Advertisement

ಹೆಚ್ಚುತ್ತಿರುವ ಬೇಸಗೆ ಬೇಗೆ: ಬರಡಾಗುತ್ತಿರುವ ಜೀವನದಿಗಳು

01:39 AM Apr 09, 2019 | Team Udayavani |

ಕಾಸರಗೋಡು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಅಧಿಕವಾಗುತ್ತಿದ್ದು, ಇದರ ಪರಿಣಾಮದಿಂದ ಕಾಸರಗೋಡು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಜೀವನದಿಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ಹೊಳೆಯ ನೀರು ಬತ್ತುತ್ತಿರುವುದರಿಂದ ಕಾಸರಗೋಡು ನಗರ ಮತ್ತು ಪರಿಸರದ ಐದು ಗ್ರಾಮ ಪಂಚಾಯತ್‌ಗಳಲ್ಲಿನ ಜನರು ಉಪ್ಪು ನೀರು ಕುಡಿಯಬೇಕಾದ ಪ್ರಸಂಗ ಎದುರಾಗಿದೆ.

Advertisement

ಬಿಸಿಲ ಬೇಗೆಯಿಂದಾಗಿ ಕಾಸರಗೋಡು ಜಿಲ್ಲೆಯ ಜನರು ಮಳೆಗಾಗಿ ಪರಿತಪಿಸುವಂತಾಗಿದೆ. ಪಾರಂಪರಿಕ ನದಿ, ಹೊಳೆ, ಕೆರೆ, ಬಾವಿ, ತೋಡು, ನೀರಿನ ಕಟ್ಟಗಳ ಜಲಮಟ್ಟ ಅಲ್ಲದೆ ಕೊಳವೆಬಾವಿಗಳ ಜಲಮಟ್ಟ, ಅಂತರ್ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ.
ಹಿಂದೆಲ್ಲಾ ಸಾಮಾನ್ಯವಾಗಿ 250ರಿಂದ 350 ಅಡಿ ಆಳದಲ್ಲಿ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿತ್ತು. ಅದೀಗ ಸರಾಸರಿ 450ರಿಂದ 550 ಅಡಿ ಆಳಕ್ಕೆ ಕುಸಿದಿದೆ. ಭೂಮಿಯಲ್ಲಿ ಅಂತರ್ಜಲ ತೀವ್ರವಾಗಿ ಇಳಿಮುಖವಾಗುತ್ತಿರುವುದು ಒಂದೆಡೆ ಯಾದರೆ, ಇನ್ನೊಂದೆಡೆ ಬಿಸಿ ಗಾಳಿ ಬೀಸುತ್ತಿರುವುದು ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ. ಯಾಕೆಂದರೆ ಬಿಸಿಲಿನ ಉರಿಗೆ ಭೂಮಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಕೃಷಿ ಕ್ಷೇತ್ರ ಸಹಿತ ಕುಡಿಯುವ ನೀರು ಯೋಜನೆಗೂ ನೀರು ಹೊಂದಿಸುವುದು ಜಿಲ್ಲೆಯ ಅನೇಕ ಕಡೆಗಳಲ್ಲಿ ಸವಾಲಾಗಿ ಪರಿಣಮಿಸಿದೆ.

ಬಿಸಿಲ ಬೇಗೆಯಿಂದಾಗಿ ಅಡಿಕೆ ಸಹಿತ ಇನ್ನಿತರ ಕೃಷಿಕರು ನೀರಿಲ್ಲದೆ ಕೃಷಿ ಬೆಳೆ ಕರಟಬಹುದೆಂಬ ಆತಂಕದಲ್ಲಿದ್ದಾರೆ.

ಇನ್ನು ಹಲವೆಡೆಗಳಲ್ಲಿ ತೋಟಗಳಿಗೆ ನೀರು ಸಿಂಪಡಣೆಯನ್ನು ಅಡಿಕೆ ಮರ, ತೆಂಗಿನ ಮರ ಹಾಗೂ ಬಾಳೆ ಗಿಡಗಳ ಬುಡಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಅನೇಕ ಮನೆಗಳಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಕೇವಲ ಒಂದೆರಡು ಅಡಿಗಳಿಗಷ್ಟೇ ನೀರು ಸೀಮಿತವಾಗಿದ್ದು, ತಳಮಟ್ಟದ ಕೆಸರು ನೀರು ಕುಡಿದು ಆರೋಗ್ಯದ ಸಮಸ್ಯೆಯ ಭೀತಿಯನ್ನೆದುರಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗುವ ಸಾಧ್ಯತೆಗಳಿದ್ದು, ನೀರಿನ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಬರಡಾಗುತ್ತಿರುವ ನದಿ, ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳ ತೋಡು, ಹೊಳೆಗಳು ಬತ್ತಿ ಹೋಗಲಾರಂಭಿಸಿವೆ. ಹನಿ ನೀರಿಲ್ಲದೆ ಹೆಚ್ಚಿನ ನದಿ, ತೊರೆಗಳು ಬಯಲಿನಂತಾಗಿದ್ದು, ಕಳೆದ 25 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ಈ ವರ್ಷ ದಾಖಲಾಗಿರುವುದರಿಂದ ಈ ಬೆಳವಣಿಗೆ ನಡೆದಿದೆ.

ಮಂಜೇಶ್ವರ ಮಂಡಲದ ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ, ಕುಂಬಳೆ, ಪುತ್ತಿಗೆ, ಎಣ್ಮಕಜೆ ಗ್ರಾಮ ಪಂಚಾಯತ್‌ಗಳ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಭೀಕರವಾಗಿ ಕಾಡುತ್ತಿದೆ. ಕಾಸರಗೋಡು ತಾಲೂಕಿನ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಮಳೆಗಾಗಿ ಆಗಸವನ್ನು ನೋಡುವ ಪರಿಸ್ಥಿತಿಗೆ ಕಾರಣವಾಗಿದೆ.

Advertisement

ಈ ಮಧ್ಯೆ ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಸಹಿತ ಸುತ್ತಮುತ್ತಲಿನ ಹಲವೆಡೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉಪ್ಪಳ ಪತ್ವಾಡಿ ಹೊಳೆಯಲ್ಲಿ ಈ ವರ್ಷ ಈ ಹಿಂದೆ ಎಂದೂ ಸಂಭವಿಸದಷ್ಟು ಕೆಳಮಟ್ಟಕ್ಕೆ ನೀರು ಕುಸಿದಿದೆ. ಇದರಿಂದಾಗಿ ಉಪ್ಪಳ ಪತ್ವಾಡಿ ನದಿ ದಂಡೆಗಳ ನಿವಾಸಿಗಳು ಕೂಡ ಸಾಕಷ್ಟ್ರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಾರಿ ಬಿಸಿಲಿನ ತಾಪಮಾನ ಅಧಿಕ ಇರುವು ದರಿಂದ ಈ ವರ್ಷದ ಬೇಸಗೆಯು ಉರಿ ಬೇಗುದಿಗೆ ಕಾರಣವಾಗುತ್ತಿದೆ. ಈ ನಡುವೆ ಜಿಲ್ಲೆ ನದಿಗಳಲ್ಲಿ ನೀರು ಬತ್ತಿ ಹೋಗಲು ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆ ಮಾತ್ರವಲ್ಲದೆ ಕೇರಳ-ಕರ್ನಾಟಕ ಗಡಿ ಭಾಗಗಳಲ್ಲೂ ಈ ಬಾರಿ ನೀರಿಗೆ ತತ್ತಾÌರ ಕಂಡುಬಂದಿದೆ. ಅತಿ ಹೆಚ್ಚು ನೀರಿನ ಆಶ್ರಯ ಇರುವ ಕೆಲವು ಪ್ರದೇಶಗಳಲ್ಲಿ ನದಿ, ಕೆರೆಗಳು ಈಗಾಗಲೇ ಬತ್ತಿಹೋಗಿವೆ. ಕರ್ನಾಟಕ ಗಡಿ ಪ್ರದೇಶವಾದ ಬಾಯಾರು ಸಮೀಪದ ಪದ್ಯಾಣ ಪರಿಸರದಿಂದ ಆರಂಭಗೊಂಡು ಪೈವಳಿಕೆ, ಕಳಾಯಿ, ಬಾಯಿಕಟ್ಟೆ, ಬೇಕೂರು ಹಾಗೂ ಉಪ್ಪಳ ಪತ್ವಾಡಿ ಪರಿಸರಗಳಲ್ಲೂ ತೀವ್ರ ಜಲಕ್ಷಾಮ ತಲೆದೋರಿದೆ.

ನೀರಿಲ್ಲದೆ ಬಯಲಾಗಿ ಪರಿವರ್ತಿತವಾದ ಹೊಳೆಗಳು
ಆನೆಕಲ್ಲು ಗಡಿ ಭಾಗದಿಂದ ತೊಡಗಿ ಕೊಡ್ಲಮೊಗರು, ದೈಗೋಳಿ, ವರ್ಕಾಡಿ, ಸುಂಕದಕಟ್ಟೆ, ಮುರತ್ತಣೆ, ಹೊಸಂಗಡಿ, ಮಂಜೇಶ್ವರ ಆಸುಪಾಸುಗಳಲ್ಲೂ ಜಲಮಟ್ಟ ಕುಸಿದಿರುವುದು ಗೋಚರಿಸುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಹೊಳೆಗಳು ಇದೀಗ ನೀರಿಲ್ಲದೆ ಬಯಲಿನಂತಾಗಿವೆ.

ಕುಡಿಯಲು ಉಪ್ಪು ನೀರು !
ಕಾಸರಗೋಡಿನ ಜನರಿಗೆ ನೀರಿನ ಆಶ್ರಯವಾಗಿದ್ದ ಪಯಸ್ವಿನಿ ಹೊಳೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಈ ವರ್ಷವೂ ಸಮುದ್ರ ನೀರು ಸೇರುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಉಪ್ಪು ನೀರೇ ಕುಡಿಯಬೇಕಾದ ಪ್ರಸಂಗ ಎದುರಾಗಲಿದೆ. ಬಾವಿಕೆರೆಯಲ್ಲಿ ಶಾಶ್ವತ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಗೊಂಡು ಹಲವು ವರ್ಷಗಳೇ ಸಂದರೂ ಇನ್ನೂ ಅಪೂರ್ಣ. ಈ ಹಿನ್ನೆಲೆಯಲ್ಲಿ ಪ್ರತಿವರ್ಷವೂ ತಾತ್ಕಾಲಿಕವಾಗಿ ಗೋಣಿ ಚೀಲಗಳಲ್ಲಿ ಮರಳು ತುಂಬಿ ಹೊಳೆಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ.

ಸುಡು ಬಿಸಿಲು
ಕಾಸರಗೋಡು ಜಿಲ್ಲೆಯ ಕೆಲವೆಡೆ ಭೂಮಿ ಒಣಗಲಾರಂಭಿಸಿದ್ದು, ಪೂರ್ವಾಹ್ನ 10ರಿಂದ ಸಂಜೆ 4ಗಂಟೆಯ ವರೆಗೂ ಹೊರಗಡೆ ಸಂಚರಿಸು ವಾಗ ಬಿಸಿಲಿನ ಧಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೊಳೆಯಲ್ಲಿ ಬಾವಿ ನಿರ್ಮಿಸಿ ರಿಂಗ್‌ ಅಳವಡಿಸುವ ಮೂಲಕ ಕೆಲವು ಕಡೆಗಳ ಕೃಷಿಕರು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ದಿನ ಕಳೆದಂತೆ ಅಲ್ಲೂ ಕೂಡ ನೀರಿನ ಲಭ್ಯತೆ ಕುಸಿಯುತ್ತಿದೆ. ಮಾತ್ರವಲ್ಲದೆ ಅತಿ ಹೆಚ್ಚು ನೀರು ಲಭಿಸುವ ನದಿ ಮರಳಿನ ಆಳದಲ್ಲೂ ಈ ವರ್ಷ ನೀರಿಲ್ಲದ ಪರಿಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next