Advertisement

ಪಡೀಲ್‌ ಕ್ರಾಸ್‌ ಬಳಿ ಅವೈಜ್ಞಾನಿಕ ತಿರುವಿನಿಂದ ನಿಲ್ಲದ ಅಪಘಾತ ಸರಣಿ

10:04 PM Jan 27, 2021 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 75ರ ಮರೋಳಿ-ಪಡೀಲ್‌ ನಡು ವಿನ “ಕೆಂಬಾರ್‌ ಪಡೀಲ್‌ ಕ್ರಾಸ್‌’ ತಿರುವಿನಲ್ಲಿ ಅಪಘಾತ ಸರಣಿ ಮುಂದುವರಿದಿದೆ. ಆದರೆ ಹೆದ್ದಾರಿ ಪ್ರಾಧಿಕಾರ ಅಥವಾ ಗುತ್ತಿಗೆದಾರ ಸಂಸ್ಥೆ ಅಪಘಾತ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಸಾರ್ವಜನಿಕರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇಲ್ಲಿ ಹೆದ್ದಾರಿ ನಿರ್ಮಾಣಗೊಂಡ ಅನಂ ತರ ಸುಮಾರು 5 ವರ್ಷಗಳಲ್ಲಿ ನೂರಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಸುಮಾರು 7 ಮಂದಿ ಯುವಕರು ಸಹಿತ ಅನೇಕ ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಹತ್ತಾರು ಮಂದಿ ಗಾಯಾಳುಗಳಾಗಿದ್ದಾರೆ. ಕಳೆದೊಂದು ವಾರದಲ್ಲಿ ಮತ್ತೆ 5 ಅಪಘಾತಗಳು ಸಂಭವಿಸಿ ಮೂವರು ಗಾಯಗೊಂಡಿದ್ದಾರೆ.

ನಿತ್ಯ ನಿರಂತರ ಅಪಘಾತ  :

ಪ್ರತಿನಿತ್ಯವೂ  ಒಂದೆರಡು ಅಪಘಾತಗಳು ಇಲ್ಲಿ ಮಾಮೂಲು. ಬುಧವಾರ ಬೆಳಗ್ಗೆ ಇಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಬಿದ್ದು ಸವಾರ ಗಾಯಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ವಾಹನ ಢಿಕ್ಕಿಯಾಗಿದೆ. ಅಪಘಾತ ನೋಡಿ ಸಾಕಾಗಿದೆ. ಪೊಲೀಸರು, ಹೆದ್ದಾರಿ ಇಲಾಖೆಯವರು, ಜನಪ್ರತಿನಿಧಿಗಳು ಸಹಿತ ಸಂಬಂಧಿಸಿದವರೆಲ್ಲರೂ ಸ್ಥಳಕ್ಕೆ ಬಂದು ನೋಡಿ ಹೋಗಿದ್ದಾರೆ. ಆದರೆ ಇನ್ನೂ ಯಾವುದೇ ಪರಿಹಾರ ದೊರೆತಿಲ್ಲ. ತಿರುವಿನಿಂದ ಕೂಡಿದ ರಸ್ತೆಯಿಂದಾಗಿ ಜೀವಗಳು ಹೋಗುತ್ತಲೇ ಇವೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಆಯಿಲ್‌, ಡೀಸೆಲ್‌ ರಸ್ತೆಗೆ :

Advertisement

ಇಷ್ಟೊಂದು ಕಡಿದಾದ ತಿರುವು ಹೆದ್ದಾರಿಯಲ್ಲಿ ಎಲ್ಲಿಯೂ ಇದ್ದಂತಿಲ್ಲ. ಇಲ್ಲಿ ಏಕಾಏಕಿ ಎದುರಾಗುವ ತಿರುವು ಚಾಲಕರು/ ಸವಾರರು ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಟ್ಯಾಂಕರ್‌, ಇತರ ಕೆಲವು ವಾಹನಗಳು ಏಕಾಏಕಿ ತಿರುವು ಪಡೆದುಕೊಳ್ಳುವಾಗ ಅವುಗಳಲ್ಲಿರುವ ಆಯಿಲ್‌, ಡೀಸೆಲ್‌ ಅಥವಾ ಡಾಮರಿನಂತಹ ದ್ರವಗಳು ರಸ್ತೆಗೆ ಚೆಲ್ಲುತ್ತದೆ. ಇದರಿಂದಾಗಿ ಅದರ ಹಿಂದೆ ಬರುವ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತವೆ.

ಬುಧವಾರ ಬೆಳಗ್ಗೆ ಕೂಡ ಬೈಕ್‌ವೊಂದು ಸ್ಕಿಡ್‌ ಆಗಿಬಿದ್ದ ಅನಂತರ ರಸ್ತೆಗೆ ಸ್ಥಳೀಯ ಯುವಕರು ಮಣ್ಣಿನ ಪುಡಿ ಹಾಕಿದ್ದಾರೆ. ಇಲ್ಲಿ ರಾತ್ರಿ ಹಗಲು ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ ದಿನನಿತ್ಯ ಅಪಘಾತಗಳಾಗುತ್ತಿರುವುದರಿಂದ ನಮಗೂ ಸಾಕಾಗಿ ಹೋಗಿದೆ ಎನ್ನುತ್ತಾರೆ ಸ್ಥಳೀಯರು.

ಹುಲ್ಲು ತೆರವು  :

ಇಲ್ಲಿ ವಾರದ ಹಿಂದೆ ವಾಹನಗಳು ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಅನಂತರ ಪಾಲಿಕೆಯವರು ರಸ್ತೆ ಪಕ್ಕದ ಹುಲ್ಲು, ಕುರುಚಲು ಗಿಡಗಳನ್ನು ತೆರವುಗೊಳಿಸಿದ್ದಾರೆ.

ಹೆದ್ದಾರಿ ಇಲಾಖೆಯವರು ಎರಡು ದಿನಗಳ ಹಿಂದೆ ಹೆದ್ದಾರಿ ಪಕ್ಕದ ಮರಗಳಿಗೆ ಬಿಳಿ ಬಣ್ಣವನ್ನು ಸವರಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮಗಳು ಆಗಿಲ್ಲ. ವಾಹನಗಳು ಢಿಕ್ಕಿ ಹೊಡೆದು ಹಾನಿಗೊಂಡ ಡಿವೈಡರ್‌ ಹಾಗೆಯೇ ಇದೆ. ಎಚ್ಚರಿಕೆ, ಸೂಚನೆ ಫ‌ಲಕಗಳಿಲ್ಲ. ವಾಹನ ಢಿಕ್ಕಿ ಹೊಡೆದು ಮುರಿದು ಹೋದ ವಿದ್ಯುತ್‌ ಕಂಬವನ್ನು ಮತ್ತೆ ಹಾಕಿಲ್ಲ. ಇದೇ ಸ್ಥಳದಲ್ಲಿ ತಿಂಗಳ ಹಿಂದೆ ಬೈಕ್‌ ಸವಾರನೋರ್ವ ಮೃತಪಟ್ಟಿದ್ದರು.

ತಿರುವು ಸರಿಪಡಿಸಿ :

ಇಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ತಿರುವಿನಲ್ಲಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುವುದೇ ಮುಖ್ಯ ಕಾರಣ. ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರೇ ಬಲಿಯಾಗುತ್ತಿದ್ದಾರೆ. ತಿರುವು ಸರಿಪಡಿ ಸುವುದೊಂದೇ ಪರಿಹಾರ. ರಸ್ತೆಯ ಅಂಚಿನಲ್ಲಿ ಸ್ವಲ್ಪವೂ ಜಾಗ ಇಲ್ಲದೇ ಇರುವುದರಿಂದ ಇಲ್ಲಿ ನಡೆದುಕೊಂಡು ಹೋಗುವವರಿಗೂ ವಾಹನಗಳು ಢಿಕ್ಕಿ ಹೊಡೆಯುತ್ತಿವೆ ಎನ್ನುತ್ತಾರೆ ಸ್ಥಳೀಯರಾದ ಸುನೀತಾ ನೊರೊನ್ಹಾ, ಕುಶಲಾ ಅವರು.

ಹೆದ್ದಾರಿಗೆ ಅಗತ್ಯವಾದ ಭೂಸ್ವಾಧೀನಕ್ಕೂ ಕೆಲವೆಡೆ ಸಮಸ್ಯೆ ಇದೆ. ಅಪಘಾತಕ್ಕೆ ಕೆಲವೊಮ್ಮೆ ನಿರ್ಲಕ್ಷ್ಯದ ಚಾಲನೆಯೂ ಕಾರಣವಾಗಿರುತ್ತದೆ. ಅಪಘಾತ ಸಂಭವಿಸುತ್ತಿರುವ ಪಡೀಲ್‌ ಕ್ರಾಸ್‌ಗೆ ಶೀಘ್ರದಲ್ಲೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡುತ್ತೇನೆ.-ಶಿಶು ಮೋಹನ್‌,  ಯೋಜನಾ ನಿರ್ದೇಶಕರು, ರಾ.ಹೆ. ಪ್ರಾಧಿಕಾರ, ಮಂಗಳೂರು

ಮರೋಳಿ ಪಡೀಲ್‌ ಕ್ರಾಸ್‌ನಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಹೆದ್ದಾರಿಯವರಿಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿಯೇ ಇಲ್ಲಿ ನಡೆದಿರುವ ಸಾವು ನೋವಿನ ಅಂಕಿ ಅಂಶ ಸಹಿತವಾಗ ಸಮಗ್ರ ವರದಿಯನ್ನು ಇಲಾಖೆಗೆ ಸಲ್ಲಿಸಿ ಸಂಸದರು, ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗುವುದು. ತಿರುವು ಸರಿಪಡಿಸಿಕೊಡುವವರೆಗೂ ಪ್ರಯತ್ನ ನಿಲ್ಲಿಸುವುದಿಲ್ಲ. -ರೂಪಶ್ರೀ, ಸ್ಥಳೀಯ ಕಾರ್ಪೋರೆಟರ್‌

 

Advertisement

Udayavani is now on Telegram. Click here to join our channel and stay updated with the latest news.

Next