ಬೆಂಗಳೂರು: ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆಗೆ ಮತ್ತೆ ಐವರ ಸೇರ್ಪಡೆಯಾಗಿದೆ. ಇವರಲ್ಲಿ ಮೂವರು ಅಹಮದಾಬಾದ್ ಗೆ ಪ್ರವಾಸ ಮಾಡಿರುವ ಹಿನ್ನಲೆ ಹೊಂದಿದವರು. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
ಶನಿವಾರ ಮಧ್ಯಾಹ್ನದ ವರದಿಯಲ್ಲಿ 36 ಹೊಸ ಸೋಂಕಿತರ ವಿವರವನ್ನು ರಾಜ್ಯ ಆರೋಗ್ಯ ಇಲಾಖೆ ನೀಡಿತ್ತು. ಈಗ ಅದಕ್ಕೆ ಮತ್ತೆ ಐವರ ಸೇರ್ಪಡೆಯಾಗಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 41 ಮಂದಿಗೆ ಸೋಂಕು ದೃಢವಾದಂತಾಗಿದೆ.
ಅಹಮದಾಬಾದ್ ಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿರುವ ತುಮಕೂರಿನ ಮೂವರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಉಳಿದಂತೆ ಚಿಕ್ಕಬಳ್ಳಾಪುರದ 71 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
ಸೋಂಕಿತ ಸಂಖ್ಯೆ 750ರ ಸಂಪರ್ಕದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 32 ವರ್ಷದ ಮಹಿಳೆಗೆ ಸೋಂಕು ತಾಗಿರವುದು ಖಚಿತವಾಗಿದೆ. ಇದು ಭಟ್ಕಳದಲ್ಲಿ ಇಂದು ಪತ್ತೆಯಾದ ಎಂಟನೇ ಸೋಂಕು ಪ್ರಕರಣ ಇದಾಗಿದೆ.
ಇಂದಿನ 41 ಹೊಸ ಪ್ರಕರಣಗಳೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 30 ಸೋಂಕಿತರು ಮರಣ ಹೊಂದಿದ್ದಾರೆ. 386 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ