Advertisement

ತಾಪಮಾನ ಏರಿಕೆ, ಕರಾವಳಿಯಲ್ಲಿ ಹೆಚ್ಚುತ್ತಿರುವ ಸೆಕೆ

09:48 PM Mar 31, 2019 | sudhir |

ಉಡುಪಿ: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಏರುತ್ತಿದೆ ಎಂದು ವರದಿ ಬರುತ್ತಿರುವಾಗ ಇದರ ಅನುಭವ ಕರಾವಳಿಗೂ ಆಗುತ್ತಿದೆ. ಒಂದು ವಾರದಿಂದ ಕರಾವಳಿಯಲ್ಲಿ ವಿಪರೀತ ಸೆಕೆ ಅನುಭವವಾಗುತ್ತಿದೆ. ಮಾ. 29ರಂದು ಉಡುಪಿಯಲ್ಲಿ 34.4 ಡಿಗ್ರಿ ಮತ್ತು ಮಂಗಳೂರಿನಲ್ಲಿ 38.5 ಡಿಗ್ರಿ ಉಷ್ಣಾಂಶ, ಮಾ. 30ರಂದು ಉಡುಪಿಯಲ್ಲಿ 34.8 ಡಿಗ್ರಿ ಮತ್ತು ಮಂಗಳೂರಿನಲ್ಲಿ 33.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮಾ. 30ರಂದು ಪುತ್ತೂರಿನಲ್ಲಿ ಸ್ವಲ್ಪ ಮಳೆಯಾಗಿರುವುದರಿಂದ ದ.ಕ. ಜಿಲ್ಲೆಯ ಉಷ್ಣಾಂಶ ಸ್ವಲ್ಪ ಕಡಿಮೆಯಾಗಿದೆ.

Advertisement

ಉಡುಪಿಯಲ್ಲಿ ಹೋದ ವರ್ಷ ಗರಿಷ್ಠ ಉಷ್ಣಾಂಶ 35.8 ಡಿಗ್ರಿ ದಾಖಲಾಗಿದ್ದರೆ ಈ ಬಾರಿ ಮಾ. 22ರಂದು 35 ಡಿಗ್ರಿ ಉಷ್ಣಾಂಶ ದಾಖಲಾದದ್ದು ಅತಿ ಹೆಚ್ಚು. ಮಂಗಳೂರಿನಲ್ಲಿ ಹೋದ ವರ್ಷ ಗರಿಷ್ಠ 39 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. 2017ರಲ್ಲಿ ಉಡುಪಿಯಲ್ಲಿ 36 ಡಿಗ್ರಿ, 2016ರಲ್ಲಿ 36.3 ಡಿಗ್ರಿ, 2015ರಲ್ಲಿ 36.5 ಡಿಗ್ರಿ, 2014ರಲ್ಲಿ 35.2 ಡಿಗ್ರಿ ಉಷ್ಣಾಂಶ ದಾಖಲಾದದ್ದು ಅತಿ ಹೆಚ್ಚು.

ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಹಗಲಿನಲ್ಲಿ ಬೆವರು ಸುರಿಯುತ್ತದೆ. ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದಲೇ ದೇಹದಲ್ಲಿರುವ ನೀರಿನ ಅಂಶವನ್ನು ಹೊರಹಾಕುತ್ತದೆ. ವಾಸ್ತವದಲ್ಲಿ ಉಷ್ಣದ ಅಂಶ ಹೆಚ್ಚುವುದಿಲ್ಲ, ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗಿ ಈ ಅನುಭವ ಆಗುತ್ತದೆ ಎಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ ಗ್ರಾಮೀಣ ಕೃಷಿ ಹವಾಮಾನ ಮುನ್ಸೂಚನಾ ಘಟಕದ ತಾಂತ್ರಿಕ ಅಧಿಕಾರಿ ರಂಜಿತ್‌ ಟಿ.ಎಚ್‌. ಹೇಳುತ್ತಾರೆ.

ಸಮುದ್ರದ ಮೇಲ್ಮೆ„ಯಲ್ಲಿ ಹಗಲಿನಲ್ಲಿ ತಾಪಮಾನ ಜಾಸ್ತಿಯಾಗಿ ಆ ಬಿಸಿ ಗಾಳಿ ಭೂಮಿ ಕಡೆಗೆ ಬೀಸುತ್ತದೆ. ರಾತ್ರಿ ವೇಳೆ ಭೂಮಿ ಕಡೆಯಿಂದ ಸಮುದ್ರದ ಕಡೆಗೆ ಗಾಳಿ ಬೀಸುತ್ತದೆ. ಪೆಸಿಫಿಕ್‌ ಸಾಗರದಲ್ಲಿ ಒಂದೆರಡು ಡಿಗ್ರಿ ಉಷ್ಣಾಂಶ ಜಾಸ್ತಿಯಾದರೂ ಅರಬ್ಬಿ ಸಮುದ್ರದ ಪರಿಸರದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಅದರ ಪರಿಣಾಮ ಕರಾವಳಿ ಪ್ರದೇಶದ ಮೇಲೆ ಆಗುತ್ತದೆ.ಎಲ್ಲೆಂದರಲ್ಲಿ ನಾಶವಾಗುತ್ತಿರುವ ಗಿಡಮರಗಳು, ಹೆಚ್ಚುತ್ತಿರುವ ಕಾಂಕ್ರಿಟ್‌ ಕಟ್ಟಡ, ಕಾಂಕ್ರಿಟ್‌ ರಸ್ತೆಗಳು ಏರುಗತಿಯಲ್ಲಿರುವ ಉಷ್ಣಾಂಶಕ್ಕೆ ಇಂಬು ಕೊಡುತ್ತದೆ.

ವೈದ್ಯರ ಸಲಹೆ
4ಅನಗತ್ಯವಾಗಿ ಬಿಸಿಲಿಗೆ ಹೊರಹೋಗಬಾರದು. ಶುದ್ಧ ಅಥವಾ ಕಾದು ಆರಿದ ನೀರನ್ನು ಧಾರಾಳವಾಗಿ ಕುಡಿಯಬೇಕು. ಒಂದು ಲೋಟ ನೀರಿಗೆ ಅರ್ಧ ಗ್ರಾಮ್‌ನಷ್ಟು ಉಪ್ಪನ್ನು ಹಾಕಿ ಸೇವಿಸಿದರೆ ಉತ್ತಮ. ಮಜ್ಜಿಗೆ ಕುಡಿಯುವುದು ಸೂಕ್ತ.

Advertisement

4ನಾಲ್ಕು ಗಂಟೆಗೊಮ್ಮೆ ಮೂತ್ರ ಹೋಗಬೇಕು. ಒಂದು ವೇಳೆ ಹೀಗೆ ಮೂತ್ರ ವಿಸರ್ಜನೆಯಾಗದೆ ಇದ್ದರೆ ನೀರಿನ ಅಂಶ ಕಡಿಮೆಯಾಗಿದೆ ಎಂದು ಅರ್ಥ. ಆದ್ದರಿಂದ ಇದಕ್ಕೆ ಸರಿಯಾಗಿ ನೀರಿನ ಸೇವನೆ ಅಗತ್ಯ.

4 ಹೃದಯ, ಕಿಡ್ನಿ ಸಮಸ್ಯೆ ಇರುವವರು ಮೂತ್ರ ವಿಸರ್ಜನೆಯಾಗಲು ಮಾತ್ರೆ ತೆಗೆದುಕೊಳ್ಳುತ್ತಾರೆ. ಇಂತಹವರು ಸಾಧ್ಯವಾದಷ್ಟು ಬಿಸಿಲಿಗೆ ಹೋಗದೆ ಇದ್ದರೆ ಉತ್ತಮ. ರೋಗಿಗಳು, ಪ್ರಾಯದವರಿಗೆ ಬಾಯಾರಿಕೆ ಆಗುವುದು ಗೊತ್ತಾಗುವುದಿಲ್ಲ. ಇವರಿಗೆ ನೀರು ಹೆಚ್ಚು ಕುಡಿದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಇವರು ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯಬೇಕು ಮತ್ತು ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು.

4 ಸುಸ್ತು, ನಿತ್ರಾಣ ಜಾಸ್ತಿಯಾದರೆ ವೈದ್ಯರನ್ನು ಸಂಪರ್ಕಿಸಬೇಕು.
4 ಗೋಬಿ ಮಂಚೂರಿ, ಚೈನೀಸ್‌ ಫ‌ುಡ್‌ ಇತ್ಯಾದಿ ಖಾರ, ಮಸಾಲೆ ಭರಿತ ಆಹಾರ ಪದಾರ್ಥಗಳನ್ನು ವರ್ಜಿಸಿ ಸಾತ್ವಿಕ ಆಹಾರ ಸ್ವೀಕರಿಸಬೇಕು.
– ಡಾ| ರವಿರಾಜ ಆಚಾರ್ಯ,
ಮೆಡಿಸಿನ್‌ ವಿಭಾಗದ ವೈದ್ಯರು, ಕೆಎಂಸಿ, ಮಣಿಪಾಲ.

ಅಕಾಲಿಕ ಮಳೆ ಏಕೆ ಬರುತ್ತದೆ?
ಕಳೆದ ನಾಲ್ಕೈದು ದಿನಗಳಿಂದ ಸಮುದ್ರದ ಕಡೆಯಿಂದ ಬಿಸಿ ಗಾಳಿ ಭೂಮಿಯತ್ತ ಬೀಸಿ ಭೂಮಿ ಬಿಸಿಯಾಗಿದೆ. ಭೂಮಿಯಲ್ಲಿ ಒಣ ಹವೆ ಉಂಟಾದ ಕಾರಣದಿಂದ ಆಗಸದಲ್ಲಿ ಹೋಗುವ ಮೋಡಗಳನ್ನು ಭೂಮಿ ಆಕರ್ಷಿಸುತ್ತದೆ. ಇದು ಮುಂಗಾರು ಪೂರ್ವ ನೈಸರ್ಗಿಕ ಕ್ರಿಯೆ. ಹೀಗಾಗಿ ಅಲ್ಲಲ್ಲಿ ಮಳೆ ಬರುತ್ತದೆ.
-ರಂಜಿತ್‌ ಟಿ.ಎಚ್‌., ತಾಂತ್ರಿಕ ಅಧಿಕಾರಿ, ಗ್ರಾಮೀಣ ಕೃಷಿ ಹವಾಮಾನ ಮುನ್ಸೂಚನಾ ಘಟಕ, ಬ್ರಹ್ಮಾವರ

ಕುಡಿಯುವ ನೀರಿನ ಸಮಸ್ಯೆ
ಉಡುಪಿ, ಮಂಗಳೂರು ಸೇರಿದಂತೆ ನಗರ- ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಉಡುಪಿ ನಗರದಲ್ಲಿ ಮೂರು ದಿನಗಳಿಗೊಮ್ಮೆ ನೀರು ಪೂರೈಸುವುದಾಗಿ ನಗರಸಭೆ ಪ್ರಕಟಿಸಿದೆ. ಆದರೆ ಮಣಿಪಾಲ ಸಮೀಪದ ಸರಳೆಬೆಟ್ಟಿನ ಗಣೇಶ ಭಾಗ್‌ನಂತಹ ಎತ್ತರದ ಪ್ರದೇಶಗಳಲ್ಲಿ ಐದು ದಿನವಾದರೂ ನೀರಿಲ್ಲ
-ಪ್ರಮೀಳಾ ಪೂಜಾರಿ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next