Advertisement

ಅರಸೀಕೆರೆಯಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ

09:17 PM Nov 23, 2019 | Lakshmi GovindaRaj |

ಅರಸೀಕೆರೆ: ನಗರದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ, ಇಲ್ಲಿನ ನಗರಸಭಾ ಆಡಳಿತ ವಿಫ‌ಲವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಗರದ ಮಧ್ಯಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಬಸ್‌ನಿಲ್ದಾಣ, ಹಾಸನ ರಸ್ತೆ, ಸಾಯಿನಾಥ ರಸ್ತೆ, ಸಾರ್ವಜನಿಕ ಗ್ರಂಥಾಲಯ ರಸ್ತೆ ಸೇರಿದಂತೆ ನಗರದ ವಿವಿಧ ವಾರ್ಡುಗಳಲ್ಲಿ ಗುಂಪು ಗುಂಪಾಗಿ ಸೇರುವ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಮುಕ್ತವಾಗಿ ತಿರುಗಾಡಲು ಭಯಭೀತ ವಾತವರಣ ಸೃಷ್ಟಿಯಾಗಿದೆ. ಆದರೂ ನಗರಸಭಾ ಆಡಳಿತ ಇಂತಹ ಗಂಭೀರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ ನಿದ್ರಾವಸ್ಥೆಯಲ್ಲಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಜನರ ಮೇಲೆ ನಾಯಿಗಳ ದಾಳಿ: ನಗರದ ಬಾಬಾಸಾಬ್‌ ಕಾಲೋನಿ, ಮಟನ್‌ ಮಾರುಕಟ್ಟೆ ರಸ್ತೆ, ಹಾಸನ ರಸ್ತೆ ಎಡ ಮತ್ತು ಬಲಭಾಗದ ಬಡಾವಣೆಗಳಲ್ಲಿ, ಶಿವಾಲಯದ ಸುತ್ತಮುತ್ತ, ಲಕ್ಷ್ಮೀಪುರ ಬಡಾವಣೆ, ಈಡಿಗರ ಕಾಲೋನಿ ಹಾಗೂ ಇಂದಿರಾನಗರ, ಶ್ರೀನಿವಾಸ ನಗರಗಳಲ್ಲಿ ಬೀದಿ ನಾಯಿಗಳು ಗುಂಪು ಸೇರುತ್ತಿವೆ. ಇವುಗಳ ದಾಳಿಯಿಂದ ಅನೇಕರು ಗಾಯಗೊಂಡಿದ್ದಾರೆ. ಇಲ್ಲಿನ ರಸ್ತೆಗಳಲ್ಲಿ ಯಾರಾದರೂ ಹೊಸ ವ್ಯಕ್ತಿಗಳು ಕಂಡು ಬಂದರೆ ನಾಯಿಗಳು ಬೊಗಳುವ ಮೂಲಕ ಸ್ವಾಗತವನ್ನು ಬಯಸುತ್ತವೆ.

ನಾಯಿ ಹಾವಳಿ ನಿಯಂತ್ರಿಸದ ನಗರಸಭೆ: ಬೀದಿ ನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಗಳು ಹರ ಸಾಹಸ ಮಾಡಬೇಕಾಗುತ್ತದೆ. ಇಷ್ಟಾದರೂ ಸಂಪೂರ್ಣ ನಿದ್ರಾವಸ್ಥೆಯಲ್ಲಿರುವ ನಗರಸಭೆ ಆಡಳಿತ ಕಣ್ಣಿಗೆ ಮಾತ್ರ ಯಾವುದೇ ಬೀದಿ ನಾಯಿಗಳು ಕಾಣದಿರುವುದು ಅಚ್ಚರಿಯ ಸಂಗತಿಯಾಗಿದೆ. ಪ್ರತಿನಿತ್ಯ ಬೀದಿ ನಾಯಿಗಳ ಹಾವಳಿಯಿಂದ ರೋಸಿ ಹೋಗಿರುವ ನಗರದ ಜನತೆ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ನಗರಸಭೆ ಆಡಳಿತವನ್ನು ಒತ್ತಾಯಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸದೇ ಮೌನಕ್ಕೆ ಶರಣಾಗಿದ್ದಾರೆ.

ಇಂತಹ ಗಂಭೀರ ಸಮಸ್ಯೆಯ ಪರಿಹಾರದ ಬಗ್ಗೆ ನಗರಸಭೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರು ನಗರಸಭೆ ಆಡಳಿತದ ವೈಪಲ್ಯದ ವಿರುದ್ಧ ಪ್ರತಿಭಟನೆ ನಡೆಸುವ ಮುನ್ನವೇ ಎಚ್ಚರಗೊಂಡು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ನಗರಸಭಾ ಆಡಳಿತ ಮಾಡಬೇಕಾಗಿದೆ.

Advertisement

ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ: ಬೀದಿ ನಾಯಿ ಹಾವಳಿ ಕುರಿತು ನಗರದ ನಾಗರಿಕರಿಂದ ಹಲವು ದೂರುಗಳು ಬಂದಿವೆ ನಗರಸಭೆ ಆಯುಕ್ತ ಎಂ.ಜಿ. ಕಾಂತರಾಜ್‌ ಹೇಳಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯುವುದಾಗಲೀ, ಕೊಲ್ಲುವುದಾಗಲೀ ಮಾಡುವಂತಿಲ್ಲ. ನಾಯಿಗಳನ್ನು ಹಿಡಿದು, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಸೋಂಕು ತಾಗದಂತೆ ಅವುಗಳಿಗೆ ಐದು ದಿನಗಳು ಪ್ರತ್ಯೇಕವಾಗಿರಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿ ಪೋಷಿಸಿ ನಂತರ ಬಿಡಬೇಕು ಎಂಬ ನಿಯಮವಿದೆ. ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಎರಡು ಬಾರಿ ಟೆಂಡರ್‌ ಕರೆದರೂ ಪ್ರಯೋಜನವಾಗಿಲ್ಲ.

ಈಗ ಮತ್ತೆ ಟೆಂಡರ್‌ ಕರೆಯಲಾಗುತ್ತಿದೆ. ಈ ಬಾರಿಯೂ ಯಾರೂ ಟೆಂಡರ್‌ ಹಾಕದಿದ್ದಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನಗರಸಭೆ ಬಜೆಟ್‌ನಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಲಕ್ಷಾಂತರ ರೂ. ಖರ್ಚು ತೋರಿಸಲಾಗಿದೆ ಎಂದು ವಿದ್ಯಾನಗರ ನಿವಾಸಿ ಆರ್‌.ರವಿಕಿರಣ್‌ ಆಪಾದಿಸಿದ್ದಾರೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುವ ಜೊತೆಗೆ ಅವುಗಳ ದಾಳಿಗೆ ತುತ್ತಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಗರಸಭೆ ಆಡಳಿತ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

* ರಾಮಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next