ಕ್ರೈಸ್ಟ್ ಚರ್ಚ್: ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಅಂಡರ್ 19 ತಂಡ ಮಂಗಳವಾರ ನಡೆದ ಸೆಮಿ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ಥಾನ ತಂಡವನ್ನು ಹೀನಾಯವಾಗಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೆಬ್ರವರಿ 3 ರಂದು ಪ್ರಶಸ್ತಿಗಾಗಿ ಆಸ್ಟ್ರೇಲಿಯ ವಿರುದ್ಧ ಸೆಣಸಬೇಕಾಗಿದೆ.
ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರಥ್ವಿ ಶಾ ಪಡೆ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್‌ಗಳಿಸಿತು. ನಾಯಕ ಶಾ ಮತ್ತು ಮನ್‌ಜೋತ್ ಕಾಲ್ರಾ ಭದ್ರ ಆರಂಭ ಒದಗಿಸಿಕೊಟ್ಟರು. ಶಾ 41 ಮತ್ತು ಕಾಲ್ರಾ 47 ರನ್‌ಗಳಿಸಿ ಔಟಾದರು. ಆ ಬಳಿಕ ಬಂದ ಶುಭಂ ಗಿಲ್ಲ್ ಭರ್ಜರಿ ಶತಕ ಸಿಡಿಸಿದರು. 102 ರನ್ ಗಳಿಸಿದ ಗಿಲ್ ಅಜೇಯರಾಗಿ ಉಳಿದರು.
ಹಾರ್ವಿಕ್ ದೇಸಾಯಿ 20 , ಅನುಕೂಲ್ ಸುಧಾಕರ್ ರಾಯ್ 33 ರನ್ ಕೊಡುಗೆ ಸಲ್ಲಿಸಿದರು.
273 ರನ್‌ಗಳ ಗುರಿ ಬೆನ್ನಟ್ಟಿದ ಪಾಕ್ ಭಾರತ ಬೌಲರ್‌ಗಳ ಮಾರಕ ದಾಳಿಗೆ ನಲುಗಿ ಕೇವಲ 69 ರನ್‌ಗಳಿಗೆ ಆಲೌಟಾಯಿತು. 29.3 ಓವರ್‌ಗಳ ಒಳಗೆ ಎಲ್ಲಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದರು.
ಭಾರತದ ಪರ ಇಶಾನ್ ಪೊರೆಲ್ 4 ವಿಕೆಟ್ ಪಡೆದು ಗಮನ ಸೆಳೆದರೆ , ಶಿವ್ ಸಿಂಗ್ ಮತ್ತು ರಿಯಾನ್ ಪರಂಗ್ ತಲಾ 2 ವಿಕೆಟ್ ಪಡೆದರು. ಅನುಕೂಲ್ ಮತ್ತು ಅಭಿಷೇಕ್ ಶರ್ಮಾ ತಲಾ 1 ವಿಕೆಟ್ ಪಡೆದರು.