ಬೆಂಗಳೂರು: ಬಿಬಿಎಂಪಿ ಮೇಯರ್ ಆಡಳಿತಾವಧಿ ಮುಗಿಯಲು ಒಂದೂವರೆ ತಿಂಗಳು ಬಾಕಿ ಇರುವಾಗಲೇ ಜೆಡಿಎಸ್‌ನಲ್ಲಿ ಮೇಯರ್ ಸ್ಥಾನಕ್ಕೆ ಲಾಬಿ ಶುರುವಾಗಿದ್ದು, ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ನೀಡವಂತೆ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸುವಂತೆ ಸದಸ್ಯರು ವರಿಷ್ಠರ ದುಂಬಾಲು ಬಿದ್ದಿದ್ದಾರೆ.
ಕಳೆದ ಮೂರು ಅವಧಿಗಳಲ್ಲಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ನೀಡಬೇಕೆಂದು ಜೆಡಿಎಸ್‌ನ ಮೇಯರ್ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದು, ಈ ಕುರಿತು ಜೆಡಿಎಸ್‌ನ ಮಹಿಳಾ ಸದಸ್ಯರು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಪಾಲಿಕೆಯ ಜೆಡಿಎಸ್‌ನ 15 ಪಾಲಿಕೆ ಸದಸ್ಯರ ಪೈಕಿ 9 ಮಂದಿ ಮಹಿಳಾ ಸದಸ್ಯರಿದ್ದು, ಅವರೆಲ್ಲರೂ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಯ ಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಹಾಲಿ ಉಪಮೇಯರ್ ಪದ್ಮಾವತಿ, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ರಮೀಳಾ ಉಮಾಶಂಕರ್ ಸೇರಿದಂತೆ ಇತ್ತೀಚೆಗೆ ಬಿನ್ನೀಪೇಟೆ ಉಪಚುನಾವಣೆಯಲ್ಲಿ ಗೆದ್ದಿರುವ ಐಶ್ವರ್ಯ ಸಹ ಮೇಯರ್ ಹುದ್ದೆಗೇರಲು ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲೂ ಹೆಚ್ಚಿನ ಪೈಪೋಟಿ: ಮೇಯರ್ ಸ್ಥಾನಕ್ಕೇರಲು ಕಾಂಗ್ರೆಸ್‌ನಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಪ್ರಮುಖವಾಗಿ ಜಯನಗರ ವಾರ್ಡ್‌ನ ಗಂಗಾಂಬಿಕೆ, ಶಾಂತಿನಗರ ವಾರ್ಡ್‌ನ ಸೌಮ್ಯ, ಲಿಂಗರಾಜಪುರ ವಾರ್ಡ್‌ನ ಲಾವಣ್ಯ ಸೇರಿದಂತೆ ಹೆಚ್ಚಿನವರು ಮೇಯರ್ ರೇಸ್‌ನಲ್ಲಿದ್ದಾರೆ.
ಜಿ.ಪದ್ಮಾವತಿ ಅವರು ಮೇಯರ್ ಆದ ಸಂದರ್ಭದಲ್ಲಿ ಅವಕಾಶ ಕೈತಪ್ಪಿದ್ದರಿಂದ ಈ ಬಾರಿ ಅವಕಾಶ ನೀಡುವಂತೆ ಸೌಮ್ಯ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದು, ಅದೇ ರೀತಿ ಲಾವಣ್ಯ ಅವರು ಸಚಿವ ಕೆ.ಜೆ.ಜಾರ್ಜ್ ಬೆಂಬಲಿರಾಗಿದ್ದಾರೆ.
ಕಳೆದ ಮೂರು ಅವಧಿಗಳಲ್ಲಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಈ ಬಾರಿ ಜೆಡಿಎಸ್‌ಗೆ ಮೇಯರ್ ಸ್ಥಾನ ನೀಡುವಂತೆ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸುವಂತೆ ಪಕ್ಷದ ಹಿರಿಯರನ್ನು ಕೋರಲಾಗಿದ್ದು, ತಾವು ಸೇರಿ ಪಕ್ಷದಲ್ಲಿ 9 ಮಂದಿ ಮೇಯರ್ ಸ್ಥಾನದ ಆಕಾಂಕ್ಷಿಗಳಿದ್ದೇವೆ.
-ಪದ್ಮಾವತಿ