Advertisement

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

02:08 AM Apr 25, 2024 | Team Udayavani |

ಪುತ್ತೂರು: ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರುಮುಖದತ್ತ ಸಾಗಿತ್ತು. ಇದೀಗ ಚುನಾವಣೆ ಮುಕ್ತಾಯದ ಬಳಿಕವೂ ಧಾರಣೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯನ್ನು ಮಾರುಕಟ್ಟೆ ಮೂಲಗಳು ವ್ಯಕ್ತಪಡಿಸಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Advertisement

ಚುನಾವಣೆ ದಿನಾಂಕ ಘೋಷಣೆಯ ಮೊದಲು ಅಂದರೆ ಫೆಬ್ರವರಿಯಲ್ಲಿ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 325ರಿಂದ 340 ರೂ., ಹಳೆ ಅಡಿಕೆ (ಸಿ) 400ರಿಂದ 410 ರೂ., ಹಳೆ ಅಡಿಕೆ (ಡ) 425ರಿಂದ 435 ರೂ. ಇತ್ತು. ಚುನಾವಣ ನೀತಿಸಂಹಿತೆ ಘೋಷಣೆಯ ಬಳಿಕ ಧಾರಣೆ ಏರುಮುಖದತ್ತ ಸಾಗಿತ್ತು.

ಎಪ್ರಿಲ್‌ ಎರಡನೇ ವಾರದಲ್ಲಿ ಹೊಸ ಅಡಿಕೆ ಕೆ.ಜಿ.ಗೆ 350-365 ರೂ., ಸಿಂಗಲ್‌ ಚೋಲ್‌ 420-435 ರೂ., ಡಬ್ಬಲ್‌ ಚೋಲ್‌ 435-450 ರೂ. ತನಕ ದಾಖಲಾಗಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 25 ರೂ., ಸಿಂಗಲ್‌ ಚೋಲ್‌ 25 ರೂ., ಡಬ್ಬಲ್‌ ಚೋಲ್‌ 15 ರೂ. ನಷ್ಟು ಹೆಚ್ಚಳ ಕಂಡಿದೆ.

ಮತ್ತಷ್ಟು ಏರಿಕೆ ಸಾಧ್ಯತೆ
ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ತೀರ್ಥಹಳ್ಳಿ ಮೊದಲಾದೆಡೆ ಬೇರೆ ಬೇರೆ ವಿಧದ ಅಡಿಕೆ ಧಾರಣೆ ಏರಿಕೆ ಕಂಡಿದೆ. ಕೆಂಪಡಿಕೆ ಧಾರಣೆ ಏರುಮುಖದತ್ತ ಸಾಗಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ 15 ದಿನಗಳಿಂದ ಸ್ಥಿರವಾಗಿದೆ. ಚುನಾವಣೆ ಮುಗಿದ ಬಳಿಕ ನಗದು ವ್ಯವಹಾರ ಹೆಚ್ಚಾಗುವ ಕಾರಣ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಳವಾಗಲಿದೆ. ಜತೆಗೆ ಅಡಿಕೆಗೂ ಬೇಡಿಕೆ ಇರುವುದರಿಂದ ಸಹಜವಾಗಿ ಧಾರಣೆ ಏರಿಕೆ ಕಾಣಲಿದೆ ಎನ್ನುವುದು ಮಾರುಕಟ್ಟೆಯ ಲೆಕ್ಕಚಾರ.

ಮಂಗಳೂರು ಚಾಲಿ ಅಡಿಕೆ ಧಾರಣೆ ಇಳಿಕೆ ಕಂಡಿಲ್ಲ. ಚುನಾವಣೆ ಬಳಿಕ ಏರುವ ಸಾಧ್ಯತೆ ಇದೆ. ಕೆಂಪಡಿಕೆ ಧಾರಣೆ ಏರುಮುಖದತ್ತ ಸಾಗಿದೆ.
– ಕಿಶೋರ್‌ ಕುಮಾರ್‌ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ

Advertisement
Advertisement

Udayavani is now on Telegram. Click here to join our channel and stay updated with the latest news.

Next