ಹೊಸದಿಲ್ಲಿ / ಮಣಿಪಾಲ: ಮುಂಗಾರು ಪ್ರವೇಶದ ಜತೆಗೆ ಬಿಪರ್‌ಜಾಯ್ ಚಂಡಮಾರುತದ ಪರಿಣಾಮದಿಂದ ಕರಾವಳಿಯುದ್ದಕ್ಕೂ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕಡಲ್ಕೊರೆತ ತೀವ್ರವಾಗಿದೆ. ಬಹುತೇಕ ಎಲ್ಲ ತೀರ ಪ್ರದೇಶಗಳಲ್ಲಿ ಅಪಾಯ ಉಂಟಾಗದಂತೆ ತಟರಕ್ಷಕರು, ಪೊಲೀಸ್ ಇಲಾಖೆಯವರು, ಕೋಸ್ಟ್‌ಗಾರ್ಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಬಿಪರ್‌ಜಾಯ್ ಅಬ್ಬರ
ಇದೇವೇಳೆ ಬಿಪರ್‌ಜಾಯ್‌ಚಂಡಮಾರುತ ಜೂ. 15ರಂದು ಗುಜರಾತ್ ಕರಾವಳಿಯಲ್ಲಿ ಭೂಪ್ರವೇಶ ಮಾಡಲಿದೆ.ಅದರ ವೇಗ ತಾಸಿಗೆ 150 ಕಿ.ಮೀ.ನಷ್ಟಿರಲಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಹೇಳಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 7,500 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕಛ…-ಸೌರಾಷ್ಟ್ರ ಜಿಲ್ಲೆಗಳ ಕರಾವಳಿಯಲ್ಲಿ ತೀರದಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಬರುವ
ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮಂಗಳವಾರ ಆರಂಭವಾಗಲಿದೆ. ಎಲ್ಲ ರೀತಿಯ ಸವಾಲುಗಳನ್ನೂ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ಎನ್‌ಡಿಆರ್‌ಎಫ್ನ 12 ತಂಡಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.
ಚಂಡಮಾರುತದ ಪ್ರಭಾವದಿಂದ ಗುಜರಾತ್, ಕರ್ನಾಟಕದ ಕರಾವಳಿ, ಕೇರಳ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಬಿಹಾರ, ಲಕ್ಷದ್ವೀಪ, ಜಮ್ಮು -ಕಾಶ್ಮೀರ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಉತ್ತರಪ್ರದೇಶಗಳಲ್ಲಿ ಕೆಲವು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಎಚ್ಚರಿಸಿದೆ.
ಪ್ರಧಾನಿ ಮೋದಿ ಸಭೆ
ಚಂಡಮಾರುತದ ಹಿನ್ನೆಲೆಯಲ್ಲಿ ಸೋಮವಾರ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿಯವರು ತುರ್ತು ಸಭೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾದ ಸಿದ್ಧತೆಗಳ ಪರಿಶೀಲನೆ ನಡೆಸಿದ ಅವರು, ಚಂಡಮಾರುತ ಹಾದುಹೋಗುವಂಥ ರಾಜ್ಯಗಳಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿರುವಂಥ ಜನರನ್ನು ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.