Advertisement

ಸುಳ್ಳಾದ ಸಿದ್ಧಾಂತಗಳು

12:30 AM Jan 23, 2019 | |

ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು.

Advertisement

ಇಡೀ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಒಂದು ಮಾತನ್ನು ಪದೇ ಪದೆ ಹೇಳಲಾಗುತ್ತದೆ: “ಶ್ರೀಮಂತರು ಶ್ರೀಮಂತರಾಗುತ್ತಾ ಸಾಗಿದರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ’ ಎಂಬ ಮಾತದು. ಈ ಸಾಲು ಎಷ್ಟು ಬಾರಿ ಬಳಕೆಯಾಗಿಬಿಟ್ಟಿದೆಯೆಂದರೆ, ಅದನ್ನು ಕ್ಲೀಷೆ ಎನ್ನಲಾಗುತ್ತದೆ. ಆದರೆ, ಅದನ್ನು ಸುಳ್ಳು ಎಂದು ತಳ್ಳಿಹಾಕುವುದಕ್ಕಂತೂ ಸಾಧ್ಯವೇ ಇಲ್ಲ. 

ಇತ್ತೀಚೆಗೆ, ಆರ್ಥಿಕ ಅಸಮಾನತೆಯ  ಕುರಿತು ಆಕ್ಸ್‌ಫ್ಯಾಮ್‌ ಇಂಟರ್‌ನ್ಯಾಷನಲ್‌ ಬಿಡುಗಡೆ ಮಾಡಿರುವ ವರದಿಯು ಪ್ರಪಂಚದಲ್ಲಿನ ಆರ್ಥಿಕ ಅಸಮಾನತೆಯ ಮೇಲೆ ಬೆಳಕು ಚೆಲ್ಲಿದ್ದು, ಪ್ರತಿ ರಾಷ್ಟ್ರಗಳಿಗೂ ಈ ವರದಿಯಲ್ಲಿನ ಅಂಶಗಳು ತಮ್ಮ “ಆರ್ಥಿಕ ನೀತಿ’ಗಳನ್ನು ಮರುಪರಿಶೀಲಿಸಲು ಕಿವಿಹಿಂಡುವಂತಿವೆ. ಕಳೆದ ವರ್ಷದ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಈ ವರದಿಯು ಇಡೀ ಪ್ರಪಂಚದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವುದಷ್ಟೇ ಅಲ್ಲ, ಅದು ಮೊದಲಿಗಿಂತಲೂ ಹೆಚ್ಚು ವೇಗ ಪಡೆಯುತ್ತಿದೆ ಎನ್ನುತ್ತಿದೆ. 

ಪ್ರಪಂಚದ 380 ಕೋಟಿ ಜನರ ಬಳಿ ಇರುವ ಒಟ್ಟಾರೆ ಹಣಕ್ಕಿಂತಲೂ ಹೆಚ್ಚು ಹಣ ಕೇವಲ 26 ಶ್ರೀಮಂತರ ಬಳಿ ಇದೆಯಂತೆ. ಈ ಪರಿಸ್ಥಿತಿ ಭಾರತದಲ್ಲೇನೂ ಭಿನ್ನವಾಗಿಲ್ಲ.  ದೇಶದ ಒಂದು ಪ್ರತಿಶತ ಸಿರಿವಂತರ ಬಳಿ ಒಟ್ಟು 51.53 ಪ್ರತಿಶತ ಸಂಪತ್ತಿ ಇದೆ ಎನ್ನುತ್ತದೆ ಆಕ್ಸ್‌ಫ್ಯಾಮ್‌ನ ವರದಿ. ಕಳೆದ ಹಲವಾರು ದಶಕಗಳಿಂದ ನಾವು ನಮ್ಮ ಅರ್ಥವ್ಯವಸ್ಥೆಯನ್ನು ಸದೃಢಗೊಳಿಸಿ, ಅದನ್ನು ವಿಶ್ವ ವಿತ್ತ ವ್ಯವಸ್ಥೆಯೊಂದಿಗೆ ಪೈಪೋಟಿ ನಡೆಸುವಂತೆ ಮಾಡಲು ಪ್ರಯತ್ನಿ ಸುತ್ತಿದ್ದೇವೆ. ಆದರೆ ಆರ್ಥಿಕ ಅಸಮಾನತೆಯ ವಿಷಯದಲ್ಲಿ ಈ ಗುರಿ ತಲುಪಿದಂತಾಗಿರುವುದು ದೌರ್ಭಾಗ್ಯ! ಕೆಲವು ದಶಕಗಳ ಹಿಂದೆಯೇ ಪ್ರಪಂಚದಲ್ಲಿ ಆರ್ಥಿಕ ಅಸಮಾನತೆಯ ಅಂತರವನ್ನು ತಗ್ಗಿಸಲು ತರಹೇವಾರಿ ಪ್ರಯತ್ನಗಳಾಗಿವೆ. ಸಮಾನತೆಯ ಸಮಾಜವನ್ನು ಸೃಷ್ಟಿಸುವ ಕನಸು ಬಿತ್ತುತ್ತಾ ಕಮ್ಯುನಿಸಂ ಮತ್ತು ಸೋಷಿಯಲಿಸಂನಂಥ ತತ್ವಗಳೂ ಬಂದವಾದರೂ, ಆ ಇಸಂಗಳಿಂದಲೂ ಸಮಾನತೆ ತರಲು ಆಗಲಿಲ್ಲ, ಬದಲಾಗಿ ಅಸಮಾನತೆಯೇ ಹೆಚ್ಚಾಗಿಬಿಟ್ಟಿತು. ಲಕ್ಷಾಂತರ ಜನರು ಪ್ರಾಣಕಳೆದುಕೊಂಡರು.   

ಯಾವ ಸಮಯದಲ್ಲಿ ಈ ಸಿದ್ಧಾಂತಗಳು ಸದ್ದು ಮಾಡಲಾರಂಭಿಸಿದ್ದವೋ ಅದೇ ವೇಳೆಯಲ್ಲೇ “ಟ್ರಿಕಲ್‌ ಡೌನ್‌ ಥಿಯರಿ’ ಎಂದು ಕರೆಯಲ್ಪಡುವ ಒಂದು ಪರ್ಯಾಯ ಸಿದ್ಧಾಂತವೂ ಹುಟ್ಟಿಕೊಂಡಿತು. ಈಗಿನ ಬಹುತೇಕ ರಾಷ್ಟ್ರಗಳು ಇದೇ ಸಿದ್ಧಾಂತವನ್ನು ಅಪ್ಪಿಕೊಂಡಿವೆ. ಆರ್ಥಿಕತೆಯ ಒಟ್ಟು ಸಂಗ್ರಹಣೆಯು ಹೆಚ್ಚಾಗುತ್ತಾ ಹೋದಂತೆಲ್ಲ, ಆ ಸಂಪತ್ತಿಯು ಸಮಾಜದ ಕೆಳ-ಆದಾಯದ ವರ್ಗಕ್ಕೂ ಹರಿದುಬರುತ್ತದೆ ಮತ್ತು ನಿರುದ್ಯೋಗ ಹಾಗೂ ಆದಾಯ ವಿತರಣೆಯಲ್ಲಿನ ಅಸಮಾನತೆಗಳು ತಮ್ಮಷ್ಟಕ್ಕೆ ತಾವೇ ಬಗೆಹರಿಯುತ್ತವೆ ಎನ್ನುವ ಈ ಆಶಾದಾಯಕ ಸಿದ್ಧಾಂತವೂ ಈಗ ಪೊಳ್ಳೆಂದು ಸಾಬೀತಾಗಿದೆ. ಜಗತ್ತಿನಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು. ಯಾವೊಬ್ಬ ಅರ್ಥಶಾಸ್ತ್ರಜ್ಞರಿಗೂ ಪರಿಹಾರ ತೋಚುತ್ತಿಲ್ಲ, ಯಾವೊಂದು ರಾಜಕೀಯ ಪಕ್ಷವೂ ಪರಿಹಾರ ತೋರಿಸುತ್ತಿಲ್ಲ. 

Advertisement

ವಿಶ್ವ ಆರ್ಥಿಕ ಸಮ್ಮೇಳನ ನಡೆಯುತ್ತಿರುವ ಸಮಯದಲ್ಲೇ ಆಕ್ಸ್‌ಫ್ಯಾಮ್‌ನ ವರದಿ ಹೊರಬಂದಿರುವುದು ವಿಶೇಷ. ಈ ಬಾರಿಯ ವರ್ಲ್ಡ್ ಎಕನಾಮಿಕ್‌ ಫೋರಂನ ಸಮ್ಮೇಳನದಲ್ಲಿ ಜಗತ್ತಿನ ಅತ್ಯಂತ ಪ್ರಭಾವಿ ಜನರು ಭಾಗವಹಿಸಲಿದ್ದಾರೆ. 100ಕ್ಕೂ ಹೆಚ್ಚು ಪ್ರಭಾವಶಾಲಿ ರಾಜಕೀಯ ನಾಯಕರು, 1000ಕ್ಕೂ ಹೆಚ್ಚು ಉದ್ಯಮಿಗಳು, ನೀತಿ ನಿರೂಪಕರು ಸೇರಲಿರುವ ಈ ಸಮ್ಮಳೇನದ ಉದ್ದೇಶ “ಈ ಪ್ರಭಾವಿಗಳನ್ನು ಒಂದೆಡೆ ಸೇರಿಸಿ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಹುಡುಕುವುದು’ ಎನ್ನುತ್ತದೆ ವಿಶ್ವ ಆರ್ಥಿಕ ವೇದಿಕೆ. ಹಾಗಿದ್ದರೆ, ಅಸಮಾನತೆಯನ್ನು ತಗ್ಗಿಸುವ ವಿಚಾರದಲ್ಲಿ ಈ ಬಾರಿಯಾದರೂ ಕ್ರಾಂತಿಕಾರಕ ಐಡಿಯಾಗಳು ಹೊರಬೀಳುತ್ತವಾ ಕಾದು ನೋಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next