Advertisement

ಎಂಎಸ್‌ಡಬ್ಲ್ಯೂ ಕ್ಷೇತ್ರದತ್ತ ಹೆಚ್ಚುತ್ತಿರುವ ಆಸಕ್ತಿ

09:57 PM Jan 07, 2020 | mahesh |

ಶೈಕ್ಷಣಿಕ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು, ವರ್ಷಂಪ್ರತಿ ಹೊಸ ಹೊಸ ಕೋರ್ಸ್‌ಗಳು ಸೇರ್ಪಡೆಯಾಗುತ್ತಿದೆ. ಅದಕ್ಕೆ ತಕ್ಕಂತೆಯೇ ವಿದ್ಯಾರ್ಥಿಗಳು ಕೂಡ ಹೊಸ ಕೋರ್ಸ್‌ನೆಡೆಗೆ ಆಕರ್ಷಿಸುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ತನ್ನ ಸ್ವಂತಿಕೆ ಯನ್ನು ಉಳಿ ಏಸಿದ ಕೋರ್ಸ್‌ ಗಳ ಪೈಕಿ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ (ಎಂಎಸ್‌ಡಬ್ಲ್ಯೂ ಕೋರ್ಸ್‌) ಕೂಡ ಒಂದು.

Advertisement

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಹೊಂದಿರುವ ಎಂಎಸ್‌ಡಬ್ಲ್ಯೂ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಸಮಾಜ ಕಾರ್ಯ ಅಧ್ಯಯನದಲ್ಲಿ ಕ್ಷೇತ್ರ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೇವಲ ತರಗತಿಯ ಒಳಗಡೆ ಕೂತು ಪಠ್ಯ ಕಲಿಯುವುದು ಈ ಕೋರ್ಸ್‌ನ ಉದ್ದೇಶವಲ್ಲ. ಈ ಕೋರ್ಸ್‌ ಕಲಿಕೆ ಸಮಯದಲ್ಲಿ ಮನುಷ್ಯನ ಬೇರೆ ಬೇರೆ ಅಂಶಗಳು, ವ್ಯಕ್ತಿತ್ವ, ಸಮಸ್ಯೆಗಳಿಗೆ ಪರಿಹಾರ, ಸೈದ್ಧಾಂತಿಕ ವಿಷಯಗಳ ತರಗತಿಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಅನುಭವಗಳನ್ನು ಪಡೆಯುವುದು ಕೂಡ ಈ ಕೋರ್ಸ್‌ ಕಲಿಕೆಯ ಒಂದು ಭಾಗವಾಗುತ್ತದೆ.

ಪದವಿಯಲ್ಲಿ ಬಿಎಸ್‌ಡಬ್ಲ್ಯೂ ಕಲಿತ ಬಳಿಕ ಸ್ನಾತಕೋತ್ತರ ಪದವಿಯಾಗಿ ಸಮಾಜ ಕಾರ್ಯ ಅಧ್ಯಯನ ನಡೆಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಮುಖ ವಿಶ್ವ ವಿದ್ಯಾನಿಲಯಗಳು, ಕಾಲೇಜುಗಳಲ್ಲಿ ಈ ಕೋರ್ಸ್‌ ಅನ್ನು ಕಲಿಸಲಾಗುತ್ತಿದೆ. ಎರಡು ವರ್ಷಗಳ ಸೆಮಿಸ್ಟರ್‌ ಕೋರ್ಸ್‌ ಇದಾಗಿದ್ದು, ವಿ.ವಿ.ಗಳಲ್ಲಿ 45 ಸೀಟುಗಳಿರುತ್ತದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಬ್ಯಾಚುಲರ್‌ ಡಿಗ್ರಿ ಜತೆ ಶೇ. 50 (ಸಾಮಾನ್ಯ) ಶೇ. 40 (ಎಎಸ್‌.ಸಿ./ಎಸ್‌.ಟಿ.) ರಷ್ಟು ಅಂಕ ಪಡೆದಿರಬೇಕು.

ಸಾಮಾನ್ಯವಾಗಿ ವಿ.ವಿ.ಗಳಲ್ಲಿ ಪಠ್ಯಕ್ರಮದ ಪರೀಕ್ಷಾ ವಿಧಾನವು 4 ಸೆಮಿಸ್ಟರ್‌ ಹೊಂದಿರುತ್ತದೆ. ಪರೀಕ್ಷಾ ಕ್ರಮವು ಸೈದ್ಧಾಂತಿಕ ಪರೀಕ್ಷೆ ಹಾಗೂ ಆಂತರಿಕ ಮಾಪನಗಳಿಂದ ಕೂಡಿರುತ್ತದೆ. ಸೈದ್ಧಾಂತಿಕ ಪತ್ರಿಕೆ ಮತ್ತು ಪ್ರಾಯೋಗಿಕ ಪತ್ರಿಕೆಗಳು 100 ಅಂಕಗಳಿಂದ ಕೂಡಿರುತ್ತದೆ. ಸೆಮಿಸ್ಟರ್‌ನ ಕೊನೆಯ ಹಂತದಲ್ಲಿ ಪ್ರತಿ ಪತ್ರಿಕೆಯ ಶೇ. 50ರಷ್ಟು ಅಂಕಗಳು ಸೈದ್ಧಾಂತಿಕ ಪರೀಕ್ಷೆಯ ಆಧಾರವಾಗಿ ಹಾಗೂ ಉಳಿದ ಶೇ. 50ರಷ್ಟು ಅಂಕಗಳು ನಿರಂತರ ಆಂತರಿಕ ಮೌಲ್ಯಮಾಪನಾನುಸಾರವಾಗಿ ನೀಡಲಾಗುತ್ತದೆ.

ಇವಿಷ್ಟೇ ಅಲ್ಲದೆ, ಆದಿವಾಸಿ ಕಲ್ಯಾಣ, ಯುವಜನ ಕಲ್ಯಾಣ, ಮಾನವ ಹಕ್ಕುಗಳು, ಕಾರ್ಮಿಕ ಕಲ್ಯಾಣ, ಮಹಿಳಾ ಕಲ್ಯಾಣ ಸಿಬಂದಿ ನಿರ್ವಹಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ, ಆಸ್ಪತ್ರೆ, ವೈದ್ಯಕೀಯ, ಮಾದಕ ವ್ಯಸನ ಮುಕ್ತ ಸಮಾಲೋಚಕ, ವಿಶೇಷ ಶಿಶು ಅಭಿವೃದ್ಧಿ ಅಧಿಕಾರಿ, ಶಾಲಾ-ಕಾಲೇಜು ಪ್ರಾಧ್ಯಾಪಕ, ಮುಂತಾದವುಗಳಲ್ಲಿ ಉದ್ಯೋಗಗಳ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಸಮಾಜ ಕಾರ್ಯ ಶಿಕ್ಷಣ ಬೆಂಬಲವನ್ನು ನೀಡುತ್ತದೆ. ಸಿಬಿಎಸ್‌ಇ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿರುವುದರಿಂದ ಸಮಾಜ ಕಾರ್ಯ ಅಧ್ಯಯನ ಉತ್ತಮ ಅವಕಾಶವನ್ನು ತೆರೆದಿಡುತ್ತದೆ.

Advertisement

ಈ ಕಾಲೇಜುಗಳಲ್ಲಿ ಇದೆ ಕೋರ್ಸ್‌
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮೂಡುಬಿದಿರೆಯ ಆಳ್ವಾಸ್‌ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು, ಮಂಗಳೂರಿನ ಶ್ರೀನಿವಾಸ ಕಾಲೇಜು, ಎಂ.ವಿ. ಶೆಟ್ಟಿ ಕಾಲೇಜು, ಸಂತ ಅಲೋಶಿಯಸ್‌ ಕಾಲೇಜು, ಸ್ಕೂಲ್‌ ಆಫ್‌ ರೋಶನಿ ನಿಲಯ, ಬಳ್ಳಾಲ್‌ಬಾಗ್‌ ಶ್ರೀ ದೇವಿ ಕಾಲೇಜು, ಮಂಗಳೂರು ವಿ.ವಿ. ಮಂಗಳಗಂಗೋತ್ರಿ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಎಂಎಸ್‌ಡಬ್ಲ್ಯೂ ಕೋರ್ಸ್‌ ಕಲಿಯಬಹುದು.

ಎಲ್ಲೆಲ್ಲಿ ಉದ್ಯೋಗಾವಕಾಶ
ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಪಡೆದ ಬಳಿಕ ಪಿಎಚ್‌ಡಿಯನ್ನು ಮಾಡಬಹುದಾಗಿದೆ. ಸಮಾಜ ಕಾರ್ಯವು ವೃತ್ತಿಪರ ಹಾಗೂ ಉದ್ಯೋಗ ದೊರಕಿಸಿ ಕೊಡಬಲ್ಲ ಕೋರ್ಸ್‌ ಆಗಿದೆ. ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು ಸರಕಾರಿ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಆರೋಗ್ಯ, ಮಾನಸಿಕ ನೆಮ್ಮದಿ, ಕುಟುಂಬ ಹಾಗೂ ಮಕ್ಕಳ ಕಲ್ಯಾಣ, ಗ್ರಾಮೀಣ ಹಾಗೂ ಸಮುದಾಯ ಅಭಿವೃದ್ಧಿ, ಸುಧಾರಣಾ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬಹುದು.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next