Advertisement
ಒಂದು ಸಂಗತಿಯನ್ನು ನಾವೆಲ್ಲರೂ ಬಹಿರಂಗವಾಗಿ ಒಪ್ಪಿಕೊಳ್ಳಲು ಮುಜುಗರ ಪಡುತ್ತೇವೆ. ಏನದು? ಖ್ಯಾತಿ! ಪ್ರತಿಯೊಬ್ಬರೂ ಒಳಗೊಳಗೇ ತಾವು ಖ್ಯಾತರಾಗಬೇಕು ಎಂದು ಬಯಸುತ್ತಿರು ತ್ತಾರೆ. “ಖ್ಯಾತಿ’ ಎಂಬ ಪದ ನಮ್ಮನ್ನು ಈ ಪಾಟಿ ಆಕರ್ಷಿಸುವುದಕ್ಕೆ ಅದು ನಮಗೆ ಹಲವು ಅನುಕೂಲ ತಂದುಕೊಡುತ್ತದೆ ಎಂಬ ಭಾವನೆಯೇ ಕಾರಣ. ನಮ್ಮ ಪ್ರಕಾರ ಖ್ಯಾತನಾಮರ ಜೀವನ ಹೇಗಿರುತ್ತದೆ? ಅವರು ಎಲ್ಲೇ ಹೋಗಲಿ ಜನರಿಗೆ ಅವರ ಬಗ್ಗೆ ತಿಳಿದಿರುತ್ತದೆ, ತಾವು ಯಾರೆಂದು ವಿವರಿಸಬೇಕಾದ ಅಗತ್ಯವೇ ಇರುವುದಿಲ್ಲ. ಅಪರಿಚಿತರೂ ನಗುಮೊಗದೊಂದಿಗೆ ಅವರನ್ನು ಮಾತನಾಡಿಸುತ್ತಾರೆ, ಮೆಚ್ಚಿ ಕೊಂಡಾಡುತ್ತಾರೆ, ಆಟೋಗ್ರಾಫ್-ಸೆಲ್ಫಿ ತೆಗೆದುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಖ್ಯಾತ ವ್ಯಕ್ತಿಗಳ ಮನಸ್ಸು ನೋಯಿಸಲು ಯಾರೂ ಮುಂದಾಗುವುದಿಲ್ಲ. ನೀವು ಪ್ರಖ್ಯಾತ ವ್ಯಕ್ತಿಯಾದರೆ, ನಿಮಗೆದುರುವ ಚಿಕ್ಕ ತೊಂದರೆಗಳೂ ದೊಡ್ಡ ರೂಪ ಪಡೆಯುತ್ತವೆ. “ಈ ಹೊಟೆಲ್ ರೂಂ ಸರಿಯಿಲ್ಲ’ ಎಂದು ನೀವೇನಾದರೂ ದೂರಿದಿರೆಂದರೆ, ಹೊಟೆಲ್‌ನ ಇಡೀ ಸಿಬ್ಬಂದಿ ಗಾಬರಿಯಾಗಿ ಲಗುಬಗೆಯಿಂದ ಅದನ್ನು ಸ್ವತ್ಛಗೊಳಿಸಲು ಮುಂದಾಗುತ್ತಾರೆ! ನಿಮ್ಮನ್ನು ಮೆಚ್ಚಿಸುವುದೇ ಸುತ್ತಲಿರುವವರ ಕೆಲಸವಾಗಿಬಿಡುತ್ತದೆ.
Related Articles
ಸಿನೆಮಾ ನಟರ ಸಂಬಂಧಗಳ ಬಗ್ಗೆ ಮಾಧ್ಯಮಗಳಲ್ಲಿ ಕಾರ್ಯಕ್ರಮ ಪ್ರಕಟವಾದಾಗಲೆಲ್ಲ ಅದನ್ನು ನೋಡುವವರು “ಅಯ್ಯೋ ಸಿನೆಮಾದವರ ಹಣೆಬರಹ ನಮಗೆ ಗೊತ್ತಿಲ್ಲವಾ, ಅದೇನು ಜೀವನಾನೋ?’ ಎಂದು ವಾದಿಸುತ್ತಾರೆ (ಒಳಗೊಳಗೆ ಆ ಜೀವನವನ್ನು ಅವರೂ ಬಯಸುತ್ತಿರುತ್ತಾರೆ ಬಿಡಿ). ಅಂದರೆ ತಮಗಿಂತ “ಆ ವ್ಯಕ್ತಿ’ ದೊಡ್ಡವನಲ್ಲ ಎನ್ನುವ ಸಮಾಧಾನವಷ್ಟೇ ಈ ವಾದದ ಹಿಂದಿರುತ್ತದೆ.
Advertisement
ಸತ್ಯವೇನೆಂದರೆ “ಪ್ರಖ್ಯಾತಿ’ಜನರನ್ನು ಹೆಚ್ಚು ಅಸುರಕ್ಷಿತರನ್ನಾಗಿಸುತ್ತದೆ. ಖ್ಯಾತನಾಮರೆಡೆಗೆ ಜನರು, ಮಾಧ್ಯಮಗಳು ತೂರಿ ಬಿಡುವ ಕೊಂಕು ನುಡಿಗಳು, ಕಟ್ಟುಕಥೆಗಳು ಅಪಾರ. ಆತ ತನ್ನ ಚಾರಿತ್ರÂವಧೆಯಾಗುತ್ತಿರುವುದರ ಬಗ್ಗೆ ಕೇರ್ ಮಾಡುವುದಿಲ್ಲ, ತಮ್ಮ ಮಾತನ್ನು ಗಮನಿಸುವುದಿಲ್ಲ ಎಂದೇ ಎಲ್ಲರೂ ಭಾವಿಸುತ್ತಾರೆ. ಸತ್ಯವೇನೆಂದರೆ, ಚುಚ್ಚುನುಡಿಗಳು ಖ್ಯಾತರನ್ನು ಹೆಚ್ಚಾಗಿಯೇ ಚುಚ್ಚುತ್ತವೆ. ತಾವು ಎತ್ತರಕ್ಕೇರಿದರೂ ಅರ್ಥಮಾಡಿಕೊಳ್ಳುವವ ರಿಲ್ಲ ಎನ್ನುವ ನೋವು ಅವರನ್ನು ಕಾಡುತ್ತದೆ. ಈ ನೋವನ್ನು ಆತ ಬಹಿರಂಗಪಡಿಸಿದನೆಂದರೆ ಆತನ ಮೇಲೆ ಜೋಕುಗಳು ಹುಟ್ಟಿಕೊಳ್ಳುತ್ತವೆ! ಇನ್ನು ಸೋಷಿಯಲ್ ಮೀಡಿಯಾ ಯುಗ ಆರಂಭವಾದ ನಂತರದಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಸೋಷಿಯಲ್ ಮೀಡಿಯಾ ಮೂಲಕವೇ ವ್ಯಕ್ತಿಯೊಬ್ಬ ಇಂದು ಫೇಮಸ್ ಆಗಿಬಿಡಬಹುದು. ಆದರೆ ಹಿಂದೆ ಹಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳಷ್ಟೇ ಎದುರಿಸುತ್ತಿದ್ದ ದ್ವೇಷ, ಕೊಂಕು ನುಡಿಗಳನ್ನೂ ಆತ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮಲ್ಲಿನ ನ್ಯೂನತೆಗಳ ಬಗ್ಗೆ ಬೇಸರವಿರು ತ್ತದೆ. ತಾವು ಓದಲಿಲ್ಲ, ನೋಡಲು ಅಷ್ಟೇನೂ ಚೆನ್ನಾಗಿಲ್ಲ, ಕುಳ್ಳಗಿದ್ದೇನೆ, ತೀರಾ ದಪ್ಪಗಿದ್ದೇನೆ ಎನ್ನುವುದು ತಿಳಿದಿರುತ್ತದೆ. ವ್ಯಕ್ತಿಯೊಬ್ಬ ಖ್ಯಾತನಾದ ತಕ್ಷಣ ಈ ನ್ಯೂನತೆಗಳನ್ನು ಜನರು ಎತ್ತಿ ತೋರಿಸ ಲಾರಂಭಿಸುತ್ತಾರೆ. ಹೀಗಾಗೇ ಖ್ಯಾತಿಯನ್ನು ಬಯಸುತ್ತಿರುವ ಪ್ರತಿಯೊಬ್ಬರೂ ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳ ಬೇಕಿದೆ. ಫೇಮ್ ಎನ್ನುವುದು ಜನರ ಗಮನವನ್ನು ನಿಮ್ಮತ್ತ ಸೆಳೆಯುವಲ್ಲಿ ಸಹಕರಿಸುತ್ತದೆಯೇ ಹೊರತು, ಅವರ ಪ್ರೀತಿ- ಸಹಾನುಭೂತಿಯನ್ನು ನಿಮಗೆ ತಂದುಕೊಡುವುದಿಲ್ಲ.
ಖ್ಯಾತರಾಗಬೇಕೆಂಬ ಗುಂಗಿನಿಂದ ಹೊರಬರುವುದೇ ನಿಜವಾದ ಬುದ್ಧಿವಂತಿಕೆ. ಖ್ಯಾತಿಯ ಹಿಂದಿರುವ ಉದ್ದೇಶವೇನು? ಜನರಿಂದ ಮೆಚ್ಚುಗೆ ಗಳಿಸಬೇಕು, ಎಲ್ಲರೂ ತನ್ನನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವುದೇ ಅಲ್ಲವೇ? ಇದು ಸೆಲೆಬ್ರಿಟಿ ಯಾದರೆ ಮಾತ್ರ ಸಿಗುತ್ತದೆ ಎನ್ನುವ ಹುಸಿ ನಂಬಿಕೆಯನ್ನು ನಾವು ಕೈಬಿಡಬೇಕು. ನಿಜವಾದ ಮೆಚ್ಚುಗೆ, ಪ್ರೀತಿ, ಸಹಾನುಭೂತಿ ನಮ್ಮ ಆಪ್ತ ವಲಯದಿಂದ ಮಾತ್ರ ಸಿಗುತ್ತದೆ, ಲಕ್ಷಾಂತರ ಅಪರಿಚಿತರಿಂದಲ್ಲ. ಅದಾಗಲೇ ಪ್ರಖ್ಯಾತರಾಗಿರುವವರಿಗೆ ಒಂದು ಸಲಹೆ. ನಿಮ್ಮ ತಲೆ ಕೆಡಬಾರದೆಂದರೆ ಜಗತ್ತು ನಿಮ್ಮ ಬಗ್ಗೆ ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಳ್ಳಲು ನಿರಾಕರಿಸಿ. ಇದು ನಿಮ್ಮ ಬಗೆಗಿನ ಕೆಟ್ಟ ನುಡಿಗಳಿಗಷ್ಟೇ ಅಲ್ಲ, ಒಳ್ಳೆಯ ನುಡಿಗಳಿಗೂ ಅನ್ವಯವಾಗುತ್ತದೆ. ಬೇಸರದ ಸಂಗತಿಯೆಂದರೆ ಈ ವಿಷಯದ ಬಗ್ಗೆ ಯಾವ ದೇಶದಲ್ಲೂ ಜಾಗೃತಿಯಿಲ್ಲ. ಇಂದು ಅನೇಕ ಜನರು(ಮುಖ್ಯವಾಗಿ ಯುವ ಜನತೆ) ಖ್ಯಾತಿಯನ್ನು ಬಯಸುತ್ತಿದ್ದಾರೆ. ನೋವಿನ ಜೀವನಕ್ಕೆ ಪ್ರಖ್ಯಾತಿಯೇ ಪರಿಹಾರ ಎಂದವರು ಭಾವಿಸಿದ್ದಾರೆ. ಅವರ ಭಾವನೆಯನ್ನು ಅಣುಕಿಸುವ ಮುನ್ನ, ಅವರು ಹೀಗೆ ಭಾವಿಸುವುದಕ್ಕೆ ಕಾರಣವನ್ನು ನಾವು ಗುರುತಿಸಬೇಕು. ಯುವ ಜನರಲ್ಲಿ ಈ ರೀತಿಯ ಭಾವನೆ ಮೂಡುವುದಕ್ಕೆ ನಮ್ಮ ನಾಗರಿಕ ಸಮಾಜದ ವೈಫಲ್ಯವೇ ಕಾರಣ. ಎದುರಿನ ವ್ಯಕ್ತಿಗೆ ನಿಜಕ್ಕೂ ಸಲ್ಲಬೇಕಾದ ಗೌರವವನ್ನು, ಸಿಗಬೇಕಾದ ಪ್ರೀತಿಯನ್ನು ಕೊಡಲು ನಾವು ನಿರಾಕರಿಸುತ್ತಿದ್ದೇವೆ. ಸಾಮಾನ್ಯ ಬದುಕು ಸುಖಮಯವಾಗುತ್ತಿಲ್ಲ ಎನ್ನುವುದೇ ಖ್ಯಾತಿಯೆಂಬ ಅಸಾಮಾನ್ಯ ಬಯಕೆಗೆ ಕಾರಣ. ವ್ಯಕ್ತಿಯೊಬ್ಬನ ಜೀವನ ಯಶಸ್ವಿಯೋ ಅಲ್ಲವೋ ಎನ್ನುವುದನ್ನು ಆತ ಖ್ಯಾತನೋ ಅಲ್ಲವೋ ಎನ್ನುವುದರ ಮೇಲೆಯೇ ಅಳೆಯುವ ಮನಸ್ಥಿತಿ ಇಂಥ ಸಮಸ್ಯೆಯನ್ನು ಹುಟ್ಟುಹಾಕಿದೆ.
ಈ ಸಮಸ್ಯೆಗೆ ಪರಿಹಾರವೇನು? ಜನರನ್ನು ಖ್ಯಾತರಾಗಲು ಪ್ರೇರೇಪಿಸುವುದಂತೂ ಅಲ್ಲ. ಬದಲಾಗಿ, ಎದುರಿನ ವ್ಯಕ್ತಿಯೆಡೆಗೆ ಪ್ರೀತಿ, ಗಮನ, ಮೆಚ್ಚುಗೆ ಕೊಡುವಂಥ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳುವುದು. ಮನೆಯಲ್ಲಿ, ಕಚೇರಿಯಲ್ಲಿ, ಸಮುದಾಯದಲ್ಲಿ, ಎಲ್ಲಾ ಆದಾಯದ ವರ್ಗಗಳಲ್ಲಿ ಈ ಮನಸ್ಥಿತಿ ಬೆಳೆಯಬೇಕು. ಆಗ ಮಾತ್ರ ನಮ್ಮ ಸಮಾಜವು “ಖ್ಯಾತಿ ಬಂದರೆ ಕರುಣೆ, ಮೆಚ್ಚುಗೆ, ಪ್ರೀತಿ ಸಿಗುತ್ತದೆ’ ಎಂಬ ಹುಸಿ ನಂಬಿಕೆಯಿಂದ ಹೊರಬರುತ್ತದೆ. ಅಂಥ ಸಮಾಜ ಮಾತ್ರವೇ ಆರೋಗ್ಯವಂತವಾಗಬಲ್ಲದು. – ಅಲೆನ್ ಬಾಟನ್