Advertisement

ಹೆಚ್ಚುತ್ತಿದೆ ಜೆಡಿಎಸ್‌ ಆಕಾಂಕ್ಷಿಗಳ ಪಟ್ಟಿ

04:16 PM Aug 13, 2018 | |

ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು 3 ತಿಂಗಳಲ್ಲೇ ಪುರಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು. ಎಲ್ಲೆಡೆ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳ ಆಯ್ಕೆಯದ್ದೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ ಕೋಟೆಯಾಗಿದ್ದ ಗುರುಮಠಕಲ್‌ ಪುರಸಭೆ ಚುನಾವಣೆ ದಿನೇ ದಿನೇ ಕಾವೇರುತ್ತಿದೆ.
 
ಗುರುಮಠಕಲ್‌ ಮತಕ್ಷೇತ್ರದ ಜನರು ವಿಧಾನಸಭೆ ಚುನಾವಣೆಯಲ್ಲಿ 1972ರಿಂದ 2013ರ ವರೆಗೆ ಸತತ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಆರಿಸಿ ತರುವ ಮೂಲಕ ಕ್ಷೇತ್ರದ ಹೆಸರು ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಿದ್ದರು.
 
2018ರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗುರುಮಠಕಲ್‌ ಕ್ಷೇತ್ರದಿಂದ 2008 ಮತ್ತು 2013ರಲ್ಲಿ ಆಯ್ಕೆಯಾಗಿದ್ದ ಬಾಬುರಾವ್‌ ಚಿಂಚನಸೂರ ಸೋಲನ್ನು ಕಂಡಿದ್ದು, ಈಗ ಕ್ಷೇತ್ರ ದಳಪತಿಗಳ ಕೈ ಸೇರಿದೆ. 24 ಸಾವಿರ ಮತಗಳ ಅಂತದಿಂದ ಪ್ರಥಮ ಬಾರಿಗೆ ಜೆಡಿಎಸ್‌ನ ನಾಗನಗೌಡ ಕಂದಕೂರ ಜಯಭೇರಿ ಸಾಧಿಸಿದ್ದು, ಸುಮಾರು ವರ್ಷಗಳಿಂದಲೂ ಗುರುಮಠಕಲ್‌ ಪಟ್ಟಣದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದಾರೆ. 

Advertisement

ಈ ಹಿಂದೆ ಗುರುಮಠಕಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 2007ರ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆಯಲಾಗಿತ್ತು. ಅಧಿಕಾರ ದಾಹದಿಂದ ಕಾಂಗ್ರೆಸ್‌ ಬಲೆಗೆ ಸಿಲುಕಿದ 4 ಸದಸ್ಯರು ಕಾಂಗ್ರೆಸ್‌ನ್ನು ಬೆಂಬಲಿಸಿ ಲಲಿತಾ ತಿವಾರಿ ಎರಡುವರೆ ವರ್ಷ ಅಧಿಕಾರ ಅನುಭವಿಸಿದ್ದರು. ಇದಾದ ಬಳಿಕ ಕಾಂಗ್ರೆಸ್‌ ಅಧಿಕಾರ ಬಿಟ್ಟುಕೊಟ್ಟಿಲ್ಲ.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರೆಲ್ಲ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ಗೆ ಸೇರಿದ್ದು, ಶಾಸಕರು ಕೂಡ ಜೆಡಿಎಸ್‌ ನವರಿದ್ದು, ಲೋಕಲ್‌ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಆಕಾಂಕ್ಷಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸ್ಥಳೀಯ ಚುನಾವಣೆಗೆ ಟಿಕೆಟ್‌ ನೀಡಲು ಜೆಡಿಎಸ್‌ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ನಾಗನಗೌಡ ಕಂದಕೂರ ಪಟ್ಟಣದಲ್ಲಿ ಜೆಡಿಎಸ್‌ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಆಕಾಂಕ್ಷಿಗಳ ತಯಾರಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. 

ಆತಂರಿಕ ಸಿದ್ಧತೆ: ಸ್ಥಳೀಯ ಚುನಾವಣೆಗೆ ಜೆಡಿಎಸ್‌ ನಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಕಾಂಗ್ರೆಸ್‌ ಕೂಡ ಆಕಾಂಕ್ಷಿಗಳ ಪಟ್ಟಿ ತಯಾರಿಸಲು ಆತಂರಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಮಾಜಿ ಶಾಸಕ ಬಾಬುರಾವ್‌ ಚಿಂಚನಸೂರ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆಕಾಂಕ್ಷಿಗಳನ್ನು ಕಣಕ್ಕಿಳಿಸುವ ಕುರಿತು ಸಭೆ ನಡೆಸಿ ಚರ್ಚಿಸಿದ್ದಾರೆ. ಸದ್ಯದಲ್ಲೇ ಆಕಾಂಕ್ಷಿಗಳಿಂದ ಸರ್ಜಿ ಸ್ವೀಕರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಹಿಂದೆ ಉಳಿಯದ ಬಿಜೆಪಿ: ಬಿಜೆಪಿ ಕೂಡ ಸ್ಥಳೀಯ ಸಂಸ್ಥೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪುರಸಭೆಯನ್ನು ತನ್ನ ತೆಕ್ಕೆಗೆ ಪಡೆಯಲು ಸಿದ್ಧತೆ ನಡೆಸಿದೆ. ಮಂಡಲ ಅಧ್ಯಕ್ಷ ಮತ್ತು ನಗರ ಅಧ್ಯಕ್ಷರ ನೇತೃತ್ವದಲ್ಲಿ ಆಕಾಂಕ್ಷಿಗಳ ಸಭೆ ನಡೆಸಿದ್ದು, ರೂಪರೇಷೆ ತಯಾರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಬಲ ಪ್ರದರ್ಶನಕ್ಕೆ ಆನೆ ಸಜ್ಜು: ತಾವೇನು ಕಮ್ಮಿಯಿಲ್ಲ ಎನ್ನುವಂತೆ ಬಹುಜನ ಸಮಾಜವಾದಿ ಪಾರ್ಟಿಯೂ ಆಕಾಂಕ್ಷಿಗಳನ್ನು ಕಣಕ್ಕಿಳಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಅರ್ಹ ಅಭ್ಯರ್ಥಿಗಳು ಸಿಕ್ಕರೆ ಎಲ್ಲಾ ವಾರ್ಡ್‌ನಲ್ಲಿ ಪಕ್ಷದಿಂದ ಕಣಕ್ಕಿಳಿಸಿ ಬಲ ಪ್ರದರ್ಶನಕ್ಕೆ ಮುಂದಾಗಿದೆ.

Advertisement

ಸ್ಥಳೀಯ ಚುನಾವಣೆಗೆ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಹಾಗೂ ಬಿಎಸ್‌ಪಿ ಪಕ್ಷಗಳು ಸಜ್ಜಾಗುತ್ತಿದ್ದು, ಇನ್ನೊಂದೆಡೆ ಯುವ ನಾಯಕ ರಾಜಾ ರಮೇಶಗೌಡ ಅವರು ಸ್ವಾತಂತ್ರ್ಯಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ ಲೋಕಲ್‌ ಫೈಟ್‌ನಲ್ಲಿ ತೀರ್ವ ಪೈಪೋಟಿ ಏರ್ಪಟ್ಟಿದ್ದು, ಮತದಾರ ಯಾರತ್ತ ಒಲವು ತೋರಿಸಿ ಅಧಿಕಾರ ನೀಡುವರೋ ಕಾಯ್ದು ನೋಡಬೇಕಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next