Advertisement

ವಾಯು, ಶಬ್ದ ಮಾಲಿನ್ಯ ಪ್ರಮಾಣ ಏರಿಕೆ

06:14 AM Jun 05, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ತೆರವಾದ ಬೆನ್ನಲ್ಲೇ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಿಂದಿನಂತೆ ವಾಹನಗಳು ರಸ್ತೆಗಿಳಿಯುತ್ತಿವೆ. ಕೈಗಾರಿಕೆಗಳು ಪುನಾರಂಭಗೊಂಡಿವೆ. ವ್ಯಾಪಾರ-ವಾಣಿಚಟುವಟಿಕೆಗಳೂ ಗರಿಗೆದರಿವೆ. ಇದರೊಂದಿಗೆ  ವಾಯು ಮತ್ತು ಶಬ್ದ ಮಾಲಿನ್ಯವೂ ನಿಧಾನವಾಗಿ ಹಿಂದಿನ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ ಇಸುಳಿವು ಸಿಕ್ಕಿದ್ದು, ರಾಜ್ಯ ಮಾಲಿನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದಲ್ಲಿ ಇದು ಬೆಳಕಿಗೆ ಬಂದಿದೆ.

Advertisement

ಲಾಕ್‌ಡೌನ್‌ ಅವಧಿ ಮತ್ತು ತೆರವಾದ ನಂತರದ ಅವಧಿಗೆ ಹೋಲಿಸಿದರೆ, ಕೊಂಚ ವಾಯು ಮತ್ತು ಶಬ್ಧಮಾಲಿನ್ಯ ಏರಿಕೆ ಆಗಿರುವುದು ದೃಢವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಬನ್‌ ಡೈ ಆಕ್ಸೆ„ಡ್‌, ಸಲ್ಫರ್‌, ನೈಟ್ರೋಜನ್‌  ಅಂಶಗಳು ಕೂಡ ಕೆಲವು ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಹೊಗೆ ಉಗುಳುವ ಅಪಾಯಕಾರಿ ಕಾರ್ಖಾನೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶೇ.33 ರಿಂದ ಶೇ.40 (ಲಾಕ್‌ಡೌನ್‌ ಬಳಿಕ ಪರಿಸರ  ಮಾಲಿನ್ಯ ಮಂಡಳಿ ಮಾಡಿದ್ದ ಅಧ್ಯಯನ) ಪರಿಸರ ಮಾಲಿನ್ಯದ ಪ್ರಮಾಣ ತಗ್ಗಿತ್ತು.

ಶಬ್ದ ಮಾಲಿನ್ಯದ ಪ್ರಮಾಣ ಕೂಡ ಶೇ.9ರಿಂದ 14ಕ್ಕೆ ಇಳಿಕೆ ಆಗಿತ್ತು. ಆದರೆ, ಲಾಕ್‌ಡೌನ್‌ ತೆರವಾದ ನಂತರ ಇದರಲ್ಲಿ ವ್ಯತ್ಯಾಸ  ಕಂಡುಬರುತ್ತಿದೆ. ಉದಾಹರಣೆಗೆ ಕಳೆದ ಮೇ-14ರಂದು ನಗರದ ಸಿಲ್ಕ್ಬೋರ್ಡ್‌ನಲ್ಲಿ 50ರಷ್ಟು ಮಾಲಿನ್ಯದ ಪ್ರಮಾಣ ವಿತ್ತು. ಈಗ ಅದರ ಪ್ರಮಾಣ 55ಕ್ಕೆ ಬಂದು ನಿಂತಿದೆ. ಹಾಗೆಯೇ ಜಯನಗರದ ಶಾಲಿನಿ ಆಟದ ಮೈದಾನ ದಲ್ಲಿ  ಮಾಲಿನ್ಯದ ಪ್ರಮಾಣ 51ರಷ್ಟಿತ್ತು. ಈಗ ಅದರ ಪ್ರಮಾಣ 47ಆಗಿದೆ. ಸಿಟಿ ರೈಲ್ವೆ ನಿಲ್ದಾಣದಲ್ಲಿ ಈಗಿನ ಮಾಲಿನ್ಯದ ಪ್ರಮಾಣ 104 ಆಗಿದ್ದು, ಎಸ್‌.ಜೆ ಹಳ್ಳಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಈಗ 48ಕ್ಕೆ ಹೆಚ್ಚಳವಾಗಿದೆ.

ಲಾಕ್‌ಡೌನ್‌  ಸಡಿಲಿಕೆ ಮಾಡಿದ ಮೇಲೆ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಬಸ್‌, ಆಟೋ, ಲಾರಿ ಜತೆಗೆ ಬೈಕ್‌ಗಳು ಕೂಡ ರಸ್ತೆಗಿಳಿದಿವೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಶಬ್ಧ ಮಾಲಿನ್ಯದ ಪ್ರಮಾಣವು ಕೂಡ ದಿನೇ ದಿನೆ ಏರಿಕೆ  ಆಗುತ್ತಿದೆ. ಲಾಕ್‌ಡೌನ್‌ ವೇಳೆ ವೈಟ್‌ ಫೀಲ್ಡ್‌ ಪ್ರದೇಶದಲ್ಲಿ ಶಬ್ಧ ಮಾಲಿನ್ಯ 58.4 ಡೆಸಿಬಲ್‌ ಆಗಿತ್ತು. ಶನಿವಾರದ ವೇಳೆಗೆ ಅದು 59 ಡೆಸಿಬಲ್‌ಗೆ ತಲುಪಿದೆ. ಹಾಗೆಯೇ ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 66.4 ಡೆಸಿಬಲ್‌ನಲ್ಲಿದ್ದ  ಶಬ್ದ ಮಾಲಿನ್ಯ ಈಗ 70.3 ಡಿಸಿಬಲ್‌ಗೆ ಬಂದು ನಿಂತಿದೆ.

ಮಾರತ್‌ ಹಳ್ಳಿಯಲ್ಲಿ ಲಾಕ್‌ಡೌನ್‌ ವೇಳೆ ಶಬ್ದ ಮಾಲಿನ್ಯ 49 ಡೆಸಿಬಲ್‌ ಆಗಿತ್ತು. ಅದು ಈಗ 84.3 ಡೆಸಿಬಲ್‌ಗೆ ತಲುಪಿದೆ. ಹಾಗೆಯೇ ಪರಿಸರ ಭವನದಲ್ಲಿ 56.8 ಡೆಸಿಬಲ್‌ ಇತ್ತು.  ಶನಿವಾರದ ವೇಳೆಗೆ ಅದು 62.1ಕ್ಕೆ ಏರಿಕೆ ಆಗಿದೆ. ಜತೆಗೆ ನಿಮಾನ್ಸ್‌ ವ್ಯಾಪ್ತಿಯಲ್ಲಿ ಶಬ್ದ ಮಾಲಿನ್ಯ 64.4.ಡೆಸಿಬಲ್‌ ಆಗಿತ್ತು. ಈಗ ಅದು 70.3 ಡೆಸಿಬಲ್‌ ಗೆ ಏರಿಕೆಯಾಗಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿನ ಕಲುಷಿತ ವಾತಾವರಣದಿಂದ ನಾವು ಬುದ್ಧಿ ಕಲಿಯಬೇಕಾಗಿದೆ.

Advertisement

ಬೈಕ್‌ ಸೇರಿದಂತೆ ಇನ್ನಿತರ ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಮರಗಿಡಗಳನ್ನು ಬೆಳಸ  ಬೇಕಾಗಿದೆ ಎಂದು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್‌ ಹೇಳಿದ್ದಾರೆ. ಶಬ್ದ ಮಾಲಿನ್ಯ ಮನುಷ್ಯರ ಮೇಲೆ ಪ್ರಭಾವ ಬೀರಲಿದೆ. ಮನಸಿಗೆ ಬಂದಂತೆ ಜೋರಾಗಿ ಹಾರ್ನ್ ಮಾಡುವುದರಿಂದ  ಕಿವುಡುತನಕ್ಕೆ ಕಾರಣವಾಗ ಬಹುದು. ಮಾನಸಿಕ ರೋಗವೂ ಬರಬಹುದು. ಈ ಬಗ್ಗೆ ವಾಹನ ಸವಾರರು ಗಮನಹರಿಸಬೇಕು ಎಂದು ಹೇಳಿದ್ದಾರೆ.

ವಾಯು ಮಾಲಿನ್ಯದ ಬಗ್ಗೆ ಎಚ್ಚರಿಕೆ ಅಗತ್ಯ: ಪ್ರತಿಯೊಬ್ಬರೂ ವಾಯು ಮಾಲಿನ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಎಚ್ಚರಿಕೆ ತಪ್ಪಿದರೆ ಆರೋಗ್ಯದ ಮೇಲೆ ಬಹಳಷ್ಟು ಗಂಭೀರ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳುತ್ತಾರೆ.  ಗಾಳಿಯ ಗುಣಮಟ್ಟ 100 ವರೆಗೆ ಶುದ್ಧವಾಗಿರುತ್ತದೆ. ಅದನ್ನು ಮೀರಿದರೆ ಮನಷ್ಯರಿಗೆ ಆಪತ್ತು ತಪ್ಪಿದ್ದಲ್ಲ. ಈಗಾಗಲೇ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು 300 ರಿಂದ 400 ತಲುಪಿದೆ. ಇದು ಅಸ್ತಮಾ ಸೇರಿದಂತೆ ಅನೇಕ ರೀತಿಯ  ವ್ಯಾದಿಗಳಿಗೆ ಕಾರಣವಾಗಲಿದೆ. ಮಕ್ಕಳ ಆರೋಗ್ಯದ ಮೇಲೂ ಪ್ರಭಾವ ಬೀರಲಿದೆ ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕ  ಡಾ.ನಾಗರಾಜ್‌ ಹೇಳಿದರು.

ಧೂಮಪಾನ ಮಾಡುವವರಿಗೆ ಅತಿ ವೇಗವಾಗಿ ಕೋವಿಡ್‌ 19 ಸೋಂಕು ತಗುಲುತ್ತದೆ. ಆ ಹಿನ್ನೆಲೆಯಲ್ಲಿ ಜನರು ಧೂಮಪಾನದಿಂದ ದೂರವಿರಬೇಕು. ಜತೆಗೆ ಧೂಮಪಾನ ಮಾಡುವವರಿಂದ ಧೂಮಪಾನ ಮಾಡದವರು ಕೂಡ ದೂರವಿರಬೇಕು.
-ಡಾ.ನಾಗರಾಜ್‌, ನಿರ್ದೇಶಕರು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next