Advertisement
ಎರಡಕ್ಕೆ 166 ರನ್ ಮಾಡಿದ್ದ ಆಸ್ಟ್ರೇಲಿಯ, ಶುಕ್ರವಾರದ ಆಟ ಮುಂದುವರಿಸಿ 338ರ ತನಕ ಬೆಳೆಯಿತು. ಒಂದೆಡೆ ಕ್ರೀಸಿಗೆ ಗಟ್ಟಿಯಾಗಿ ಅಂಟಿಕೊಂಡ ಸ್ಟೀವನ್ ಸ್ಮಿತ್ 131 ರನ್ ಬಾರಿಸಿ ಮೆರೆದರು. ಮಾರ್ನಸ್ ಲಬುಶೇನ್ “ನವರ್ಸ್ ನೈಂಟಿ’ಗೆ ತುತ್ತಾದರು. ಜವಾಬು ನೀಡಿದ ಭಾರತ 45 ಓವರ್ ಬ್ಯಾಟಿಂಗ್ ನಡೆಸಿ 2 ವಿಕೆಟಿಗೆ 96 ರನ್ ಗಳಿಸಿದೆ. ಆರಂಭಿಕರಾದ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಉತ್ತಮ ಅಡಿಪಾಯ ನಿರ್ಮಿಸಿ ನಿರ್ಗಮಿಸಿದ್ದಾರೆ. ಚೇತೇಶ್ವರ್ ಪೂಜಾರ ಮತ್ತು ನಾಯಕ ಅಜಿಂಕ್ಯ ರಹಾನೆ ಆಸೀಸ್ ದಾಳಿಯನ್ನು ತಡೆದು ನಿಂತಿದ್ದಾರೆ.
Related Articles
Advertisement
ಈ “ಬ್ರೇಕ್ ತ್ರೋ’ ಬಳಿಕ ಆಸೀಸ್ ವಿಕೆಟ್‌ಗಳು ಪಟಪಟನೆ ಬೀಳತೊಡಗಿದವು. ವೇಡ್ 13, ನಾಯಕ ಪೇನ್ ಕೇವಲ ಒಂದು ರನ್ ಮಾಡಿದರೆ, ಗ್ರೀನ್ ಮತ್ತು ಕಮಿನ್ಸ್ ಖಾತೆಯನ್ನೇ ತೆರೆಯಲಿಲ್ಲ. ಆದರೆ ಸ್ಮಿತ್ ಅವರ “ಒನ್ ಮ್ಯಾನ್ ಶೋ’ ಮಾತ್ರ ನಿರಾತಂಕವಾಗಿ ಸಾಗಿತ್ತು.
ಸ್ಟಾರ್ಕ್ 24 ರನ್ ಮಾಡಿದ್ದನ್ನು ಬಿಟ್ಟರೆ ಆಸೀಸ್ ಕೆಳ ಕ್ರಮಾಂಕ ದಲ್ಲಿ ಬೇರೆ ಯಾರಿಂದಲೂ ದೊಡ್ಡ ಮೊತ್ತ ಬರಲಿಲ್ಲ. ಕೊನೆಯ 7 ಮಂದಿ ಸೇರಿ ಗಳಿಸಿದ್ದು 39 ರನ್ ಮಾತ್ರ. ಆದರೆ ಸ್ಮಿತ್ ಇಡೀ ಇನ್ನಿಂಗ್ಸ್ ಭಾರವನ್ನು ಹೊತ್ತು ಸಾಗುತ್ತಿದ್ದರು. ಅವರ 131 ರನ್ 226 ಎಸೆತಗಳಿಂದ ಬಂತು. ಸಿಡಿಸಿದ್ದು 16 ಬೌಂಡರಿ.
ಜಡೇಜ 4, ಬುಮ್ರಾ ಮತ್ತು ಸೈನಿ ತಲಾ 2, ಸಿರಾಜ್ ಒಂದು ವಿಕೆಟ್ ಉರುಳಿಸಿದರು. ಆದರೆ ಅಶ್ವಿನ್ ಮ್ಯಾಜಿಕ್ ನಡೆಯಲಿಲ್ಲ. ಭಾರತದ ಒಟ್ಟಾರೆ ಬೌಲಿಂಗ್ ನಿಖರವಾಗಿತ್ತು. ಬಿಟ್ಟುಕೊಟ್ಟ ಎಕ್ಸ್‌ಟ್ರಾ ರನ್ ಕೇವಲ 10.
ಭಾರತ ಭರವಸೆಯ ಆರಂಭ :
ಸರಣಿಯಲ್ಲಿ ಮೊದಲ ಸಲ ಆಡಲಿಳಿದ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಭಾರತಕ್ಕೆ ಭರವಸೆಯ ಆರಂಭ ಒದಗಿಸಿದರು. ಆಸೀಸ್ ತ್ರಿವಳಿ ವೇಗಿಗಳ ದಾಳಿಯನ್ನು ಸಮರ್ಥ ವಾಗಿ ನಿಭಾಯಿಸಿದ ಇವರು 27 ಓವರ್‌ಗಳಿಂದ 70 ರನ್ ಪೇರಿಸಿದರು. ಭಾರತ ಈ ಸರಣಿಯಲ್ಲಿ ಆರಂಭಿಕ ವಿಕೆಟಿಗೆ 50 ರನ್ ಒಟ್ಟುಗೂಡಿಸಿದ್ದು ಇದೇ ಮೊದಲು.
ರೋಹಿತ್ 77 ಎಸೆತ ನಿಭಾಯಿಸಿ 26 ರನ್ ಹೊಡೆದರು (3 ಫೋರ್, ಒಂದು ಸಿಕ್ಸರ್). ಗಿಲ್ ಚೊಚ್ಚಲ ಅರ್ಧ ಶತಕದ ಸಂಭ್ರಮ ಆಚರಿಸಿದರು. ಆದರೆ ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. 50 ರನ್ ಮಾಡಿದೊಡನೆಯೆ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು (101 ಎಸೆತ, 8 ಬೌಂಡರಿ).
ಪೂಜಾರ 53 ಎಸೆತಗಳಿಂದ 9 ರನ್, ರಹಾನೆ 40 ಎಸೆತಗಳಿಂದ 5 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಫಾರ್ಮ್ಗೆ ಮರಳಿದ ಖುಷಿಯಲ್ಲಿ ಸ್ಮಿತ್ :
“ಸಿಡ್ನಿಯಲ್ಲಿ ನಾನು ಎರಡು ಶತಕ ಬಾರಿಸಬೇಕು ಎಂದು 2-3 ವಾರಗಳ ಹಿಂದೆ ಯೋಜಿಸಿದ್ದೆ. ಆದರೆ ಇದನ್ನು ಹೇಳಿಕೊಂಡರೆ ಜನರೆಲ್ಲ ನಗುತ್ತಿದ್ದರು. ಕಾರಣ, ನನ್ನ ಕಳಪೆ ಫಾರ್ಮ್. ಆದರೆ ಇಂದು ಫಾರ್ಮ್ ಕಂಡುಕೊಂಡಿದ್ದೇನೆ’ ಎಂಬುದಾಗಿ 131 ರನ್ ಬಾರಿಸಿ ಭಾರತವನ್ನು ಗೋಳುಹೊಯ್ದುಕೊಂಡ ಸ್ಟೀವನ್ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ. ಮೊದಲೆರಡು ಟೆಸ್ಟ್‌ಗಳಲ್ಲಿ ಸ್ಮಿತ್ ಗಳಿಸಿದ್ದು ಕೇವಲ 10 ರನ್!
“ಸಿಡ್ನಿ ನನ್ನ ಹೋಮ್ ಗ್ರೌಂಡ್. ಇಲ್ಲಿ ಆಡುವುದನ್ನು ನಾನು ಯಾವತ್ತೂ ಆನಂದಿಸುತ್ತೇನೆ. ನನ್ನ ತಂದೆ-ತಾಯಿ ಸ್ಟೇಡಿಯಂನಲ್ಲಿದ್ದು ಈ ಶತಕ ನೋಡಿದ್ದು ನನ್ನ ಪಾಲಿನ ಹೆಮ್ಮೆಯ ಕ್ಷಣ. ತಂಡದ ಗೌರವಯುತ ಮೊತ್ತಕ್ಕೆ ಕಾರಣನಾಗಿರುವುದು ಬಹಳ ಖುಷಿ ಕೊಟ್ಟಿದೆ’ ಎಂದರು.
ಕಳೆದ ವರ್ಷ ಒಂದೂ ಶತಕ ಬಾರಿಸದ ಸ್ಮಿತ್, ಈಗ ವರ್ಷಾರಂಭದ ಟೆಸ್ಟ್‌ನಲ್ಲೇ ಮೂರಂಕೆಯ ಗಡಿ ದಾಟಿ ಭರ್ಜರಿ ಓಪನಿಂಗ್ ಮಾಡಿದ್ದಾರೆ. ಇದು 15 ತಿಂಗಳ ಬಳಿಕ ಸ್ಮಿತ್ ದಾಖಲಿಸಿದ ಮೊದಲ ಟೆಸ್ಟ್ ಶತಕ. ಅವರ ಕೊನೆಯ ಸೆಂಚುರಿ 2019ರ ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಬಂದಿತ್ತು (211 ರನ್).
ಜಡೇಜ ಡೈರೆಕ್ಟ್ ಹಿಟ್; ಸ್ಮಿತ್ ರನೌಟ್! :
ಶತಕವೀರ ಸ್ಟೀವನ್ ಸ್ಮಿತ್ ಮತ್ತು 4 ವಿಕೆಟ್ ಕಿತ್ತ ಭಾರತದ ಯಶಸ್ವಿ ಬೌಲರ್ ರವೀಂದ್ರ ಜಡೇಜ ದ್ವಿತೀಯ ದಿನದಾಟದ ಹೀರೋಗಳು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸ್ಮಿತ್ ಮಾತ್ರ ಭಾರತದ ಯಾವುದೇ ಬೌಲರ್‌ಗೂ ಜಗ್ಗದೆ ಮುನ್ನುಗ್ಗುತ್ತಿದ್ದರು. ಅಂತಿಮ ಬ್ಯಾಟ್ಸ್‌ಮನ್ ಹ್ಯಾಝಲ್‌ವುಡ್ ನೆರವಿನಿಂದಲೂ ಇನ್ನಿಂಗ್ಸ್ ವಿಸ್ತರಿಸುವ ಯೋಜನೆಯಲ್ಲಿದ್ದ ಸ್ಮಿತ್, ಕೊನೆಯಲ್ಲಿ ಜಡೇಜ ಅವರ ಡೈರೆಕ್ಟ್ ತ್ರೋ ಒಂದಕ್ಕೆ ರನೌಟ್ ಆಗಿ ನಿರ್ಗಮಿಸುವುದರೊಂದಿಗೆ ಆಸೀಸ್ ಇನ್ನಿಂಗ್ಸ್ ಕೊನೆಗೊಳ್ಳುತ್ತದೆ.
ಡೀಪ್ ಸ್ಕ್ವೇರ್ ಲೆಗ್‌ನಲ್ಲಿದ್ದ ಜಡೇಜ ತಮ್ಮ ಬಲಕ್ಕೆ ಓಡಿ, ಚೆಂಡನ್ನೆತ್ತಿ ರಾಕೆಟ್ ವೇಗದಲ್ಲಿ ಎಸೆದು ಸ್ಟ್ರೈಕರ್ ಎಂಡ್‌ನ ಸ್ಟಂಪ್ ಎಗರಿಸಿದಾಗ “ಸೆಂಚುರಿಯನ್ ಸ್ಮಿತ್’ ಆಗಿನ್ನೂ ಕ್ರೀಸ್ ಮುಟ್ಟಿರಲಿಲ್ಲ. ಎಲ್ಲವೂ ಮಿಂಚಿನ ವೇಗದಲ್ಲಿ ಘಟಿಸಿತ್ತು. ಜಡೇಜ ಅವರ ಈ ಫೀಲ್ಡಿಂಗ್ ಹಾಗೂ ತ್ರೋ, ಗ್ರೇಟ್ ಕಪಿಲ್‌ದೇವ್ ಶೈಲಿಯನ್ನು ನೆನಪಿಸಿದೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದಾರೆ.
“ಇದು ನನ್ನ ಅತ್ಯುತ್ತಮ ಪ್ರಯತ್ನ. 30 ಯಾರ್ಡ್ ಸರ್ಕಲ್ ಹೊರಗಿಂದ ಡೈರೆಕ್ಟ್ ಹಿಟ್ ಮೂಲಕ ಸ್ಟಂಪ್ ಎಗರಿಸಿದ ಈ ಕ್ಷಣವನ್ನು ನಾನು ಯಾವತ್ತೂ ಮರೆಯಲಾರೆ. 3-4 ವಿಕೆಟ್ ಉರುಳಿಸಿದ್ದು ಉತ್ತಮ ಸಾಧನೆಯೇ ಆಗಿದೆ. ಆದರೆ ಈ ರನೌಟ್ ಇವೆಲ್ಲಕ್ಕಿಂತ ಮಿಗಿಲಾದದ್ದು’ ಎಂದು ಸೌರಾಷ್ಟ್ರ ಆಲ್‌ರೌಂಡರ್ ರವೀಂದ್ರ ಜಡೇಜ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಹಿಮ್ಮುಖವಾಗಿ ಓಡಿ ಮ್ಯಾಥ್ಯೂ ವೇಡ್ ಕ್ಯಾಚ್ ಪಡೆದಿದ್ದ ಜಡೇಜ ತಮ್ಮ ಫೀಲ್ಡಿಂಗ್ ಕೌಶಲವನ್ನು ತೆರೆದಿರಿಸಿದ್ದರು.
“ಬಾಜೀರಾವ್’ ಟ್ವೀಟ್ :
ರವೀಂದ್ರ ಜಡೇಜ ಅವರ ಈ ರನೌಟ್ ಪರಾಕ್ರಮವನ್ನು ಮಾಜಿ ಆರಂಭಕಾರ ವಾಸಿಮ್ ಜಾಫರ್ “ಬಾಜೀರಾವ್ ಮಸ್ತಾನಿ’ ಚಿತ್ರದ ಸಂಭಾಷಣೆಯೊಂದರ ಮೂಲಕ ಬಣ್ಣಿಸಿದ್ದಾರೆ.
“ಚೀತೇ ಕೀ ಛಾಲ್, ಬಾಝ್ ಕೀ ನಜರ್ ಔರ್ ಜಡೇಜ ಕೇ ತ್ರೋ ಪರ್ ಸಂದೇಹ್ ನಹೀಂ ಕರ್ತೇ…’ ಎಂದು ಟ್ವೀಟ್ ಮಾಡಿದ್ದಾರೆ (ಚಿರತೆಯ ತಂತ್ರ, ಗಿಡುಗನ ದೃಷ್ಟಿ ಮತ್ತು ಜಡೇಜ ಅವರ ನಿಖರತೆಯನ್ನು ಅನುಮಾನಿಸಬೇಡಿ). “ಬಾಜೀರಾವ್ ಖಡ್ಗದ ಹರಿತವನ್ನು’ ಎಂಬ ಜಾಗದಲ್ಲಿ ಜಾಫರ್ ಸಮಯೋಚಿತ ಬದಲಾವಣೆ ಮಾಡಿ ಜಡೇಜ ಅವರ ಫೀಲ್ಡಿಂಗ್ ವೈಖರಿಯನ್ನು ಬಣ್ಣಿಸಿದ್ದಾರೆ.