ಲಿಂಗಸುಗೂರು: ವಿದ್ಯಾರ್ಥಿಗಳು ವೈಯಕ್ತಕ ಬೆಳವಣಿಗೆ ಜತೆ ದೇಶದ ಬೆಳವಣಿಗೆ ಬಗ್ಗೆ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಬಿ.ನಿಖೀಲ್ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಎಂಎಲ್‌ಬಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವೈಯಕ್ತಿಕ ಬೆಳವಣಿಗೆ ಜೊತೆಗೆ ಸಮಾಜಿಕ ಬೆಳವಣಿಗೆ ನೋಡಬೇಕು. ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ-ದೇಶ ಉತ್ತುಂಗಕ್ಕೇರಿಸುವ ಮನೋಭಾವನೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಿದೆ.
ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಚುರುಕತನ ಹೆಚ್ಚು ಎಂದರು. ಮಾನ್ವಿ ಪೊಲೀಸ್ ಠಾಣೆ ಅತ್ಯತ್ತುಮ ಠಾಣೆಗಳಲ್ಲಿ ದೇಶದ 5ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳು ಸಾಗಬೇಕಿದೆ. ಮಟ್ಕಾ, ಇಸ್ಟೀಟ್ ಆಟದಲ್ಲಿ ಸಿಕ್ಕಿಬಿದ್ದವರಿಗೆ ಈ ಹಿಂದೆ ಜೈಲಿಗೆ ಹಾಕುತ್ತಿದ್ದಿಲ್ಲ, ಈಗ ಕಾನೂನು ತಿದ್ದುಪಡಿ ಮಾಡಿ ಇಸ್ಟೀಟ್, ಮಟ್ಕಾ ಆಟದಲ್ಲಿ ತೊಡಗಿದವವರಿಗೆ ಜೈಲಿಗೆ ಕಳಿಸಲಾಗುವುದು.
ಅಪರಾಧ ಮಾಡಿ ಒಮ್ಮೆ ಜೈಲಿಗೆ ಹೋದರೆ ಅವರಿಗೆ ಸರ್ಕಾರಿ ಅಥವಾ ಖಾಸಗಿ ನೌಕರಿ ಸಿಗುವ ಸಾಧ್ಯತೆ ಕಡಿಮೆ ಎಂದರು. ರಾಜ್ಯದಲ್ಲಿ ಮೊದಲ ಬಾರಿ: ಪೊಲೀಸ್ ಇಲಾಖೆ ಇತಿಹಾಸದಲ್ಲಿ ಮಾಡಲಾಗದ ಕೆಲಸ ಪಟ್ಟಣದಲ್ಲಿ ಬುಧವಾರ ಮಾಡಲಾಗಿದೆ. ಪೊಲೀಸ್ ಇಲಾಖೆಗೆ ಸಂಬಂಧಿ ಸಿದಂತೆ ಶ್ವಾನದಳ ಕಾರ್ಯವೈಖರಿ, ಪೊಲೀಸ್ ತನಿಖೆಗಳು, ಬಂದೂಕು, ಗನ್, ಬೇಡಿ, ಆಲ್ಕೋಮೀಟರ್, ಐಪಿಸಿ ಕಾಯ್ದೆ, ಪ್ರಿಂಟ್, ಸಂಚಾರಿ ನಿಯಮಗಳ ಪರಿಕರಗಳು ಸೇರಿ ಇತರೆ ವಸ್ತುಗಳನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಕಾರ್ಯವೈಖರಿಗಳ ಬಗ್ಗೆ ಅರಿವು ಮೂಡಿಸಿದರು.
ಈ ವೇಳೆ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ್, ಪ್ರಾಚಾರ್ಯ ವೀರೇಶ ಪವಾರ್, ಬಸವರಾಜ ಮೇಟಿ, ಬಿಇಒ ಹುಂಬಣ್ಣ ರಾಠೂಡ್, ಸಿಡಿಪಿಒ ಶರಣಮ್ಮ ಕಾರನೂರು ಸೇರಿದಂತೆ ಇತರರಿದ್ದರು.