Advertisement

ಹೆಚ್ಚಿದ ಬಿಸಿಲ ಬೇಗೆ; ಸೀಯಾಳಕ್ಕೆ ಬೇಡಿಕೆ, ದರ ಏರಿಕೆ

10:24 PM Mar 17, 2021 | Team Udayavani |

ಬಜಪೆ: ಬೇಸಗೆ ಬಿಸಿ ಆರಂಭವಾಗಿದ್ದು, ಬೆಳಗ್ಗೆ 11 ಆದರೆ ಸಾಕು ಸೂರ್ಯನ ಶಾಖ ನೆತ್ತಿಯ ಮೇಲೆ ಏರಿರುತ್ತದೆ. ಬಿಸಿಲಿನ‌ ಧಗೆಯಿಂದ ದಣಿವು ಆರಿಸಿಕೊಳ್ಳಲು ಜನರು ತಂಪು ಪಾನೀಯ, ಸೀಯಾಳದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಬೇಡಿಕೆ ಹೆಚ್ಚಳವಾಗಿದ್ದು, ದರವೂ ಏರಿಕೆ ಕಂಡಿದೆ.

Advertisement

ಮಂಗಳೂರು ಸಹಿತ ಮಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಬೇಲೂರು, ಹೊಳೆನರಸೀಪುರ, ಅರಸೀಕರೆ, ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆಗಳಿಂದ ಸೀಯಾಳ ಆಮದು ಆಗುತ್ತವೆ. ಬೇಸಗೆಯ ಬಿಸಿಲು ಹೆಚ್ಚಿದಂತೆ ಎಲ್ಲೆಡೆ ಸೀಯಾಳಕ್ಕೆ ಬೇಡಿಕೆ ಹೆಚ್ಚುತ್ತದೆ. ಈ ಸಮಯದಲ್ಲಿ ಆಮದು ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ. ಈ ಒಂದು ವಾರದೊಳಗೆ ಸೀಯಾಳ ದರದಲ್ಲಿ ಸುಮಾರು 3ರಿಂದ 4 ರೂ.ಗಳ ಏರಿಕೆ ಕಂಡಿದೆ.

ಹೊಳೆನರಸೀಪುರದಿಂದ ಬಂದ ಸೀಯಾಳಕ್ಕೆ ಅಂಗಡಿ ಅವರಿಗೆ ಸುಮಾರು 25ರಿಂದ 28 ರೂ. ವರೆಗೆ ಸಿಗುತ್ತದೆ. ಇದನ್ನು ಅಂಗಡಿಯವರು ಸುಮಾರು 35ರೂ. ವರೆಗೂ ಮಾರಾಟ ಮಾಡುತ್ತಾರೆ. ಇನ್ನು ಕೆಲವಡೆ ಸೀಯಾಳ ಮಾರಾಟದಲ್ಲಿ ಸ್ಪರ್ಧೆ ಕಂಡುಬರುತ್ತಿದ್ದು, ಕೆಲವರು ಸುಮಾರು 30 ರೂ. ಗೆ ಮಾರಾಟ ಮಾಡುತ್ತಿದ್ದಾರೆ.

ಬೇರೆಡೆಗೆ ಸರಬರಾಜು
ಮಂಡ್ಯ, ಮದ್ದೂರು, ಕೆ.ಆರ್‌. ಪೇಟೆಯ ಗೊಂಚಲು ಸೀಯಾಳದ ದರವೂ ಏರಿಕೆ ಕಂಡಿದೆ. ಇಲ್ಲಿಯ ಸೀಯಾಳ ಮುಂಬಯಿ, ಆಂಧ್ರ, ಕೋಲ್ಕತಾ, ಗುಜರಾತ್‌, ಹೊಸದಿಲ್ಲಿ ಮೊದಲಾದೆಡೆಗೆ ಸುಮಾರು ದಿನಕ್ಕೆ 10 ಲಾರಿಯಷ್ಟು ಸರಬರಾಜು ಆಗುತ್ತದೆ. ಇಲ್ಲಿಯೂ ಸುಮಾರು 5 ರೂ. ನಷ್ಟು ಏರಿಕೆಯಾಗಿದೆ. ಇಲ್ಲಿಯ ಅಂಗಡಿಯವರು 35ರಿಂದ 40 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ.

ಆರೋಗ್ಯಕ್ಕೆ ಪೂರಕ
ತಂಪು ಪಾನೀಯಗಳಿಗಿಂತ ಜನರು ಹೆಚ್ಚು ಸೀಯಾಳವನ್ನು ಇಷ್ಟ ಪಡುತ್ತಾರೆ. ಉಷ್ಣ, ಉರಿ ಎಂದು ಔಷಧ ತೆಗೆದುಕೊಳ್ಳುವವರು ಸೀಯಾಳ ಕುಡಿಯುವುದೇ ಜಾಸ್ತಿ. ಇದು ಆರೋಗ್ಯಕ್ಕೆ ಪೂರಕವಾದ ಉತ್ಪನ್ನವಾಗಿದ್ದು ಬೇಸಗೆಯಲ್ಲಿ ಬಳಕೆ ಹೆಚ್ಚು. ಹೀಗಾಗಿ ಬೇಡಿಕೆ ಜಾಸ್ತಿಯಾಗಿದೆ. ಮಂಗಳೂರು ಸಹಿತ ಮಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಸೀಯಾಳ ಬೇರೆಡೆಯಿಂದ ಆವಕ ಮಾಡಿಕೊಳ್ಳುವುದರಿಂದ ಸಾರಿಗೆ ಸಹಿತ ಇನ್ನಿತರ ವೆಚ್ಚಗಳ ನೀಗಿಸಲು ದರ ಕೂಡ ಏರಿಕೆಯಾಗಿದೆ.
ಆದರೆ ಗ್ರಾಹಕರು ದರದ ಏರಿಕೆಯ ಬಗ್ಗೆ ಯೋಚಿಸದೇ ಉತ್ತಮವಾದ ನೀರು ಇರುವ ಸೀಯಾಳಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ.

Advertisement

ಲಿಂಬೆ, ಕಲ್ಲಂಗಡಿ ಬೆಲೆ ಏರಿಕೆ
ಮಾರುಕಟ್ಟೆಯಲ್ಲಿ ಸೀಯಾಳ ಬೇಡಿಕೆಯ ಜತೆಗೆ ಲಿಂಬೆಕಾಯಿ ಬೇಡಿಕೆ ಹೆಚ್ಚಿದೆೆ. ಇದರಿಂದಾಗಿ ಲಿಂಬೆ ಕೆಜಿಗೆ 85 ರೂ.ಗೆ ಮಾರಾಟವಾಗುತ್ತಿದೆ. ಹತ್ತು ದಿನಗಳ ಹಿಂದೆ ಲಿಂಬೆಕಾಯಿ ಸುಮಾರು 70 ರೂ. ಇತ್ತು. ಬೇಸಗೆಯಲ್ಲಿ ಹಣ್ಣುಗಳಿಗೆ ಹೆಚ್ಚು ಬೇಡಿಕೆಯಿರುವುದರಿಂದ ಕಲ್ಲಂಗಡಿಗೂ ಬೆಲೆ ಹೆಚ್ಚಿದೆ. ವಾರದ ಹಿಂದೆ ಕೆ.ಜಿ.ಗೆ 10 ರೂ.ಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿಗೆ ಸದ್ಯ ಕೆ.ಜಿ. ಗೆ 15 ರೂ.ಗೆ ಮಾರಾಟವಾಗುತ್ತಿದೆ.

ಎಳೆಯ ಸೀಯಾಳಕ್ಕೆ ಬೇಡಿಕೆ
ಬೇಸಗೆಯಲ್ಲಿ ಜನರು ಹೆಚ್ಚು ಸೀಯಾಳಕ್ಕೆ ಮೊರೆ ಹೋಗುವುದು ಸಾಮಾನ್ಯ. ಅಲ್ಲದೆ ಸೀಯಾಳದಲ್ಲಿ ಹೆಚ್ಚು ಬಲಿತಿರದ ಎಳೆಯ ನೀರು ಸೀಯಾಳವನ್ನೇ ಆಯ್ಕೆ ಮಾಡಿ ಖರೀದಿಸುತ್ತಾರೆ. ಸೀಯಾಳದಲ್ಲಿ ಈಗ ಹೆಚ್ಚು ಬರುತ್ತವೆ. ಅದು ಉಳಿಯುವುದರಿಂದ ನಷ್ಟವಾಗುತ್ತದೆ. ಸೀಯಾಳ ದರ ಒಮ್ಮೆಲೇ ಏರಿಕೆ ಕಂಡಿದೆ. ಈಗಿನ ಪರಿಸ್ಥಿತಿಯಲ್ಲಿ 35ರಿಂದ 40ಕ್ಕೆ ಮಾರಬೇಕಾಗುತ್ತದೆ .
-ಪದ್ಮನಾಭ, ಬಜಪೆ, ಸೀಯಾಳ ವ್ಯಾಪಾರಿ

ಬೇಡಿಕೆಯಿಂದ ದರ ಹೆಚ್ಚಳ
ಹೊಳೆನರಸಿಪುರದಲ್ಲಿ ನಾವೇ ತೋಟಕ್ಕೆ ಹೋಗಿ ಸೀಯಾಳ ತೆಗೆಯಬೇಕು. ಒಂದು ಸೀಯಾಳಕ್ಕೆ 2 ರೂ. ತೆಗೆಯುವವನಿಗೆ ನೀಡಬೇಕು. ತೆಂಗಿನಕಾಯಿಗೂ ಕೆ.ಜಿ. ಗೆ 60 ರೂ. ಆಗಿದೆ. ನೀರು ಕಡಿಮೆಯಾಗಿ ಸೀಯಾಳ ಬೇಗ ಕಾಯಿಯಾಗುತ್ತದೆ. ಸೆಕೆ ಜಾಸ್ತಿಯಾದಷ್ಟು ಸೀಯಾಳ ಬೇಡಿಕೆ ಜಾಸ್ತಿ. ಒಮ್ಮೆಲೇ ಸೀಯಾಳದ ದರ ಏರಿಕೆ ಕಂಡಿದೆ .

-ಇಸ್ಮಾಯಿಲ್‌ ಮೂಡುಬಿದಿರೆ, ಸೀಯಾಳ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next