ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ತೃತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಪಿನ್ನರ್ ಶಬಾಜ್ ನದೀಂ ಇದೇ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ತೊಟ್ಟಿದ್ದಾರೆ.
ಸತತ ಟಾಸ್ ಸೋಲಿನಿಂದ ಕಂಗೆಟ್ಟಿದ್ದ ಹರಿಣಗಳ ನಾಯಕ ಫಾಫ್ ಡುಪ್ಲೆಸಿಸ್ ಇಂದು ಟಾಸ್ ಹಾರಿಸಲು ಉಪ ನಾಯಕ ತೆಂಬ ಬವುಮಾ ಅವರನ್ನು ಕರೆಸಿದರು. ಆದರೂ ಹರಿಣಗಳ ಲಕ್ ಬದಲಾಗಲಿಲ್ಲ. ಕೊಹ್ಲಿ ಮತ್ತೊಮ್ಮೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು.
ಇಶಾಂತ್ ಗೆ ರೆಸ್ಟ್; ನದೀಂಗೆ ಟೆಸ್ಟ್
ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ವೇಗಿ ಇಶಾಂತ್ ಶರ್ಮಾ ಅವರನ್ನು ಈ ಪಂದ್ಯದಿಂದ ಹೊರಗಿಡಲಾಯಿತು. ಬದಲಾಗಿ ಸ್ಪಿನ್ನರ್ ಶಬಾಜ್ ನದೀಂ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಆಡುತ್ತಿರುವ ನದೀಂ ಗೆ ಕ್ಯಾಪ್ಟನ್ ಕೊಹ್ಲಿ ಕ್ಯಾಪ್ ನೀಡಿ ಸ್ವಾಗತಿಸಿದರು.
ದಕ್ಷಿಣ ಆಫ್ರಿಕಾ ತಂಡದಲ್ಲಿ ಒಟ್ಟು ಐದು ಬದಲಾವಣೆ ಕಂಡು ಬಂತು. ಗಾಯಗೊಂಡಿರುವ ಆಡನ್ ಮಾಕ್ರಮ್ ಅವರ ಬದಲಾಗಿ ಮಧ್ಯಮ ಕ್ರಮಾಂಕದ ಆಟಗಾರ ಕ್ವಿಂಟನ್ ಡಿಕಾಕ್ ಆರಂಭಿಕನಾಗಿ ಕಾಣಿಸಿ ಕೊಳ್ಳಲಿದ್ದಾರೆ. ಸ್ಪಿನ್ನರ್ ಜಾರ್ಜ್ ಲಿಂಡೆ ಪದಾರ್ಪಣೆ ಮಾಡಿದರು. ವಿಕೆಟ್ ಕೀಪರ್ ಆಗಿ ಹೆನ್ರಿಕ್ ಕ್ಲಾಸೆನ್, ಜೈಬರ್ ಹಂಜಾ, ಲುಂಗಿ ಎನ್ ಗಿಡಿ, ಡೇನ್ ಪೀಟ್ ಈ ಪಂದ್ಯದಲ್ಲಿ ಕಾಣಿಸಿಕೊಂಡರು.
ಏಡನ್ ಮಾಕ್ರಮ್, ಫಿಲಾಂಡರ್, ಡಿ ಬ್ರುಯಾನ್, ಮುತ್ತುಸ್ವಾಮಿ, ಕೇಶವ್ ಮಹರಾಜ ಈ ಪಂದ್ಯದಿಂದ ಹೊರಗುಳಿದರು.