Advertisement

ಬಾದಾಮಿಯಿಂದಲೇ ಸ್ಪರ್ಧೆಗೆ ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ

08:11 PM Feb 14, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಒತ್ತಾಯಿಸಿದರು.

Advertisement

ಮಂಗಳವಾರ ಬೆಳಗ್ಗೆ ಬಾದಾಮಿಯಿಂದ ಬಂದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಸಿದ್ದರಾಮಯ್ಯ ಅವರು, ದೂರ ಎಂಬ ಕಾರಣಕ್ಕೆ ನಾನು ಕೋಲಾರದಲ್ಲಿ ಸ್ಪರ್ಧೆಗೆ ಬಯಸಿದ್ದೇನೆ. ಆದರೆ, ಹೈಕಮಾಂಡ್‌ ತೀರ್ಮಾನ ಅಂತಿಮ. ಆದರೆ, ನನ್ನನ್ನು ಕೈ ಹಿಡಿದು ಗೆಲ್ಲಿಸಿದ ನಿಮ್ಮ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.

ಇಷ್ಟಾದರೂ ಬಾದಾಮಿಗೆ ಬರಬೇಕೆಂದು ಕಾರ್ಯಕರ್ತರು ಒತ್ತಾಯಿಸಿದಾಗ ಗದರಿದ ಸಿದ್ದರಾಮಯ್ಯ, ಏ ಕೇಳಪ್ಪಾ ಇಲ್ಲಿ. ನನಗೆ ಈಗ 76 ವರ್ಷ. ದಯವಿಟ್ಟು ಕ್ಷಮಿಸಬೇಕು ನೀವು. ನಾನು ದಿನನಿತ್ಯ ಓಡಾಡಲು ಕಷ್ಟವಾಗುತ್ತಿತ್ತು. ಕೋಲಾರದ ಜನತೆ ಸಹ ನನಗೆ ಸ್ಪರ್ಧೆ ಮಾಡಲು ಒತ್ತಾಯಿಸಿದರು. ಹೀಗಾಗಿ, ಘೋಷಿಸಿದ್ದೇನೆ. ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು. ಕೋಲಾರ, ಬಾದಾಮಿ, ವರುಣಾ ಎಲ್ಲಾದರೂ ಸರಿ. ನನಗೆ ಈಗ ವಿಧಾನಸಭೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಅಲ್ಲಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಾವು ಸ್ವಯಂ ಪ್ರೇರಿತರಾಗಿ ಬಂದಿದ್ದೇವೆ. ಸಿದ್ದರಾಮಯ್ಯ ಅವರಿಗೆ ಪುನರ್‌ಜನ್ಮ ಕೊಟ್ಟ ಕ್ಷೇತ್ರ ಬಾದಾಮಿ. ಈ ಬಾರಿ ಅವರು ಕೇವಲ ನಾಮಪತ್ರ ಸಲ್ಲಿಸಿ ಹೋದರೆ ಸಾಕು, ಗೆಲ್ಲಿಸುತ್ತೇವೆ. 2018ರಲ್ಲಿ ದೂರ ಆಗದ ಕ್ಷೇತ್ರ ಈಗ ಹೇಗೆ ದೂರ ಆಗುತ್ತದೆ ಎಂದು ಹೇಳಿದರು.

Advertisement

ವಿಧಾನಸಭೆಗೆ ಹೋಗಬೇಕು ಎಂದಿದ್ದಕ್ಕೆ ಬಿಟ್ಟಿದ್ದೇವೆ. ಹೈಕಮಾಂಡ್‌ ಮೇಲೂ ಒತ್ತಡ ಹಾಕಿ ಬಾದಾಮಿಯಿಂದಲೇ ಸ್ಪರ್ಧೆಗೆ ಆಗ್ರಹಿಸುತ್ತೇವೆ. ಕೋಲಾರ ಕ್ಷೇತ್ರಕ್ಕೆ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಎರಡು ಕಡೆಯಿಂದ ಸ್ಪರ್ಧೆ ಮಾಡ್ತಾರಾ?
ಒಂದೆಡೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದೆಡೆ ಬಾದಾಮಿಯಿಂದಲೂ ಸ್ಪರ್ಧೆಗೆ ಕಾರ್ಯಕರ್ತರು, ಮುಖಂಡರು ಬಂದು ಒತ್ತಡ ಹಾಕುತ್ತಿರುವುದರಿಂದ ಅಲ್ಲಿಂದಲೂ ಸ್ಪರ್ಧೆ ಮಾಡ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಆಪ್ತ ಬಸಪು ಶೆಟ್ಟರ್‌ ಹಾಗೂ ಮಾಜಿ ಸಚಿವ ಚಿಮ್ಮನಕಟ್ಟಿ ಪುತ್ರನ ನಡುವೆ ಟಿಕೆಟ್‌ಗೆ ಪೈಪೋಟಿಯಿದ್ದು, ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗಿದೆ. ಆದರೆ, ಒಬ್ಬರಿಗೆ ಒಂದೇ ಟಿಕೆಟ್‌ ಎಂದು ಕೆಪಿಸಿಸಿ ಅಧ್ಯಕ್ಷರು ಘೋಷಿಸಿದ್ದಾರೆ, ಸಿದ್ದರಾಮಯ್ಯ ಅವರೂ ಒಂದೇ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಎಂದೂ ಹಲವಾರು ಬಾರಿ ಸ್ಪಷ್ಟಪಡಿಸಿರುವುದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next