ಬೆಂಗಳೂರು: ಗ್ರಾಮೀಣ ಭಾಗದ ಮಹಿಳೆಯರಲ್ಲಿ ಗರ್ಭಕೋಶ ಕಂಠ (ಸರ್ವಿಕಲ್) ಕ್ಯಾನ್ಸರ್ ಹೆಚ್ಚು ಕಂಡುಬರುತ್ತಿದ್ದು, ಆ ಪೈಕಿ ಶೇ.60 ರಷ್ಟು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಚಿಕ್ಕ ವಯಸ್ಸಿನಲ್ಲಿ ಮದುವೆ, ಅಸುರಕ್ಷಿತ ಹಾಗೂ ಹೆಚ್ಚಿನ ಜನರೊಂದಿಗೆ ಲೈಗಿಂಕ ಸಂಪರ್ಕ ನಡೆಸುವುದರಿಂದ ಮಹಿಳೆಯರಲ್ಲಿ ಗರ್ಭಕೋಶ ಕಂಠ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಆದರೆ, ಕ್ಯಾನ್ಸರ್ ಕೊನೆಯ ಹಂತದಲ್ಲಿರುವಾಗ ಶೇ.63ರಷ್ಟು ಮಹಿಳೆಯರು ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದುತ್ತಿರುವುದು ವರದಿಯಿಂದ ತಿಳಿದುಬಂದಿದೆ.
ರಾಷ್ಟೀಯ ಕ್ಯಾನ್ಸರ್ ನಿಯಂತ್ರಣ ಹಾಗೂ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ ಗರ್ಭಕೋಶ ಕಂಠ ಕ್ಯಾನ್ಸರ್ ಪ್ರಕರಣಗಳ ಲೆಕ್ಕಾಚಾರದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಇದಕ್ಕೆ ಬಲಿಯಾಗುತ್ತಿದ್ದಾರೆ. ಪ್ರಸಕ್ತ ವರ್ಷ ಕ್ಯಾನ್ಸರ್‌ನಿಂದ 3,71,302 ಮಹಿಳೆಯರು ಮೃತಪಟ್ಟಿದ್ದು, ಆ ಪೈಕಿ ಗರ್ಭಕೋಶ ಸಂಬಂಧಿ ಕ್ಯಾನ್ಸರ್‌ಗೆ ತುತ್ತಾದವರ ಪ್ರಮಾಣ ಶೇ.16ರಷ್ಟಿದೆ. ಪ್ರಸಕ್ತ ವರ್ಷ ಸುಮಾರು 97 ಸಾವಿರ ಮಹಿಳೆಯರು ಈ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದು, ಆ ಪೈಕಿ 60 ಸಾವಿರಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಎಂಟು ಸಾವಿರ ಮಂದಿ ಮಹಿಳೆಯರು ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆ ಪೈಕಿ ಗ್ರಾಮೀಣ ಮಹಿಳೆಯರ ಸಂಖ್ಯೆ ಹೆಚ್ಚಿದೆ. ವರದಿಯಂತೆ ನಗರ ಭಾಗದಲ್ಲಿ ಒಂದು ಲಕ್ಷ ಜನರ ಪೈಕಿ 16 ಮಂದಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡರೆ, ಗ್ರಾಮೀಣ ಭಾಗದ ಒಂದು ಲಕ್ಷ ಮಹಿಳೆಯಲ್ಲಿ 21 ರಿಂದ 22 ಸ್ತ್ರೀಯರು ಸರ್ವಿಕಲ್ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ.
ಗರ್ಭಕೋಶ ಕಂಠ ಕ್ಯಾನ್ಸರ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಹಲವಾರು ಕ್ರಮ ಕೈಗೊಂಡರೂ ಗ್ರಾಮೀಣ ಭಾಗದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಪ್ರತಿ ವರ್ಷ ಒಂದು ಸಾವಿರ ಹೊಸ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ವಾರ್ಷಿಕ ದಾಖಲಾಗುತ್ತಿರುವ 6 ಸಾವಿರ ಹೊಸ ಮಹಿಳಾ ಕ್ಯಾನ್ಸರ್ ರೋಗಿಗಳ ಪೈಕಿ 1,500 ಗರ್ಭಕೋಶ ಕ್ಯಾನ್ಸರ್ ಪ್ರಕರಣಗಳಿರುತ್ತವೆ. ಕ್ಯಾನ್ಸರ್ 3ನೇ ಹಂತ ತಲುಪಿದ ಬಳಿಕ ಆಸ್ಪತ್ರೆ ಸೇರಿದರೆ ಚಿಕಿತ್ಸೆ ಫಲಕಾರಿಯಾಗುವುದು ತೀರಾ ಕಡಿಮೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ರಾಮಚಂದ್ರ ಹೇಳುತ್ತಾರೆ.
ಗರ್ಭಕೋಶ ಕಂಠ ಕ್ಯಾನ್ಸರ್‌ಗೆ ಕಾರಣವೇನು?
-ಸಣ್ಣ ಪ್ರಾಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು
-ಒಬ್ಬರಿಗಿಂತ ಹೆಚ್ಚು ಜನರ ಜತೆಗಿನ ಲೈಂಗಿಕ ಸಂಪರ್ಕ
-ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು
-ತಂಬಾಕು ಸೇವನೆ
-ಮುಟ್ಟಿನ ಸಂದರ್ಭದಲ್ಲಿ ಶುಚಿತ್ವಕ್ಕೆ ಒತ್ತು ನೀಡದಿರುವುದು
ಲಕ್ಷಣಗಳೇನು?: ಋತು ಚಕ್ರ ಸಮಯ ಹೊರತು ಪಡಿಸಿ ಬೇರೆ ಸಮಯದಲ್ಲಿ ರಕ್ತ ಸ್ರಾವ, ಅಂಡಾಣುವಿನಲ್ಲಿ ಕೆಟ್ಟ ವಾಸನೆ, ಅತ್ಯಧಿಕ ಹೊಟ್ಟೆ ನೋವು
ಕ್ವಿದ್ವಾಯಿಯಲ್ಲಿ ಜಾಗೃತಿ ಮಾಸ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಗರ್ಭಕೋಶ ಕಂಠ ಕ್ಯಾನ್ಸರ್ ಜಾಗೃತಿ ಮಾಸ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಬಯಾಸಿ, ಸಿ.ಟಿ ಸ್ಕ್ಯಾನ್ ಪರೀಕ್ಷೆಯನ್ನು ನವೆಂಬರ್ ತಿಂಗಳಾದ್ಯಂತ ಉಚಿತವಾಗಿ ಮಾಡಲಾಗುತ್ತಿದೆ. ಜತೆಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ರಾಮಚಂದ್ರ ತಿಳಿಸಿದ್ದಾರೆ.
* ಜಯಪ್ರಕಾಶ್ ಬಿರಾದಾರ್