ರೊಸೇಯೂ (ಡೊಮಿನಿಕಾ):ವೆಸ್ಟ್‌ಇಂಡೀಸ್ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಆಡುತ್ತಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮ ಅವರ ಅಮೋಘ ಶತಕಗಳಿಂದಾಗಿ ಭಾರತ ದ್ವಿತೀಯ ದಿನದಾಟದಲ್ಲಿ ಭರ್ಜರಿ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಈ ಮೊದಲಸು ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡವು 150 ರನ್ನಿಗೆ ಆಲೌಟಾಗಿತ್ತು. ಅಶ್ವಿನ್ 60 ರನ್ನಿಗೆ 5 ಮತ್ತು ಜಡೇಜ 26 ರನ್ನಿಗೆ 3 ವಿಕೆಟ್ ಪಡೆದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿತ್ತು.
ಉತ್ತಮ ಆರಂಭ:
ಭಾರತದ ಆರಂಭ ಉತ್ತಮವಾಗಿತ್ತು. ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅವರು ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್ ಪೇರಿಸಿದರು.. ಜೈಸ್ವಾಲ್ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಭರವಸೆ ಮೂಡಿಸಿದರು. ರೋಹಿತ್ 103 ರನ್ ಗಳಿಸಿ ಔಟಾದರು. ರೋಹಿತ್ 221 ಎಸೆತ ಎದುರಿಸಿ 10 ಬೌಂಡರಿ ಮತ್ತು 2 ಸಿಕ್ಸರ್ ಹೊಡೆದಿದ್ದರು.