Advertisement

ಹೆಚ್ಚಿದ ಬಿಡಾಡಿ ದನ-ನಾಯಿಗಳ ಹಾವಳಿ

03:52 PM Oct 28, 2020 | Suhan S |

ದೇವದುರ್ಗ: ಪಟ್ಟಣದ ರಾಜ್ಯ ಹೆದ್ದಾರಿ, ಪ್ರಮುಖ ರಸ್ತೆ ಮತ್ತು ವಾರ್ಡ್‌ಗಳಲ್ಲಿ ಬಿಡಾಡಿ ದನಗಳು, ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

Advertisement

ರಾಜ್ಯ ಹೆದ್ದಾರಿಯಲ್ಲಿ ಕೆಲವೊಮ್ಮೆ ವಾಹನಗಳಿಗೆಅಡ್ಡಿ ಬಂದು ದ್ವಿಚಕ್ರ ವಾಹನ ಸವಾರರು ಬಿದ್ದು  ಗಾಯಗೊಂಡಿರುವ ನಿದರ್ಶನಗಳಿದ್ದು, ಬೀದಿ ನಾಯಿಗಳು, ಬಿಡಾಡಿ ದನಗಳ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿಯೇ ಅನೇಕ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ದೂರುತ್ತಾರೆ.

ಹೆದ್ದಾರಿಯಲ್ಲಿ ರಾತ್ರಿ ವೇಳೆ ವೇಗವಾಗಿ ಚಲಿಸುವ ವಾಹನಗಳಿಗೆ ಆಗಾಗ ನಾಯಿಗಳು ಮೃತಪಡುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ಮೃತಪಟ್ಟ ನಾಯಿಗಳನ್ನು ಎಳೆದೊಯ್ಯುವಲ್ಲಿ ಪುರಸಭೆ ಸಿಬ್ಬಂದಿ ಬೇಸತ್ತಿದ್ದಾರೆ. ಇನ್ನೊಂದೆಡೆನಾಯಿಗಳ ದಾಳಿಗೆ ಬಹುತೇಕರು ಸಂಚರಿಸಲು ಭಯ ಪಡುವಂತಾಗಿದೆ.

ನಾಯಿಗಳ ಹಾವಳಿ: ಪಟ್ಟಣದ ಬಸ್‌ ನಿಲ್ದಾಣ, ರಾಜ್ಯ ಹೆದ್ದಾರಿ, ಮಿನಿ ವಿಧಾನಸೌಧ, ಡಾ| ಬಿ.ಆರ್‌. ಅಂಬೇಡ್ಕರ್‌, ಜಹಿರುದ್ಧೀನ್‌ ವೃತ್ತ, ಬಸವಣ್ಣ ವೃತ್ತ ಸೇರಿ ಇತರೆ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದಕ್ಕೊಂದು ಕಿತ್ತಾಡುತ್ತ ಜನರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಮಕ್ಕಳು, ಮಹಿಳೆಯರು, ವೃದ್ಧರಲ್ಲಿ ಭಯ ಆವರಿಸಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಹಲವು ಬಾರಿ ಸಂಘಟನೆಗಳ ಮುಖಂಡರು ಪುರಸಭೆ ಮುಖ್ಯಾಧಿಕಾರಿಗೆ ಮೌಖೀಕವಾಗಿ ಮನವಿ ಮಾಡಿದ್ದರೂ ಅಧಿಕಾರಿಗಳ ಹುಸಿ ಭರವಸೆ ಮಾತ್ರ ಇನ್ನೂ ಈಡೇರಿಲ್ಲ. ಹೀಗಾಗಿ ಇದುವರೆಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ.

Advertisement

ಬಿಡಾಡಿ ದನಗಳ ಕಿರಿಕಿರಿ: ಪಟ್ಟಣದ ರಾಜ್ಯ ಹೆದ್ದಾರಿ, ಪ್ರಮುಖ ರಸ್ತೆಯಲ್ಲಿ ಬಿಡಾಡಿ ದನಗಳ ಕಿರಿಕಿರಿ ಹೆಚ್ಚಾಗಿದೆ. ರಸ್ತೆ ಮಧ್ಯೆ ನಿದ್ರೆಗೆ ಜಾರುವ ಹಿನ್ನೆಲೆ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ರಸ್ತೆಯಲ್ಲೇ ಬಿಡಾಡಿ ದನಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಕಳೆದ ತಿಂಗಳ ಹಿಂದೆ ಪುರಸಭೆ ಅಧಿಕಾರಿಗಳುಬಿಡಾಡಿ ದನಗಳನ್ನು ತೆಗೆದುಕೊಂಡು ರಾಯಚೂರು ತಾಲೂಕಿನ ಗೋಶಾಲೆಗೆ ಕರೆದೊಯ್ಯಲಾಗಿತ್ತು. ಮಾಲೀಕರು ಕಾಡಿಬೇಡಿದ ನಂತರ ಪುನಃ ವಾಪಸ್‌ ಮಾಲೀಕರಿಗೆ ಒಪ್ಪಿಸಲಾಯಿತ್ತು. ಇದೀಗ ಮತ್ತೆ ಅದೇ ಸ್ಥಿತಿ ಮುಂದುವರಿದಿದೆ.

ಬಿಡಾಡಿ ದನಗಳನ್ನು ರಾಯಚೂರು ಗೋಶಾಲೆಗೆ ಕಳಿಸಲಾಗಿತ್ತು. ಮತ್ತೆ ರಸ್ತೆಯಲ್ಲಿ ಬಿಡುವುದಿಲ್ಲ ಎಂದು ಮಾಲೀಕರು ಹೇಳಿದ ನಂತರ ವಾಪಸ್‌ ತರಲಾಗಿತ್ತು. ಮತ್ತೆ ಸಮಸ್ಯೆ ಗಮನಕ್ಕೆ ಬಂದಿದ್ದು ಕ್ರಮ ವಹಿಸಲಾಗುವುದು.  –ಶರಣಪ್ಪ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next