ಲೋಕಾಪುರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಿದ್ದು, ಜನರಲ್ಲಿ ಭಯದ ವಾತಾವರಣ ಮೂಡಿದೆ.
ಮನೆ, ಅಂಗಡಿಗಳ ಕೀಲಿ ಮುರಿದು ಹಾಗೂ ಬೈಕ್‌ಗಳ ಕಳ್ಳತನ ಪ್ರಕರಣಗಳು ನಡೆದಿವೆ.ಕಳ್ಳತನ ಮಾಡುವವರು ಮಾರಕಾಸ್ತ್ರಗಳೊಂದಿಗೆ ಗುಂಪು ಗುಂಪಾಗಿ ಸಂಚರಿಸುತ್ತಿರುವ ವಿಷಯ ಸಾರ್ವಜನಿಕರ ಗಮನಕ್ಕೆ ಬಂದಿದೆ.
ಇನ್ನೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆರಳಚ್ಚು ತಜ್ಞರು, ಸ್ಟೀಪರ್ ಡಾಗ್ ಸ್ವಾಡ್ ಮೂಲಕ ಮುಧೋಳ ಸಿಪಿಐ ಎಚ್.ಆರ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ಮೂರಕ್ಕೂ ಅಧಿಕ ಪೊಲೀಸ್ ತಂಡಗಳನ್ನು ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಅಲ್ಲದೆ ಪಟ್ಟಣದಲ್ಲಿ ಹೆಚ್ಚುವರಿಪೊಲೀಸ್ ಸಿಬ್ಬಂದಿಯ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಭಯಮುಕ್ತರಾಗುವಂತೆ ಪಿಎಸ್‌ಐ ಶಿವಶಂಕರ ಮುಕರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸರಣಿ ಕಳ್ಳತನ: ಪಟ್ಟಣದಲ್ಲಿ ರಾತ್ರಿ ಮನೆಗಳ ಕೀಲಿ ಮುರಿದು ಸರಣಿ ಕಳ್ಳತನ ಪ್ರಕರಣಗಳು ನಡೆದಿವೆ. ಹೂಗಾರ ಓಣಿಯ ರಾಜು ಹಂಚಾಟೆ ಅವರ ಮನೆ ಬೀಗ ಮುರಿದು 25 ಗ್ರಾಂ ಚಿನ್ನ ಹತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ವಿಜಯಲಕ್ಷ್ಮೀ ಚೌದ್ರಿ ಅವರ ಮನೆ ಬೀಗ ಮುರಿದು 15 ಗ್ರಾಂ ಚಿನ್ನ ಮತ್ತು ಐದು ಸಾವಿರ ನಗದು ಕಳ್ಳತನ ನಡೆದಿದೆ. ಇನ್ನು ಎರಡು ಮನೆಯ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಮಚ್ಚನ್ನು ಎಸೆದು ಕಳ್ಳರು ಓಡಿಹೋಗಿದ್ದಾರೆ. ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಪಿಎಸ್‌ಐ ಶಿವಶಂಕರ ಮುಕರಿ ತನಿಖೆ ಕೈಗೊಂಡಿದ್ದಾರೆ.
ಪರ ಊರುಗಳಿಗೆ ತೆರಳುವ ಜನರು ಅಕ್ಕಪಕ್ಕದ ಮನೆಯವರಿಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವ ಮೂಲಕಸಹಕರಿಸಬೇಕು. ಅಪರಿಚಿತ ಸಂಶಯಾಸ್ಪದಜನರು ಕಂಡು ಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡಬೇಕು.
–ಶಿವಶಂಕರ ಮುಕರಿ, ಪಿಎಸ್‌ಐ, ಲೋಕಾಪುರ