಿ, ಆರೋಪಿ ಮಂಜುನಾಥ್ ಸೇರಿದಂತೆ ಸುಮಾರು 40-45 ಮಂದಿ ವಿರುದ್ಧ ದೂರು ನೀಡಿದ್ದಾಳೆ. “ಸ್ಥಳೀಯರು ಪ್ರಾಣ ಬೆದರಿಕೆಯೊಡ್ಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಜತೆಗೆ ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ನನಗಾದ ಈ ಸ್ಥಿತಿ ಬೇರೆಯವರಿಗೆ ಆಗಬಾರದು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ,” ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
Advertisement
ಸ್ಥಳೀಯರ ಆರೋಪ ವಿದ್ಯಾರ್ಥಿನಿ ಮೇಲೆ ಆದರೆ, ಪ್ರಕರಣದ ಬಗ್ಗೆ ಪ್ರತ್ಯಕ್ಷದರ್ಶಿಗಳು, ಸ್ಥಳೀಯರು ಹೇಳುವುದೇ ಬೇರೆ. ಇದೊಂದು ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ. ಮಂಜುನಾಥ್ ಬೈಕ್ ಓಡಿಸಿಕೊಂಡು ಹೋಗುವಾಗ ವಿದ್ಯಾರ್ಥಿನಿಯಿದ್ದ ಮತ್ತು ಗೌತಮ್ ಇದ್ದ ಬೈಕ್‌ಗೆ ಆಕಸ್ಮಿಕವಾಗಿ ಅಡ್ಡ ಬಂದಿದ್ದ. ಆಗ ಗೌತಮ್, ಹಿಂದಿ ಭಾಷೆಯಲ್ಲಿ ಮಂಜುನಾಥ್ ವಿರುದ್ಧ ತೀರ ಕೆಟ್ಟ ಪದ ಪ್ರಯೋಗ ಮಾಡಿದ. ಇದರಿಂದ ಕೋಪಗೊಂಡ ಮಂಜುನಾಥ್ ಗೌತಮ್‌ನನ್ನು ಪ್ರಶ್ನಿಸಿದ್ದ. ಆಗ ಜಗಳ ಆರಂಭವಾಯಿತು. ಈ ವೇಳೆ ಮಂಜುನಾಥ್ ಬೈಕ್ ಕೀ ಕಿತ್ತುಕೊಂಡ. ಅದೇ ವೇಳೆ ಅಲ್ಲಿದ್ದ ಪ್ರವೀಣ್, ಕೃಷ್ಣ ಜಗಳ ಬಿಡಿಸಲೆಂದು ತೆರಳಿದರು. ಅಷ್ಟು ಹೊತ್ತಿಗೆ ಸ್ಥಳೀಯರೆಲ್ಲರೂ ಜಮಾಯಿಸಿದ್ದಾರೆ. ಕೆಲ ಸಮಯದ ವಾಗ್ವಾದದ ನಂತರ ರಾಜೀ ಸಂಧಾನ ನಡೆದು ವಿದ್ಯಾರ್ಥಿನಿ ಹಾಗೂ ಯುವಕನನ್ನು ಜನರೇ ಕಳುಹಿಸಿಕೊಟ್ಟರು. ಇದಾದ ಬಳಿಕ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ವಿಷಯ ಗೊತ್ತಾದ ಕೂಡಲೇ ಮಂಜುನಾಥ್ ಖುದ್ದಾಗಿ ಠಾಣೆಗೆ ಹೋಗಿ ಪೊಲೀಸರಿಗೆ ನಡೆದ ವಿಷಯ ತಿಳಿಸಿದ್ದ. ಮಂಜುನಾಥ್ ಮತ್ತು ಗೌತಮ್ ನಡುವೆ ಜಗಳ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದವರು ಜಗಳ ಬಿಡಿಸಿದರು. ಆದರೆ ವಿದ್ಯಾರ್ಥಿನಿ ಅವರ ಮೇಲೂ ದೂರು ದಾಖಲಿಸಿದ್ದಾಳೆ ಎಂದು ಹೇಳಿದ್ದಾರೆ.