Advertisement
ಮಂಗಳೂರು: ಆಟವಾಡುತ್ತ, ಶಾಲೆಗೆ ಹೋಗುತ್ತ, ಆಡಿ ನಲಿದಾಡಬೇಕಾದ ಅಪ್ರಾಪ್ತ ವಯಸ್ಸಿನ ಮಕ್ಕಳೇ ಗರ್ಭಿಣಿಯರಾಗಿ ತಾಯ್ತನದ ಭಾರ ಹೊರುತ್ತಿರುವ ಕರುಣಾಜನಕ ಕತೆಯಿದು! ಅಷ್ಟಕ್ಕೂ ಈ ಮಕ್ಕಳು ಅವರಾಗಿಯೇ ಮಾಡಿಕೊಂಡ ತಪ್ಪಲ್ಲ. ಯಾರಧ್ದೋ ಮೋಸದಾಟಕ್ಕೆ ಬಲಿಯಾಗಿ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲೇ, ಅಂದರೆ 18 ವರ್ಷಕ್ಕೂ ಮೊದಲೇ ಗರ್ಭ ಧರಿಸುತ್ತಿರುವುದು, ಅನಿವಾರ್ಯವಾಗಿ ತಾಯ್ತನಕ್ಕೆ ದೂಡಲ್ಪಡುವ ಪ್ರಕರಣಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ.
ದ.ಕ. ಜಿಲ್ಲೆಯಲ್ಲಿ 2014-15ರಿಂದ ಇಲ್ಲಿವರೆಗೆ ಒಟ್ಟು 13 ಇಂತಹ ದೂರುಗಳು ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ದಾಖಲಾಗಿವೆ. 2014-15ರಲ್ಲಿ ಎರಡು, 2015-16ರಲ್ಲಿ ನಾಲ್ಕು, 2016-17ರಲ್ಲಿ ಐದು ಹಾಗೂ 2017-18ರಲ್ಲಿ ಇಲ್ಲಿವರೆಗೆ 2 ಮಂದಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದಾರೆ. ಈ ಪೈಕಿ ನಾಲ್ವರಿಗೆ ಕಾನೂನು ಸಮ್ಮತ ಗರ್ಭಪಾತ ನಡೆಸಲಾಗಿದ್ದು, ಅಪ್ರಾಪ್ತ ವಯಸ್ಸಿನವರಿಗೆ ಜನಿಸಿದ ಮಕ್ಕಳ ಪೈಕಿ ಮೂವರನ್ನು ಕೌಟುಂಬಿಕ ರಕ್ಷಣೆಗಾಗಿ ದತ್ತು ನೀಡಲಾಗಿದೆ. ಮೂವರು ಮಕ್ಕಳನ್ನು ಆರೈಕೆ ಮತ್ತು ಸಂರಕ್ಷಣೆ ಉದ್ದೇಶಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಈ ನಡುವೆ ತಂದೆ ಹಾಗೂ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಎರಡು ದೂರುಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10 ಮಂದಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸಿದ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆೆ.
Related Articles
ನಗರದಲ್ಲಿ ಹಣ ಮತ್ತು ಬಡತನ ಕಾರಣದಿಂದ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯುವತಿಯರು ಗರ್ಭ ಧರಿಸುತ್ತಿರುವ ಪ್ರಕರಣಗಳೂ ನಿರಾತಂಕವಾಗಿ ನಡೆಯುತ್ತಿವೆ. ಮೆಡಿಕಲ್ ಶಾಪ್‌ಗ್ಳಲ್ಲಿ ಕೆಲಸ ಮಾಡುತ್ತಿರುವ ಹೆಸರು ಹೇಳಲಿಚ್ಛಿಸದ ಕೆಲವು ಸಿಬಂದಿಗಳು ಹೇಳುವ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಅದೆಷ್ಟೋ ಮಂದಿ ಯುವತಿಯರು ಗರ್ಭಪಾತ ಮಾಡಿಸಿಕೊಳ್ಳಲು ಗುಳಿಗೆಗಳನ್ನು ಕೇಳಿಕೊಂಡು ಬರುತ್ತಿರುವ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ. ನಗರದಲ್ಲಿ ಇತ್ತೀಚೆಗಷ್ಟೇ ಬೆಳಕಿಗೆ ಬಂದ ಅನೈತಿಕ ಚಟುವಟಿಕೆಯನ್ನೇ ತನ್ನ ವೃತ್ತಿಯಾಗಿಸಿ ಕೊಂಡ ಬಾಲಕಿಯೊಬ್ಬಳು ಗರ್ಭ ಧರಿಸಿದ ಘಟನೆ ಇದಕ್ಕೆ ಪುಷ್ಟಿ ನೀಡುತ್ತದೆ. ಇಲ್ಲಿಯೂ ಆಕೆಯ ಈ ಚಟುವಟಿಕೆಗೆ ಬಡತನವೇ ಕಾರಣ ಎಂದು ಹೇಳಲಾಗಿದೆ. ಸದ್ಯ ಆ ಬಾಲಕಿ ಪೊಲೀಸರ ವಶದಲ್ಲಿದ್ದಾಳೆ.
Advertisement
ಹೆಚ್ಚುತ್ತಿದೆ ಲೈಂಗಿಕ ದೌರ್ಜನ್ಯ ಪ್ರಕರಣಉಭಯ ಜಿಲ್ಲೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ಪೋಕ್ಸೋ ಕಾಯ್ದೆಯಡಿ ಕಳೆದ ಐದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 191 ಪ್ರಕರಣ ದಾಖಲಾಗಿವೆ. ಉಡುಪಿಯಲ್ಲಿ ಒಟ್ಟು 110 ಲೈಂಗಿಕ ದೌರ್ಜನ್ಯ ಪ್ರಕರಣ ಕಂಡುಬಂದಿವೆ. ಶಿಕ್ಷಾರ್ಹ ಅಪರಾಧ
ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದಾಗಿ ಹೆಣ್ಣು ಮಕ್ಕಳು ವಯೋಪೂರ್ವದಲ್ಲೇ ಗರ್ಭಿಣಿಯರಾಗುತ್ತಿರುವ ಪ್ರಕರಣ ನಡೆಯುತ್ತಲೇ ಇದೆ. ಆದರೆ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಮೊದಲು ಆಕೆ ಗರ್ಭ ಧರಿಸಿದರೆ ಅದಕ್ಕೆ ಕಾರಣನಾದ ಯುವಕನ ಮೇಲೆ ಬಾಲ್ಯವಿವಾಹ, ಪೋಕ್ಸೋ, ಅಪಹರಣ ಈ ಮೂರೂ ಕೇಸ್‌ಗಳು ದಾಖಲಾಗುತ್ತವಲ್ಲದೇ, ಎಲ್ಲಾ ಶಿಕ್ಷೆಯನ್ನು ಯುವಕನಿಗೇ ನೀಡಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಗರಿಷ್ಠ ಪ್ರಮಾಣದ ಶಿಕ್ಷೆಯೊಂದಿಗೆ, ಜೀವಾವಧಿ ಶಿಕ್ಷೆಯೂ ಆಗುವ ಸಾಧ್ಯತೆಗಳಿವೆ. ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಲ್ಲಿ ಅವು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲ್ಪಡುತ್ತದೆ. ಏನು ನಡೆಯುತ್ತಿದೆ ಎಂದು ತಿಳಿಯದಷ್ಟೂ ಮುಗ್ಧರಾಗಿರುವ ಮಕ್ಕಳ ಮೇಲೆ ತಮ್ಮ ಸ್ವಾರ್ಥಕ್ಕೋಸ್ಕರ ಲೈಂಗಿಕ ದೌರ್ಜನ್ಯ ನಡೆಸುವ ಹೀನ ಕೃತ್ಯಕ್ಕೆ ಮಕ್ಕಳು ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳ ಮುಗ್ಧತೆಯನ್ನೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹೆಚ್ಚಾಗಿ 14 ವರ್ಷ ಮೇಲ್ಪಟ್ಟ ಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ 13 ದೂರು ಬಂದಿದೆ. ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಬಾಲಕಿಯರಿಗೆ ಶಾಲೆಗಳಲ್ಲಿ ಅರಿವು ಮೂಡಿಸುವ ಕೆಲಸಗಳೂ ನಡೆಯುತ್ತಿವೆ. ಬಾಲ್ಯವಿವಾಹಕ್ಕೆ ಸಂಬಂಧಿಸಿ ಯಾವುದೇ ದೂರು ಬಂದಿಲ್ಲ.
– ಕೆ. ನಿಕೇಶ್ ಶೆಟ್ಟಿ , ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ – ಧನ್ಯಾ ಬಾಳೆಕಜೆ