ಬೀದರ: ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 24,87,770 ಮಕ್ಕಳ ಪೈಕಿ 5,66,375 ಮಕ್ಕಳು ಅಪೌಷ್ಟಿಕತೆಯಿಂದ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಸೆಪ್ಟೆಂಬರ್ ತಿಂಗಳವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ತೂಕ ಮಾಡಿಸಿದ ಒಟ್ಟು 1,33,849 ಮಕ್ಕಳ ಪೈಕಿ 43,092 ಅಪೌಷ್ಟಿಕ ಮಕ್ಕಳೆಂದು ಪರಿಗಣಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 1,36,041 ಮಕ್ಕಳ ಪೈಕಿ 42,159 ಮಕ್ಕಳು, ರಾಯಚೂರು ಜಿಲ್ಲೆಯಲ್ಲಿ 2,00,069 ಮಕ್ಕಳ ಪೈಕಿ 60,473 ಮಕ್ಕಳು, ಯಾದಗಿರಿ ಜಿಲ್ಲೆಯಲ್ಲಿ 1,18,951 ಮಕ್ಕಳ ಪೈಕಿ 33,014, ಗದಗ ಜಿಲ್ಲೆಯಲ್ಲಿ 83,354 ಮಕ್ಕಳ ಪೈಕಿ 22,084 ಮಕ್ಕಳು, ವಿಜಯಪುರ 2,39,768 ಮಕ್ಕಳ ಪೈಕಿ 61,930 ಮಕ್ಕಳು, ಧಾರವಾಡ ಜಿಲ್ಲೆಯಲ್ಲಿ 2,39,768 ಮಕ್ಕಳ ಪೈಕಿ 61,930 ಮಕ್ಕಳು, ಹಾವೇರಿ ಜಿಲ್ಲೆಯಲ್ಲಿನ 1,43,802 ಮಕ್ಕಳ ಪೈಕಿ 35,156 ಮಕ್ಕಳು, ಬಳ್ಳಾರಿ ಜಿಲ್ಲೆಯಲ್ಲಿ 2,08,670 ಮಕ್ಕಳ ಪೈಕಿ 47,343 ಮಕ್ಕಳು, ಕಲಬುರಗಿ ಜಿಲ್ಲೆಯಲ್ಲಿ 1,79,197 ಮಕ್ಕಳ ಪೈಕಿ 35,291, ಬಾಗಲಕೋಟೆ ಜಿಲ್ಲೆಯಲ್ಲಿ 1,76,465 ಮಕ್ಕಳ ಪೈಕಿ 33,807 ಮಕ್ಕಳು, ಬೆಳಗಾವಿ ಜಿಲ್ಲೆಯಲ್ಲಿ 4,81,900 ಮಕ್ಕಳ ಪೈಕಿ 81,880 ಮಕ್ಕಳು, ದಾವಣಗೆರೆ ಜಿಲ್ಲೆಯಲ್ಲಿ 1,47,224 ಮಕ್ಕಳ ಪೈಕಿ 23,706 ಮಕ್ಕಳು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 1,23,150 ಮಕ್ಕಳ ಪೈಕಿ 17,623 ಮಕ್ಕಳು ವಯಸ್ಸಿನ ಅನುಸಾರ ತೂಕದಲ್ಲಿ ಕೊರತೆ ಎದುರಿಸಿ ಅಪೌಷ್ಟಿಕತೆಗೆ ಒಳಗಾಗಿದ್ದಾರೆ.
ಪೂರಕ ಪೌಷ್ಟಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ ಶೇ.50 ಕೇಂದ್ರ ಸರ್ಕಾರ ಭರಿಸುತ್ತಿದೆ. ಫಲಾನುಭವಿಗಳು ಪ್ರತಿ ದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಸ್ಕೃತ ಮಾರ್ಗಸೂಚಿಯಂತೆ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ 500 ಕ್ಯಾಲೊರಿ, 12-15 ಗ್ರಾಂ ಪ್ರೋಟಿನ್, ಗರ್ಭಿಣಿ, ಬಾಣಂತಿ, ಪ್ರಾಯ ಪೂರ್ವ ಬಾಲಕಿಯರಿಗೆ 600 ಕ್ಯಾಲೊರಿ ಮತ್ತು 18-20 ಗ್ರಾಂ ಪ್ರೋಟಿನ್ ಅಲ್ಲದೆ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿ ಮತ್ತು 20-25 ಗ್ರಾಂ ಪ್ರೋಟಿನ್ ನೀಡುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆ ಅನುಷ್ಠಾನಗೊಳಿಸಿದೆ. ಆದರೂ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಿದರೂ ಯಾವ ಕಾರಣಕ್ಕೆ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಸರ್ಕಾರ ಪತ್ತೆ ಹಚ್ಚಬೇಕಿದೆ.
ಮೂರು ವರ್ಷದೊಳಗಿನ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ವಿತರಿಸುವ ವಿವಿಧ ಆಹಾರ ಧಾನ್ಯ ಆಯಾ ಮಕ್ಕಳ ಪಾಲಕರಿಗೆ ಮುಟ್ಟುತ್ತಿಲ್ಲ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತಿದೆ. ಹಾಗಾದರೆ ಆ ಮಕ್ಕಳ ಆಹಾರ ಧಾನ್ಯ ಎಲ್ಲಿ ಹೋಗುತ್ತಿದೆ ಎಂಬುದನ್ನೂ ಸರ್ಕಾರ ಪತ್ತೆ ಹಚ್ಚಬೇಕಿದೆ.
ಅಂಗನವಾಡಿ ಕೇಂದ್ರಗಳ ಸುಧಾರಣೆ ಹಿನ್ನೆಲೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿನ ಅವ್ಯವಸ್ಥೆ ಸುಧಾರಿಸಬೇಕಿದೆ. 508 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. 307 ಮಕ್ಕಳ ಸ್ಥಿತಿ ಗಂಭೀರವಿದ್ದು, ಪ್ರತಿ ತಾಲೂಕಿನಲ್ಲೂ ಎನ್‌ಆರ್‌ಸಿ ಘಟಕಗಳನ್ನು ತೆರೆದು ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸ ಮುಂದಿನ ಮೂರು ದಿನಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಗುರುತಿಸಿದ ಎಲ್ಲ ಮಕ್ಕಳು ಅಪೌಷ್ಟಿಕ ಮಕ್ಕಳು ಅಲ್ಲ. ಅವರಲ್ಲಿ ತೂಕ ಕಡಿಮೆ ಇದೆ. ಇದನ್ನು ಅಭಿಯಾನ ರೀತಿಯಲ್ಲಿ ತೆಗೆದುಕೊಂಡು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಕೆಲಸ ಮಾಡಲಾಗುವುದು. ಅಲ್ಲದೆ, ಸರ್ಕಾರ ಕೂಡ ಸೂಕ್ತ ನಿರ್ದೇಶನ ನೀಡಿದೆ.
ಮಹಾಂತೇಶ ಬೀಳಗಿ, ಜಿಪಂ ಸಿಇಒ
ದುರ್ಯೋಧನ ಹೂಗಾರ