Advertisement

ಸಂಚಾರಿ ವೃತ್ತ ಕಿರು ವಿನ್ಯಾಸಗಳಿಗೆ ಹೆಚ್ಚುತ್ತಿರುವ ಒಲವು

01:03 AM Oct 06, 2019 | Sriram |

ಮಂಗಳೂರು ನಗರದಲ್ಲಿ ಸಂಚಾರ ದಟ್ಟನೆಯಿಂದ ಹಲವು ಬಾರಿ ಸಾರ್ವಜನಿಕರು ಪರದಾಡುವಂತಾಗಿದೆ.ಈ ಸಮಸ್ಯೆ ನಿವಾರ ಣೆಗಾಗಿ ಮತ್ತು ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿ ಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭ ನಗರದಲ್ಲಿ ಕಿರು ವೃತ್ತಗಳ ನಿರ್ಮಾಣ ದಿಂದಾಗಿ ಟ್ರಾಫಿಕ್‌ ಜಾಮ್‌ನ್ನು ನಿಯಂತ್ರಿಸುವ ಕುರಿತು ಹಲವು ಯೋಚನೆಗಳನ್ನು ಈ ಲೇಖನದ ಮೂಲಕ ಕಂಡುಕೊಳ್ಳ ಬಹುದು.

Advertisement

ಮಂಗಳೂರು ನಗರದಲ್ಲಿ ಒಂದಷ್ಟು ರಸ್ತೆಗಳಲ್ಲಿ ಸಂಚಾರಿ ವೃತ್ತಗಳನ್ನು ಸುಗಮ ಸಂಚಾರದ ನಿಟ್ಟಿನಲ್ಲಿ, ಸುಂದರೀಕರಣ ಉದ್ದೇಶದಿಂದ ಅಥವಾ ಐತಿಹಾಸಿಕ ಸ್ಮರಣಾರ್ಥವಾಗಿ ನಿರ್ಮಿಸಲಾಗಿತ್ತು. ಇವುಗಳಲ್ಲಿ ಕೆಲವು ಈಗ ಮಾಯವಾಗಿವೆ. ಇನ್ನೂ ಕೆಲವು ಉಳಿದುಕೊಂಡಿವೆ. ಇದೆಲ್ಲದರ ನಡುವೆ ನಗರದಲ್ಲಿ ಹಿಂದೆ ಇದ್ದಂತಹ ಬೃಹತ್‌ ಗಾತ್ರದ ವೃತ್ತಗಳು ಅವಶ್ಯವಿದೆಯೇ ಎಂಬ ಚರ್ಚೆಗಳು ಕೂಡ ಆರಂಭಗೊಂಡಿವೆ. ರಸ್ತೆ ಉನ್ನತೀಕರಣದ ವೇಳೆ ತೆರವುಗೊಳಿಸಿದ್ದ ಕೆಲವು ವೃತ್ತಗಳನ್ನು ಇದೀಗ ಮರುನಿರ್ಮಾಣಗೊಳಿಸುವ ಕಾರ್ಯ ಮಂಗಳೂರು ಮಹಾನಗರ ಪಾಲಿಕೆಯಿಂದ ಆರಂಭಗೊಂಡಿದೆ. ಲೇಡಿಹಿಲ್‌ನಲ್ಲಿ ಹಿಂದೆ ರಸ್ತೆ ಮಧ್ಯದಲ್ಲಿ ಇದ್ದ ವೃತ್ತ 15 ಅಡಿಗಳಷ್ಟು ಸುತ್ತಳತೆ ಹೊಂದಿತ್ತು. ಇದೀಗ ಹೊಸ ವಿನ್ಯಾಸದಲ್ಲಿ ವೃತ್ತದ ಸುತ್ತಳತೆಯನ್ನು 12 ಅಡಿಗಳಿಗೆ ಇಳಿಸಲಾಗಿದೆ. ಇದಕ್ಕೆ ಅನುಸಾರವಾಗಿ ಡಿವೈಡರ್‌ನ ಉದ್ದವನ್ನು 4 ರಿಂದ 8 ಅಡಿಗಳ ವರೆಗೆ ಹೆಚ್ಚಿಸಲಾಗಿದೆ. ಈ ನಡುವೆ ನಗರದ ಅವೈಜ್ಞಾನಿಕ ವೃತ್ತಗಳ ಪಾಲಿಗೆ ಲೇಡಿಹಿಲ್‌ ವೃತ್ತವೂ ಸೇರ್ಪಡೆಗೊಳ್ಳುತ್ತಿದೆ ಎಂಬ ಟೀಕೆಗಳು ಕೂಡಾ ಬಂದಿದೆ. ನಗರದ ಕೆಲವು ಕಡೆಗಳಲ್ಲಿ ಸಂಚಾರಿ ವೃತ್ತಗಳ ಅಪಾಯಕಾರಿ ವಿನ್ಯಾಸದಿಂದ ವಾಹನ ಚಾಲಕರು, ಸಾರ್ವಜನಿಕರ ಪಾಲಿಗೆ ಗೊಂದಲಮಯವಾಗಿ ಪರಿಣಮಿಸಿದೆ.

ದೊಡ್ಡ ವೃತ್ತಗಳು ಸಂಚಾರ ಸಮಸ್ಯೆಗೆ ಪರಿಹಾರವಲ್ಲ
ದೊಡ್ಡ ವೃತ್ತಗಳು ಸಂಚಾರ ನಿಯಂತ್ರಣಕ್ಕೆ ಸಹಕಾರಿ ಎಂಬ ಭಾವನೆ ನೆಲೆಸಿತ್ತು. ಇದೇ ನೆಲೆಯಲ್ಲಿ ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಈ ಹಿಂದೆ ದೊಡ್ಡದಾಗಿ ವೃತ್ತಗಳನ್ನು ನಿರ್ಮಿಸಲಾಗಿತ್ತು. ಇದೀಗ ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ನಗರ ರಸ್ತೆಯಲ್ಲಿ ವಾಹನಗಳು ಬ್ಲಾಕ್‌ ಆಗುವುದು ಸಾಮಾನ್ಯ. ಇದಕ್ಕೆ ಪ್ರಮುಖ ಕಾರಣ ರಸ್ತೆ ಮಧ್ಯದಲ್ಲಿರುವ ಬƒಹತ್‌ ಸರ್ಕಲ್‌ಗ‌ಳು. ಇವು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅದ್ದರಿಂದ ದೊಡ್ಡ ಸರ್ಕಲ್‌ಗ‌ಳನ್ನು ತೆರವುಗೊಳಿಸಿ ಆದಷ್ಟು ಸಣ್ಣದಾಗಿ ನಿರ್ಮಿಸಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಅಂಬೇಡ್ಕರ್‌ ವೃತ್ತ ಮತ್ತು ಹಂಪನಕಟ್ಟೆಯಲ್ಲಿ ಸರ್ಕಲ್‌ ತೆರವುಗೊಳಿಸಿರುವುದರಿಂದ ವಾಹನ ಸಂಚಾರ ಸುಗಮವಾಗಿದೆ. ಕದ್ರಿ ಶಿವಬಾಗ್‌ನಲ್ಲೂ ಸರ್ಕಲ್‌ ತೆಗೆದು ಸಣ್ಣ ಟ್ರಾಫಿಕ್‌ ಅಂಬ್ರೆಲ್ಲಾ ಅಳವಡಿಸಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿಲ್ಲ. ಪ್ರಸ್ತುತ ಲೇಡಿಹಿಲ್‌ನಲ್ಲೂ ಇದೇ ರೀತಿ ಸಣ್ಣ ಟ್ರಾಫಿಕ್‌ ಅಂಬ್ರೆಲ್ಲಾ ಅಳವಡಿಸಿದರೆ ಸಂಚಾರ ಸುಗಮವಾಗಬಹುದು. ಇದಲ್ಲದೆ ನಗರದ ಕೆಲವು ಪ್ರದೇಶದಲ್ಲಿ ದೊಡ್ಡಗಾತ್ರದ ಸರ್ಕಲ್‌ಗ‌ಳಿದ್ದು ಅವೆಲ್ಲನ್ನು ತೆಗೆದು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ. ಈ ಹಿಂದೆ ಆಗ್ರಹಿಸಿದ್ದರು.

ನಂತೂರಿನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಸಂದಿಸುವಲ್ಲಿ ಬೃಹತ್‌ ವೃತ್ತವನ್ನು ನಿರ್ಮಿಸಲಾಗಿತ್ತು. ಸುಮಾರು 11 ಮೀಟರ್‌ ವಿಸ್ತೀರ್ಣವಿದ್ದ ಈ ವೃತ್ತ ವಾಹನ ಚಾಲಕರ ಪಾಲಿಗೆ ಗೊಂದಲದ ಗೂಡಾಗಿತ್ತು.ವೃತ್ತದ ವಿನ್ಯಾಸ ಈಗ ಹೇಗಿದೆ ಎಂದರೆ ಪಂಪ್‌ವೆಲ್‌ನಿಂದ ಕೆಪಿಟಿ ವೃತ್ತದ ಕಡೆಗೆ ಸಾಗುವ ವಾಹನಗಳು ಸ್ವಲ್ಪ ಎಡಕ್ಕೆ ತಿರುಗಿ ನೇರವಾಗಿ ಮುಂದಕ್ಕೆ ಸಾಗಬೇಕು. ಮಲ್ಲಿಕಟ್ಟೆ ಕಡೆಯಿಂದ ಬಂದು ಬಿಕರ್ನಕಟ್ಟೆ ಕಡೆಗೆ ಹೋಗುವ ವಾಹನಗಳು ನಂತೂರು ಬಸ್‌ನಿಲ್ದಾಣದಿಂದ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿ ವೃತ್ತಕ್ಕೆ ಅರ್ಧ ಸುತ್ತು ಹೊಡೆದು ಸಾಗಬೇಕು. ಈ ಸಂದರ್ಭ ಕೆಪಿಟಿ ಕಡೆಯಿಂದ ಮಲ್ಲಿಕಟ್ಟೆಗೆ ಬರುವ ವಾಹನಗಳು ಜಂಕ್ಷನ್‌ಗೆ ಬಂದು ಬಲಕ್ಕೆ ತಿರುಗಿ ಸಾಗಬೇಕು. ಪಂಪ್‌ ವೆಲ್‌ ಕಡೆಗೆ ಹೋಗುವ ವಾಹನಗಳು ನೇರವಾಗಿ ಸಾಗಬೇಕು. ಇಲ್ಲಿ ಸಮಸ್ಯೆ ಎಂದರೆ ಏಕಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಕೆಲವು ಸಂದರ್ಭಗಳಲ್ಲಿ ಯಾರು ಎತ್ತ ಕಡೆ ತಿರುಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಇಲ್ಲಿ ಸಮಸ್ಯೆ ಎಂದರೆ ಏಕಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಕೆಲವು ಸಂದರ್ಭಗಳಲ್ಲಿ ಯಾರು ಎತ್ತ ಕಡೆ ತಿರುಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ವೃತ್ತ ಅಗಲವಾಗಿದ್ದರಿಂದ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದಿತ್ತು. ಇಲ್ಲಿ ಸಂಚಾರ ಸಮಸ್ಯೆ ನಿರ್ವಹಿಸಲು ಸಂಚಾರಿ ಪೊಲೀಸ್‌ ವ್ಯವಸ್ಥೆ ಕಂಡುಕೊಂಡ ತಾತ್ಕಾಲಿಕ ಪರಿಹಾರ ಎಂದರೆ ವೃತ್ತದ ಅಗಲವನ್ನು ಕಿರಿದುಗೊಳಿಸುವುದು. ಪರಿಣಾಮ ಇದರ ವಿಸ್ತೀರ್ಣವನ್ನು 5.5 ಮೀಟರ್‌ಗೆ ಕಿರಿದುಗೊಳಿಸಲಾಯಿತು. ಪರಿಣಾಮ ಪಂಪ್‌ವೆಲ್‌, ಮಲ್ಲಿಕಟ್ಟೆ ಕಡೆಯಿಂದ ವೃತ್ತದ ಬಳಿಯಿಂದ ಬರುವಾಗ ಹೆಚ್ಚಿನ ರಸ್ತೆ ಅವಕಾಶ ಲಭಿಸಿದೆ. ಕೆಪಿಟಿ ವೃತ್ತದಲ್ಲೂ ಮಾಡಿರುವ ಬದಲಾವಣೆಗಳಿಂದ ಅಲ್ಲಿ ಪ್ರಸ್ತುತ ಸಂಚಾರ ಸಮಸ್ಯೆಯಲ್ಲಿ ಸುಧಾರಣೆಯಾಗಿದೆ.

ಅವಶ್ಯವಿದ್ದರೆ ಮಾತ್ರ ವೃತ್ತಗಳು ನಿರ್ಮಾಣವಾಗಲಿ
ಪ್ರಸ್ತುತ ದೊಡ್ಡ ನಗರಗಳಲ್ಲಿ ಸರ್ಕಲ್‌ಗ‌ಳು ಒಂದೊಂದಾಗಿ ಮಾಯವಾಗುತ್ತಿವೆ. ಚಿಕ್ಕ ಸರ್ಕಲ್‌ ವಿನ್ಯಾಸದತ್ತ ಒಲವು ಹೆಚ್ಚುತ್ತಿದೆ.ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವೃತ್ತಗಳ ನಿರ್ಮಾಣವನ್ನು ಕೈಬಿಡಲಾಗಿದೆ. ಇರುವ ವೃತ್ತಗಳನ್ನು ತೆರವುಗೊಳಿಸುವ ಅಥವಾ ಕಿರಿದುಗೊಳಿಸುವ ಕಾರ್ಯ ನಡೆಯುತ್ತಿದೆ. ಸಂಚಾರಿ ಸುವ್ಯವಸ್ಥೆಗೆ ಅವಶ್ಯವಿದ್ದರೆ ಮಾತ್ರ ವೃತ್ತಗಳು ಚಿಕ್ಕದಾಗಿ ಚೊಕ್ಕ ವಿನ್ಯಾಸದಲ್ಲಿ ನಿರ್ಮಾಣವಾಗಲಿ.

Advertisement

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next