ದೇವದುರ್ಗ: ಹವಾಮಾನ ಬದಲಾದ ಹಿನ್ನೆಲೆಯಲ್ಲಿ ಶೀತ, ಕೆಮ್ಮು, ಜ್ವರ, ನೆಗಡಿ ಮಕ್ಕಳು ಸೇರಿದಂತೆ ಎಲ್ಲರಿಗೂ ವ್ಯಾಪಿಸಿದೆ. ಸರಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಜನರಲ್ಲಿ ಜ್ವರದ ಬಾಧೆ ಹೆಚ್ಚಾಗುತ್ತಿದ್ದು, ಮಕ್ಕಳಿಂದ ಹಿಡಿದು ವಯಸ್ಕರು,ವೃದ್ಧರವರೆಗೂ ಜ್ವರ ಜೀವ ಹಿಂಡುತ್ತಿದೆ. ಪ್ರತಿದಿನ ರೋಗಿಗಳ ಸಂಖ್ಯೆ 350ರ ಗಡಿ ದಾಟಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶಾಲಾ-ಕಾಲೇಜು, ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾಗಿವೆ.
ಜಾಲಹಳ್ಳಿ ವರಟಗೇರ ಸರಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಶೀತ, ಕೆಮ್ಮು, ನೆಗಡಿ, ಜ್ವರ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಶಾಲೆಗಳಿಗೆ ಬರುವಂತೆ ಸೂಚನೆ ನೀಡಲಾಗುತ್ತಿದೆ. ವಾರವಾದರೂ ಜ್ವರ ಕಡಿಮೆ ಆಗದೇ ಇದ್ದಲ್ಲಿ ಅಂತಹ ರೋಗಿಗಳಿಗೆ ಡೆಂಘೀ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.
ಕೊರೊನಾ ಮೂರನೇ ಅಲೆಯಲ್ಲಿ ಬಹುತೇಕ ಮಕ್ಕಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಾಸ್ಕ್, ಹಾಕಿಕೊಳ್ಳುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಳ್ಳಿಗಳಲ್ಲಿ ಜಾಗೃತಿ ಸಾರಿದೆ.
ಬದಲಾದ ಹವಾಮಾನ ಹಿನ್ನೆಲೆಯಲ್ಲಿ ಬಹುತೇಕರಲ್ಲಿ ಕೆಮ್ಮು, ಶೀತ, ನೆಗಡಿ, ಜ್ವರದ ಲಕ್ಷಣಗಳು ಕಂಡು ಬರುತ್ತಿವೆ. ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಒಬ್ಬರಿಂದ ಮತ್ತೂಬ್ಬರಿಗೆ ವೈರಲ್ ಹರಡುತ್ತಿದೆ.
-ಡಾ|ಬನದೇಶ್ವರ, ತಾಲೂಕು ಆರೋಗ್ಯಾಧಿಕಾರಿ