Advertisement

ಹೆಚ್ಚುತ್ತಿರುವ ಮಾನವ ಕಳ್ಳಸಾಗಣೆ; ಸಂಕಷ್ಟದಲ್ಲಿ ಕಾರ್ಕಳದ ಮಹಿಳೆ

11:53 AM Apr 06, 2017 | |

ಉಡುಪಿ: ಕರಾವಳಿಗೂ ಕೊಲ್ಲಿ ರಾಷ್ಟ್ರಗಳಿಗೂ ಬಹಳ ವರ್ಷದ ನಂಟಿದೆ. ಅಧಿಕ ಸಂಪತ್ತಿನ ಆಸೆಯಿಂದ ಇಲ್ಲಿನ ಯುವಕ – ಯುವತಿಯರು ಅಲ್ಲಿಗೆ ಹೋಗಿ ಬರುವುದು ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಅನೇಕ ಏಜೆನ್ಸಿಗಳ ಮುಖಾಂತರ ಬೇರೆ ಬೇರೆ ಕಾರಣಗಳಿಂದ ಇಲ್ಲಿಂದ ಹೋದವರು ಸಂತ್ರಸ್ತರಾಗುತ್ತಿದ್ದಾರೆ. ಏಜಿನ್ಸಿಗಳು ಸರಿಯಾದ ಕಾನೂನು ಕ್ರಮಗಳನ್ನು ಅನುಸರಿಸದಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

Advertisement

ಇದಕ್ಕೊಂದು ನಿದರ್ಶನ ಎನ್ನುವ ಹಾಗೇ ಮಂಗಳೂರಿನಲ್ಲಿ ಏಜೆಂಟರನ್ನು ಹೊಂದಿರುವ ಈ ಹಿಂದೆಯೇ ಅನುಮತಿ ರದ್ದಾಗಿರುವ ಟ್ರಿಯೋ ಟ್ರಾಕ್ಸ್‌ ಟ್ರಾವೆಲ್ಸ್‌ ಕನ್ಸಲ್‌ಟರ್ ಏಜೆನ್ಸಿಯು ಕಾರ್ಕಳದ ಜೆಸಿಂತಾ ಎನ್ನುವ ಮಹಿಳೆಗೆ ಕತಾರ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿ ವಂಚಿಸಿದ ಪ್ರಕರಣ ನಡೆದಿದೆ. ಈಗ ಈ ಮಹಿಳೆ ಸಂಕಷ್ಟದಲ್ಲಿದ್ದು, ಅಲ್ಲಿಂದ ಕರೆತರುವ ಪ್ರಯತ್ನ ಆಗಬೇಕಿದೆ.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನ್‌ಭಾಗ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಮಾಹಿತಿ ನೀಡಿದರು. ಕ‌ತಾರ್‌ನಲ್ಲಿ ಉದ್ಯೋಗ ನೀಡುವುದಾಗಿ ಜೆಸಿಂತಾ ಅವರನ್ನು ವಂಚಿಸಿ ಸೌದಿ ಅರೇಬಿಯಾಕ್ಕೆ ಕಳುಹಿಸಲಾಗಿದ್ದು, 10 ತಿಂಗಳಿನಿಂದ ಅಲ್ಲಿನ ಯಂಬು ಎನ್ನುವ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸದ್ಯದಲ್ಲೇ ಭಾರತಕ್ಕೆ ಕರೆತರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

10 ತಿಂಗಳ ಹಿಂದೆ ಪತಿ ತೀರಿಕೊಂಡಾಗ ಮಕ್ಕಳ ವಿದ್ಯಾಭ್ಯಾಸ, ಜೀವನ ನಿರ್ವಹಣೆಗಾಗಿ ಜೆಸಿಂತಾಗೆ ಉದ್ಯೋಗ ಅನಿವಾ
ರ್ಯವಾಗಿತ್ತು. ಮಂಗಳೂರಿನ ಸಬ್‌ ಏಜೆಂಟ್‌ ಜೇಮ್ಸ್‌ ಕತಾರ್‌ನಲ್ಲಿ ಭಾರತೀಯ ಕುಟುಂಬವೊಂದರ ಪಾಲನೆಗಾಗಿ ಮಹಿಳೆ ಅಗತ್ಯವಿದ್ದು, ತಿಂಗಳಿಗೆ 25,000 ರೂ. ವೇತನದ ಆಮಿಶವೊಡ್ಡಿದ. ಇದನ್ನು ನಂಬಿದ ಜೆಸಿಂತಾರನ್ನು ಜೂನ್‌ನಲ್ಲಿ ಕತಾರ್‌ಗೆಂದು ಹೇಳಿ ಸೌದಿ ಅರೇಬಿಯಾಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅವರ ಪುತ್ರಿಯರಾದ ವೆಲಿಟಾ, ವಿನಿಟಾ ಹಾಗೂ ಪುತ್ರ ವಿನ್‌ರೋಯ್‌ಗೆ ತಾಯಿ ಕತಾರ್‌ನಲ್ಲಿಲ್ಲ ಸೌದಿಯಲ್ಲಿದ್ದಾರೆ ಎಂಬ ವಿಚಾರ ಗೊತ್ತಾದದ್ದು ಕಳೆದ ನವೆಂಬರ್‌ನಲ್ಲಿ ಎಂದರು.

5 ಲಕ್ಷ ರೂ. ವಂಚನೆ
ಜೆಸಿಂತಾ ಬಗ್ಗೆ ಬೆಂಗಳೂರಿನಲ್ಲಿರುವ ಅನಿವಾಸಿ ಭಾರತೀಯರ ವೇದಿಕೆ ಮೂಲಕ ರಿಯಾದ್‌ನ ದೂತವಾಸವನ್ನು ಸಂಪರ್ಕಿಸ
ಲಾಗಿದೆ. ಆನಂತರ ಜೆಸಿಂತಾಗೆ ಉದ್ಯೋಗ ನೀಡಿದ ಅಬ್ದುಲ್‌ ಅಲ್ಮುತೈರಿಯನ್ನು ವಿಚಾರಿಸಲಾಗಿದ್ದು, ಆತ 2 ವರ್ಷ ಮನೆಯಲ್ಲಿ
ಕೆಲಸ ಮಾಡಲು ಒಪ್ಪಂದ ಮಾಡಿದ್ದು, ಇದಕ್ಕಾಗಿ ಭಾರತೀಯ ಮೂಲದ ಏಜೆಂಟರು 5 ಲ. ರೂ. ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾನೆ. ಮಂಗಳೂರು ಏಜೆಂಟ್‌ ಜೇಮ್ಸ್‌ನ ಮುಖಾಂತರ ಮುಂಬಯಿಯ ಏಜೆಂಟ್‌ ಶಾಭಾಕಾನ್‌ ಇದರಲ್ಲಿ ಗಿಯಾಗಿಯಾಗಿರುವ ಬಗ್ಗೆ ಸಂಶಯವಿದೆ. ಆದರೆ 5 ಲ. ರೂ. ಯಾರು ಪಡೆದಿದ್ದಾರೆ ಎಂದು ತಿಳಿದು ಬಂದಿಲ್ಲ. ಅಲ್ಲದೇ 5 ಲ. ರೂ. ವಾಪಸು ನೀಡಿದರೆ ಆಕೆಯನ್ನು ಭಾರತಕ್ಕೆ ಕಳು ಹಿಸಲಾಗುವುದು ಎಂದು ಉದ್ಯೋಗದಾತ ತಿಳಿಸಿದ್ದಾನೆ ಎಂದರು.

Advertisement

ವಿದೇಶಾಂಗ ಇಲಾಖೆಗೂ ಮಾಹಿತಿ
2016ರ ಡಿಸೆಂಬರ್‌ನಲ್ಲಿ ಜೆಸಿಂತಾ ಅವರ ಮಕ್ಕಳು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ತಿಳಿಸಿದ್ದು, ಅಂದಿನಿಂದಲೇ ಕರೆತರಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ವಾರದ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಸಂಪರ್ಕಿಸಿದ್ದು, ಸಚಿವಾಲಯದ ಅಧಿಕಾರಿ ಎಂ.ಸಿ. ಲೂಥರ್‌ ಪ್ರತಿಷ್ಠಾನವನ್ನು ಸಂಪರ್ಕಿಸಿ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಹದಗೆಡುತ್ತಿದೆ ಜೆಸಿಂತಾ ಆರೋಗ್ಯಈ ಮಧ್ಯೆ ಜೆಸಿಂತಾ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಅವರು ದಿನಕ್ಕೆ 16 ಗಂಟೆಗಳ ಕಾಲ ಅಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಅವರ ಗಂಡ ಕಳೆದ ವರ್ಷ ಟಿಬಿ ಕಾಯಿಲೆಯಿಂದಾಗಿ ಮೃತಪಟ್ಟಿರುವುದರಿಂದ ಜೆಸಿಂತಾಗೂ ಅದೇ ಕಾಯಿಲೆ ಬಂದಿರಬಹುದು ಎಂದು ಆತಂಕ ಎದುರಾಗಿದೆ.

ಪ್ರಧಾನಿಯಿಂದ ರೀ ಟ್ವೀಟ್‌
ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ರೀ ಟ್ವೀಟ್‌ ಮಾಡಿದ್ದು, ಜೆಸಿಂತಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಈ ಸಂಬಂಧ ಕಾರ್ಯ ಪ್ರವೃತ್ತರಾಗುವಂತೆ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಸೂಚಿಸಿದ್ದಾರೆ. ಜೆಸಿಂತಾ ಅವರಿರುವ ಜಾಗವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದು, ಪಾಸ್‌ಪೋರ್ಟ್‌ ಅಥವಾ ವೀಸಾ ಮಾಹಿತಿ ಕೊಡಿ ಎಂದಿದ್ದಾರೆ.

ಮಾನವ ಕಳ್ಳಸಾಗಣೆ ಜಾಲ
ಜೆಸಿಂತಾ ಅವರು ಸೌದಿ ಅರೇಬಿಯಾಕ್ಕೆ ತೆರಳುವ ವೇಳೆ ಕರಾವಳಿಯ ದಿಯಾ ಮತ್ತು ಜೇನ್‌ ಎಂಬ ಮತ್ತಿಬ್ಬರು ಇದೇ ಏಜೆಂಟರ ಮೂಲಕ ತೆರಳಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ನಾಲ್ವರು ಹಾಗೂ ಮೇಯಲ್ಲಿ ಐವರು ಹೀಗೆ ಒಟ್ಟು 9 ಯುವತಿಯರು ಮಂಗಳೂರಿನಿಂದ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೆಸಿಂತಾ ಅವರನ್ನು 90 ದಿನಗಳ ಅವಧಿಯ ವೀಸಾ ನೀಡಿ ಕಳುಹಿಸಲಾಗಿದೆ. ಅನುಮತಿ ರದ್ದಾದ ಅನೇಕ ಏಜೆನ್ಸಿಗಳಿಗೆ ವೀಸಾ ಹೇಗೆ ಸಿಗುತ್ತಿವೆ ಅನ್ನುವುದೇ ಕುತೂಹಲಕರವಾಗಿದೆ ಎಂದು ಡಾ| ರವೀಂದ್ರನಾಥ ಶ್ಯಾನ್‌ಭಾಗ್‌ ತಿಳಿಸಿದರು.

ಪೊಲೀಸರ ನಿರ್ಲಕ್ಷ
ಡಿ. 30ರಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಮೂಲಕ ಸಹಾಯಕ ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಲಾಯಿತು. ಮಂಗಳೂರು ಪೊಲೀಸರು ಜೇಮ್ಸ್‌ನನ್ನು ಹಿಡಿದು ವಿಚಾರಿಸಿದರಾದರೂ ಅವನಿಂದ ಯಾವುದೇ ಮಾಹಿತಿಯೂ ಸಿಗಲಿಲ್ಲ. ಪ್ರಕರಣ ಗಂಭೀರವಾಗಿದ್ದರೂ ಕಳೆದ 3 ತಿಂಗಳಿನಿಂದ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದು ಮಾತ್ರ ದುರಂತ ಎಂದು ಡಾ| ಶ್ಯಾನ್‌ಭಾಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next