Advertisement

ಕೋವಿಡ್‌ನಿಂದ ಹೆಚ್ಚಿದ ವನ್ಯಜೀವಿ ಬೇಟೆ

11:31 AM Jun 24, 2020 | mahesh |

ಪ್ಯಾರಿಸ್‌: ಇತ್ತೀಚೆಗೆ ಏಷ್ಯಾ, ಆಫ್ರಿಕಾ ಖಂಡಗಳಲ್ಲಿ ಗಾಯಗೊಂಡಿರುವ ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಆನೆ, ಹುಲಿ, ಚಿರತೆಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು, ಇದರ ಹಿನ್ನೆಲೆಯನ್ನು ಕೆದಕುತ್ತಾ ಹೋದಂತೆ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದೆ. ವಿಶ್ವಕ್ಕೆ ಮಹಾಮಾರಿಯಾಗಿರುವ ಕೋವಿಡ್‌ನಿಂದಾಗಿ ಬೇಟೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಗಾಯಗೊಂಡ ಪ್ರಾಣಿಗಳು ಹಾಗೂ ಕೆಮರಾ ಟ್ರ್ಯಾಪ್‌ನ ಸಾಕ್ಷ್ಯಗಳನ್ನು ಆಧರಿಸಿ ಬೇಟೆಯ ಮಾಹಿತಿಗಳು ತಿಳಿದುಬಂದಿವೆ. ಈ ಪ್ರವೃತ್ತಿ ಒಂದು ದೇಶದಲ್ಲಿ ಮಾತ್ರವಲ್ಲ ಏಷ್ಯಾ, ಆಫ್ರಿಕಾ ಖಂಡಗಳ ವಿವಿಧ ದೇಶಗಳಲ್ಲಿ ಕಂಡುಬಂದಿದ್ದು, ವ್ಯಾಪಕ ಬೇಟೆ ನಡೆಯುತ್ತಿದೆ ಎನ್ನಲಾಗಿದೆ.

Advertisement

ಹಣ ಮಾಡಲು ದಾರಿ
ಕೋವಿಡ್‌ನಿಂದಾಗಿ ಹಲವರು ಉದ್ಯೋಗ ರಹಿತರಾಗಿದ್ದು, ಹಣ ಮಾಡಲು ವನ್ಯಪ್ರಾಣಿಗಳ ಬೇಟೆಯನ್ನು ನಡೆಸುತ್ತಿದ್ದಾರೆ. ಇನ್ನು ಕೆಲವರು ಹವ್ಯಾಸವಾಗಿ ಇದನ್ನು ಮುಂದುವರಿಸಿದ್ದಾರೆ. ಮಾಂಸ ತಿನ್ನುವ ಅಭ್ಯಾಸದಿಂದಲೂ ಬೇಟೆ ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲೂ ಬೇಟೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಮಾನವನ ಈ ಕೆಲಸದಿಂದಾಗಿ ಹುಲಿ, ಚಿರತೆಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳು ನಾಶವಾಗುವುದರೊಂದಿಗೆ ಆಹಾರ ಸರಪಳಿಯನ್ನೇ ಇದು ಹಾನಿಗೆಡವುತ್ತದೆ ಮತ್ತು ಇತರ ಪ್ರಾಣಿಗಳ ನಾಶಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮಾಹಿತಿಯ ಪ್ರಕಾರ ಲಾಕ್‌ಡೌನ್‌ ಬಳಿಕ 4 ಹುಲಿ ಹಾಗೂ 6 ಚಿರತೆಗಳು ಬೇಟೆಗಾರ‌ರಿಗೆ ಬಲಿಯಾಗಿವೆ.

ಆಹಾರಕ್ಕಾಗಿ ಬೇಟೆ?
ಅಭಿವೃದ್ದಿ ಹೊಂದಿದ ದೇಶಗಳಲ್ಲೂ ಕಾನೂನಬಾಹಿರ ಬೇಟೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಆಹಾರ ಸಾಮಗ್ರಿಗಳ ಕೊರತೆಯೇ ಇವುಗಳಿಗೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದ್ದರೂ ಕೂಡ ಇವುಗಳ ಹಿಂದೆ ವ್ಯವಸ್ಥಿತ ಸಂಚು ಒಂದು ಕೆಲಸ ಮಾಡುತ್ತಿದೆ ಎಂಬುದು ತಜ್ಞರ ವಾದ. ಪ್ರಯಾಣ ನಿಬಂಧನೆ ಹಾಗೂ ಗಡಿ ಮುಚ್ಚುವಿಕೆಗಳು ಕಾನೂನು ಬಾಹಿರ ಕೆಲಸಗಳಿಗೆ ಪ್ರಮುಖ ಅಸ್ತ್ರವಾಗಿದೆ.

ಚಿಪ್ಪು ಹಂದಿಗಳಿಗೂ ಮಾರಕ
ಜಗತ್ತಿನಲ್ಲೇ ಅತಿ ಹೆಚ್ಚು ಕಳ್ಳ ಸಾಗಾಣಿಕೆಯಾಗುವ ಜೀವಿ ಎಂದೇ ಪ್ರಸಿದ್ಧಿ ಪಡೆದ ಚಿಪ್ಪು ಹಂದಿಗಳು ಈಗ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗಿವೆ. ಲಾಕ್‌ಡೌನ್‌ ಸಂದರ್ಭ ಇವುಗಳನ್ನು ಅತಿ ಹೆಚ್ಚು ಬೇಟೆಯಾಡಲಾಗಿದೆ. ಕೆಲವರು ಮಾಂಸದ ಉದ್ದೇಶಕ್ಕಾಗಿ ಬೇಟೆಯಾಡಿದರೆ ಇನ್ನು ಕೆಲವರು ಕಳ್ಳ ಸಾಗಾಣಿಕೆಗೆ ಪ್ರಯತ್ನಿಸಿದ್ದಾರೆ. ಸೌತ್‌ ಈಸ್ಟ್‌ ಏಷ್ಯಾ ರಾಜ್ಯಗಳಲ್ಲಿ ಆನೆ ದಂತ ವ್ಯಾಪಾರವು ಹೇರಳವಾಗಿ ನಡೆದಿದೆ. ಆಫ್ರಿಕಾದ ಅನೇಕ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಸಂರಕ್ಷಣಾ ತಾಣಗಳಲ್ಲಿ ಈಗಾಗಲೇ ಕಣ್ಗಾವಲು ಇರುವುದರಿಂದ ಇಲ್ಲಿ ಬೇಟೆಗೆ ಹೆಚ್ಚು ಅವಕಾಶವಿಲ್ಲ ಎಂದು ವನ್ಯ ಜೀವಿ ಸಂರಕ್ಷಣಾ ಸಂಸ್ಥೆಯ ಎಮ್ಮಾ ಸ್ಟೋಕ್ಸ್‌ ಅವರು ಹೇಳಿದ್ದಾರೆ.

ವಿಶ್ವ ಅರಣ್ಯ ಜೀವಿ ಸಂರಕ್ಷಣ ಸಂಸ್ಥೆಯ ಪ್ರಕಾರ ನೇಪಾಳದಲ್ಲಿ ಲಾಕ್‌ಡೌನ್‌ನ ಮೊದಲ ತಿಂಗಳಿನಲ್ಲಿ ಅತಿ ಹೆಚ್ಚು ಅರಣ್ಯ ಸಂಬಂಧಿತ ಅಪರಾಧಗಳು ನಡೆದಿವೆ. ಒಂದು ವರ್ಷದಲ್ಲಿ ನಡೆಯುವ ಅಪರಾಧಗಳ ಸಂಖ್ಯೆಗಿಂತಲೂ ಇದು ಹೆಚ್ಚಾಗಿದೆ. ನೇಪಾಲದ ಅಧಿಕಾರಿಗಳ ಮಾಹಿತಿ ಪ್ರಕಾರ ಶ್ರಮವಿಲ್ಲದೇ ಹಣ ಸಂಪಾದಿಸಲು ಬೇಟೆಯನ್ನು ಬಳಸಲಾಗುತ್ತದೆ. ಕಾಂಬೋಡಿಯದಲ್ಲಿ ಮೃತಪಟ್ಟ ಹಕ್ಕಿಗಳ ಶರೀರದಲ್ಲಿ ವಿಷದ ಅಂಶ ಇರುವುದನ್ನು ಕಂಡು ಹಿಡಿಯಲಾಗಿದೆ. ಇಲ್ಲಿ ನೂರಕ್ಕೂ ಅಧಿಕ ಕೊಕ್ಕರೆಗಳನ್ನು ಲಾಕ್‌ಡೌನ್‌ ಸಮಯದಲ್ಲಿ ಬೇಟೆಯಾಡಲಾಗಿದೆ.  ಲಾಕ್‌ಡೌನ್‌ನಿಂದ ಜನರು ಪ್ರಕೃತಿಗೆ ಹತ್ತಿರವಾಗುತ್ತಿದ್ದಾರೆ ಅಥವಾ ಪ್ರಕೃತಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಚಾರಗಳ ನಡುವೆ ಪ್ರಕೃತಿಯನ್ನು ಕೊಳ್ಳೆ ಹೊಡೆಯುವ ಪ್ರಯತ್ನಗಳೂ ಹೆಚ್ಚಾಗಿವೆ ಎಂಬುದು ಆತಂಕಕಾರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next