ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, 35ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಆಚೆ ಬರಲು ಜನಸಮಾನ್ಯರು ಹೆದರುತ್ತಿದ್ದಾರೆ.
ತಾಲೂಕಿನಲ್ಲಿ ಸೂರ್ಯನ ತಾಪಮಾನ ಹೆಚ್ಚಾಗುತ್ತಿದ್ದು, ಕಟ್ಟಡ ಕಾರ್ಮಿಕರು ಸೇರಿದಂತೆ, ಕೂಲಿ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಕಾರ್ಯ ನಡೆಸಲು ತೀವ್ರ ಕಷ್ಟ ಅನುಭವಿಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷದ ಬೇಸಿಗೆಯ ತಾಪಮಾನ ಹೆಚ್ಚಾಗಿರುವುದು ಅಂತಂಕ ಮೂಡಿಸಿದೆ.
ಜಾನುವಾರುಗಳಿಗೆ ಮೇವಿನ ಸಮಸ್ಯೆ: ತಾಲೂಕಿನಲ್ಲಿ ರಾಗಿ ಬೆಳೆ ಬಹುತೇಕ ಕೈಕೊಟ್ಟಿದ್ದು, ರೈತರು ನಂಬಿಕೊಂಡಿದ್ದ ಜಾನುವಾರುಗಳಿಗೆ ರಾಗಿ ಹುಲ್ಲು ಇಲ್ಲವಾಗಿದೆ. ತೋಟಗಳಲ್ಲಿ ಬೆಳೆಯುವ ನೇಪಿಯಾರ್, ಜೋಳ ಕೊಳವೇ ಬಾವಿಯಲ್ಲಿ ನೀರಿಲ್ಲದೇ ಇವು ಕನಸಾಗಿದೆ. ರೈತರಿಗೆ ಜಾನುವಾರಗಳಿಗೆ ಮೇವು ಒದಗಿಸುವುದೇ ಕಷ್ಟವಾಗಿದೆ.
ವೈದ್ಯರ ಸಲಹೆ: ಇತ್ತೀಚಿಗೆ ಬಿಸಿಲಿನ ಪ್ರಖರತೆ ಕಾಣಿಸಿಕೊಳ್ಳತ್ತಿದ್ದು, ಸೂರ್ಯಾಘಾತ ಮತ್ತು ಉಷ್ಣಾಘಾತ ಆಗುವ ಸಾಧ್ಯತೆಗಳಿರುವ ಬಗ್ಗೆ ಅನೇಕ ವೈದ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ ಬಿಸಿಲಿನ ವೇಳೆ ಕೊಡೆ ಬಳಸುವುದು, ಸಾಧ್ಯವಾಗುವಷ್ಟು ಹೆಚ್ಚು ನೀರು ಕುಡಿಯುವುದು, ದ್ರವ ಆಹಾರ ಪದಾರ್ಥ ಸೇವಿಸುವುದು, ಎಳೆ ನೀರು, ಕಲ್ಲಂಗಡಿ ಹಣ್ಣು ಸೇವಿಸುವುದು, ಸಾಧ್ಯವಾದಷ್ಟು ಬಳಿ ಬಟ್ಟೆ ಧರಿಸುವುದು, ಮೊಸರು, ಮಜ್ಜಿಗೆಗೆ ಆದ್ಯತೆ ನೀಡಲು ಸಲಹೆ ನೀಡಿದ್ದಾರೆ.
ನೀರಿನ ವ್ಯವಸ್ಥೆ ಕಲ್ಪಿಸಿ: ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಪಾರ್ಕ್‌ಗಳು ಸೇರಿದಂತೆ ದೂರದ ಊರುಗಳಿಂದ ಬಂದಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪುರಸಭೆ ವತಿಯಿಂದ ಅಥವಾ ತಾಲೂಕು ಆಡಳಿತದ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹಳ್ಳಿಗಳಲ್ಲಿ ಜಾನುವಾರುಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನಲ್ಲಿ ಗ್ರಾಪಂ ಪಿಡಿಒಗಳ ವರದಿಯ ಮೇಲೆ ನೀರಿನ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದ ಕಡೆ ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಕಿರಣ್ ತಿಳಿಸುತ್ತಾರೆ.