Advertisement

ರೋಹಿತ್‌ ಸೆಂಚುರಿ ಹಿಟ್‌; ಭಾರತ ಉತ್ತಮ ಹೋರಾಟ

12:55 AM Sep 05, 2021 | Team Udayavani |

ಲಂಡನ್‌: ರೋಹಿತ್‌ ಶರ್ಮ ವಿದೇಶದಲ್ಲಿ ಬಾರಿಸಿದ ಮೊದಲ ಟೆಸ್ಟ್‌ ಶತಕ ಹಾಗೂ ಚೇತೇಶ್ವರ್‌ ಪೂಜಾರ ಅವರೊಂದಿಗೆ ನಡೆಸಿದ 153 ಜತೆಯಾಟದ ನೆರವಿನಿಂದ ಓವಲ್‌ ಟೆಸ್ಟ್‌ ಪಂದ್ಯದ ತೃತೀಯ ದಿನ ಭಾರತ ದಿಟ್ಟ ಬ್ಯಾಟಿಂಗ್‌ ಹೋರಾಟ ಪ್ರದರ್ಶಿಸಿದೆ. 3 ವಿಕೆಟಿಗೆ 250 ರನ್‌ ಗಳಿಸಿ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ. 151 ರನ್‌ ಮುನ್ನಡೆ ಸಾಧಿಸಿದೆ.

Advertisement

43ನೇ ಟೆಸ್ಟ್‌ ಆಡುತ್ತಿರುವ ರೋಹಿತ್‌ ಶರ್ಮ ಬಾರಿಸಿದ 8ನೇ ಶತಕ ಇದಾಗಿದೆ. ಅವರ ಹಿಂದಿನ ಏಳೂ ಶತಕಗಳು ಭಾರತದಲ್ಲೇ ದಾಖಲಾಗಿದ್ದವು. 204 ಎಸೆತಗಳಲ್ಲಿ ರೋಹಿತ್‌ ಸೆಂಚುರಿ ಪೂರ್ತಿಗೊಂಡಿತು. 94ರಲ್ಲಿದ್ದ ಅವರು ಸ್ಪಿನ್ನರ್‌ ಮೊಯಿನ್‌ ಅಲಿ ಎಸೆತವನ್ನು ಲಾಂಗ್‌ಆನ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟಿ ಶತಕ ಸಂಭ್ರಮ ಆಚರಿಸಿದರು. ಇದಕ್ಕೂ ಮುನ್ನ ಅವರು ಆರಂಭಿಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದಿದ್ದರು.

ರೋಹಿತ್‌ 127ರ ತನಕ ತಮ್ಮ ಇನ್ನಿಂಗ್ಸ್‌ ವಿಸ್ತರಿಸಿದರು (256 ಎಸೆತ, 14 ಬೌಂಡರಿ, ಒಂದು ಸಿಕ್ಸರ್‌). ಪೂಜಾರ ಕೊಡುಗೆ 61 ರನ್‌ (127 ಎಸೆತ 8 ಬೌಂಡರಿ). ಇವರಿಬ್ಬರನ್ನು ಒಂದೇ ಓವರ್‌ನಲ್ಲಿ ಕೆಡವಿದ ರಾಬಿನ್ಸನ್‌ ಇಂಗ್ಲೆಂಡನ್ನು ಮರಳಿ ಹೋರಾಟಕ್ಕೆ ಅಣಿಗೊಳಿಸಿದರು.

99 ರನ್‌ ಹಿನ್ನಡೆಗೆ ಸಿಲುಕಿದ್ದ ಭಾರತ ದ್ವಿತೀಯ ದಿನದಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 43 ರನ್‌ ಗಳಿಸಿ ಹೋರಾಟಕ್ಕೆ ಅಣಿಯಾಗಿತ್ತು. ಶನಿವಾರ ಬ್ಯಾಟಿಂಗ್‌ ಮುಂದುವರಿಸಿದ ಈ ಜೋಡಿ ತಂಡದ ಮೊತ್ತವನ್ನು 83ರ ತನಕ ಬೆಳೆಸಿತು. ಇಬ್ಬರೂ ಉತ್ತಮ ಲಯದಲ್ಲಿದ್ದ ಕಾರಣ ರನ್‌ ನಿರಾಯಾಸವಾಗಿ ಹರಿದುಬರತೊಡಗಿತು.

ಜೇಮ್ಸ್‌ ಆ್ಯಂಡರ್ಸನ್‌ ಭಾರತದ ಆರಂಭಿಕರನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 46 ರನ್‌ ಮಾಡಿದ ರಾಹುಲ್‌ ಕೀಪರ್‌ ಬೇರ್‌ಸ್ಟೊಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. 101 ಎಸೆತಗಳ ಈ ಆಟದಲ್ಲಿ 6 ಫೋರ್‌, ಒಂದು ಸಿಕ್ಸರ್‌ ಒಳಗೊಂಡಿತ್ತು. ಲಂಚ್‌ ವೇಳೆ ಒಂದಕ್ಕೆ 108 ರನ್‌ ಮಾಡಿದ್ದ ಭಾರತ, ಆಗಷ್ಟೇ ಮೊದಲ ಇನ್ನಿಂಗ್ಸ್‌ “ಸಾಲ’ ತೀರಿಸಿತ್ತು.

Advertisement

ಮುಂದಿನದು ರೋಹಿತ್‌-ಪೂಜಾರ ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್‌ ಸರದಿ. ದ್ವಿತೀಯ ಅವಧಿಯನ್ನು ಸಂಪೂರ್ಣವಾಗಿ ತಮ್ಮ ಆಟಕ್ಕೆ ಬಳಸಿಕೊಂಡ ಇವರು ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸುತ್ತ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next