Advertisement

ವ್ಯಾಪಕವಾಗಿ ಹೆಚ್ಚುತ್ತಿದೆ ಮಂಗನ ಕಾಯಿಲೆ

06:55 PM Mar 24, 2020 | Suhan S |

ಸಿದ್ದಾಪುರ: ಕೋವಿಡ್ 19 ಎಲ್ಲೆಡೆಗೂ ವ್ಯಾಪಿಸುತ್ತಿರುವ ಆತಂಕದ ನಡುವೆ ತಾಲೂಕಿನಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ) ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ತಾಲೂಕಾಡಳಿತ, ಆರೋಗ್ಯ ಇಲಾಖೆ ಕಾಯಿಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ತೆಗೆದುಕೊಂಡಿದ್ದರೂ ನಿಯಂತ್ರಣಕ್ಕೆ ಬರದ ವಾಸ್ತವಿಕತೆ ಈಗಿನದು.

Advertisement

ತಾಲೂಕಿನಲ್ಲಿ ಈವರೆಗೆ 64 ಜನರಿಗೆ ರೋಗ ಬಂದಿದ್ದು 7 ಜನ ಮೃತಪಟ್ಟಿದ್ದಾರೆ. ಈ ವರ್ಷ ಇಟಗಿ ಸಮೀಪದ ಮಳಗುಳಿಯ ಭಾಸ್ಕರ ಹೆಗಡೆ ಮೃತಪಟ್ಟಿದ್ದು 15 ಜನರಿಗೆ ಕಾಯಿಲೆ ಕಾಣಿಸಿಕೊಂಡಿದೆ. ಶನಿವಾರ ಮಾದ್ಲಮನೆಯಲ್ಲಿ ಒಬ್ಬಳು ಮಹಿಳೆ ಹಾಗೂ ಇಟಗಿ ಭಾಗದಲ್ಲಿ ಇಬ್ಬರು ಮಹಿಳೆಯರಿಗೆ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿದ್ದು ಮೂವರನ್ನೂ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಎಂಟು ಜನರು ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಲ್ವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾಗಿ ದೊಡ್ಮನೆ ಜಿಪಂನ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಮಂಗಗಳು ಸಾಯುತ್ತಿವೆ. ಇದರಿಂದ ಆ ಭಾಗದ ಜನ ಭಯಪಡುತ್ತಿದ್ದಾರೆ.

ಕಳೆದ ವರ್ಷ ತಾಲೂಕಿನ ಬಾಳಗೋಡ, ವಾಜಗೋಡ ಭಾಗದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ 23 ಜನ ಬಲಿಯಾಗಿದ್ದಾರೆ ಎಂದು ಅಧಿಕೃತ ದಾಖಲೆ ಹೇಳುತ್ತದೆ. ಈ ವರ್ಷ ಆ ಭಾಗದಲ್ಲಿ ಮಾತ್ರವಲ್ಲದೇ ತ್ಯಾಗಲಿ ಗ್ರಾಪಂ ವ್ಯಾಪ್ತಿಯ ಕಲ್ಗದ್ದೆಯಲ್ಲಿ ಕೂಡ ಮಂಗನ ಕಾಯಿಲೆ ಕಂಡುಬಂದಿದೆ. ರೋಗ ಪೀಡಿತರು ಚಿಕಿತ್ಸೆಯಿಂದ ಗುಣಮುಖರಾಗಿದ್ದರೂ ದೈಹಿಕವಾಗಿ ಅವರು ಮೊದಲಿನಂತೆ ಸಶಕ್ತರಾಗಲು ಸಾಧ್ಯವಾಗಿಲ್ಲ. ಈ ಕಾಯಿಲೆಯಿಂದ ಮೃತಪಟ್ಟವರು ಬಹುತೇಕರು ಯಾವ ಆಸ್ತಿ, ಪಾಸ್ತಿಯಿಲ್ಲದೇ ಕೇವಲ ಕೂಲಿಯಿಂದ ಜೀವನ ಸಾಗಿಸುತ್ತಿದ್ದವರು. ಕಾಯಿಲೆ ಪೀಡಿತರಲ್ಲೂ ಹಲವರು ಹೆಚ್ಚಿನ ಆದಾಯ ತರುವ ಜಮೀನು ಹೊಂದಿರದೇ ಇದ್ದವರು. ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಅವರಿಗೆ ಜಿಲ್ಲಾಡಳಿತ, ವಿಶೇಷವಾಗಿ ಜಿಲ್ಲಾಧಿಕಾರಿ ಡಾ|ಹರೀಶಕುಮಾರ್‌, ಜಿಪಂ ಸಿಇಒ ಎಂ.ರೋಶನ್‌, ಶಿರಸಿ ಸಹಾಯಕ ಕಮೀಷನರ್‌ ಡಾ| ಈಶ್ವರ್‌ ಉಳ್ಳಾಗಡ್ಡಿ ಸರಕಾರದಿಂದ ಅದಕ್ಕೆ ವಿನಾಯಿತಿ ಕೊಡಿಸಲು ಶ್ರಮಿಸಿದ್ದಾರೆ.

ಪಕ್ಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲೂ ಮಂಗನಕಾಯಿಲೆ ಮಿತಿಮೀರಿ ವ್ಯಾಪಿಸಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಅಲ್ಲಿನ ಶಾಸಕ ಎಚ್‌. ಹಾಲಪ್ಪ ಕಾಯಿಲೆಯಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಒದಗಿಸುವಲ್ಲಿ ಶ್ರಮಪಟ್ಟು ಯಶಸ್ವಿಯಾಗಿದ್ದರು. ಆದರೆ ಈ ತಾಲೂಕಿನಲ್ಲಿ ಆ ಕುರಿತಾದ ಯಾವ ಸ್ಪಂದನೆಯೂ ಇರಲಿಲ್ಲ. ಇತ್ತೀಚೆಗೆ ರಾಜ್ಯ ವಿಧಾನ ಸಭೆಯಲ್ಲಿ ಶಾಸಕ ಎಚ್‌. ಹಾಲಪ್ಪ ಈ ಕಾಯಿಲೆ ಕುರಿತು ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡು ಅಂಕಿ ಅಂಶಗಳೊಂದಿಗೆ ಮಾತನಾಡಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ ನಂತರದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಮೃತಪಟ್ಟವರಿಗೆ ಸಮರ್ಪಕ ಆರ್ಥಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಸರಕಾರದಿಂದ ಬಂದ ಆದೇಶದ ಪ್ರಕಾರ ಜಿಲ್ಲಾಧಿಕಾರಿಗಳು ಈಗಾಗಲೇ ಆ ಕುರಿತ ಮಾಹಿತಿಗಳನ್ನು ಒದಗಿಸಿದ್ದಾರೆ ಎನ್ನಲಾಗುತ್ತಿದೆ.

ಅದರಿಂದಾಗಿ ಈ ತಾಲೂಕಿನ ಬಾಧಿತರಿಗೂ ಪರಿಹಾರ ದೊರೆಯುವ ಆಶಾ ಭಾವನೆ ಕಂಡುಬರುತ್ತಿದೆ. ಮಂಗನಕಾಯಿಲೆ ದೃಢಪಟ್ಟವರನ್ನು ಮಣಿಪಾಲ್‌ ಆಸ್ಪತ್ರೆಗೆ ಶೀಘ್ರವಾಗಿ ಕರೆದೊಯ್ಯಲು ಜಿಲ್ಲಾಡಳಿತ ಈಗಾಗಲೇ ಪ್ರತ್ಯೇಕ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದರೂ ಅದಕ್ಕೆ ವೆಂಟಿಲೇಶನ್‌ ವ್ಯವಸ್ಥೆ ಇಲ್ಲದಿರುವ ಕಾರಣ, ಸಾಕಷ್ಟು ದೂರದ ಮಣಿಪಾಲಕ್ಕೆ ರೋಗಿಗಳನ್ನು ಕರೆದೊಯ್ಯುವಷ್ಟರಲ್ಲಿ ಅವರು ತೊಂದರೆ ಅನುಭವಿಸಬೇಕಾಗುತ್ತಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದು. ಪಕ್ಕದ ಶಿವಮೊಗ್ಗ ಜಿಲ್ಲೆಗೆ ಒದಗಿಸಿದ ಸಮರ್ಪಕ ಆ್ಯಂಬುಲೆನ್ಸ್‌ ಇಲ್ಲಿಗೂ ಒದಗಿಸಬೇಕೆನ್ನುವುದು ಅವರ ಆಗ್ರಹವಾಗಿದೆ.

Advertisement

 

­-ಗಂಗಾಧರ ಕೊಳಗಿ

Advertisement

Udayavani is now on Telegram. Click here to join our channel and stay updated with the latest news.

Next