ಬೆಳಗಾವಿ: ಸುಮಾರು 30 ವರ್ಷಗಳಿಂದ ದಂಡು ಮಂಡಳಿ ಪ್ರದೇಶದಲ್ಲಿ ಸಗಟು ತರಕಾರಿ ಮಾರುಕಟ್ಟೆ ನಡೆಸುತ್ತಿರುವ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡುತ್ತಿರುವ ಕ್ರಮ ಖಂಡಿಸಿ ಜೈ ಕಿಸಾನ್ ಸಗಟು ತರಕಾರಿ ವ್ಯಾಪಾರಸ್ಥರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಗಟು ತರಕಾರಿ ವ್ಯಾಪಾರಕ್ಕೆ ಯೋಗ್ಯ ಸ್ಥಳಕ್ಕಾಗಿ ಅನುಮತಿ ಕೇಳಿದಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಾಗ ದೊರೆತಿದೆ. 10.20 ಎಕರೆ ಜಾಗವನ್ನು ಕೃಷಿ ಉಪಯೋಗದಿಂದ ಮಾರುಕಟ್ಟೆಯ ಉದ್ದೇಶಕ್ಕಾಗಿ ಪರಿವರ್ತಿಸಿ 2014ರಲ್ಲಿ ಪರವಾನಗಿ ಸಿಕ್ಕಿದೆ. ಜಮೀನು ಖರೀದಿ, ಭೂ ಪರಿವರ್ತನೆ, ವಿನ್ಯಾಸ ಹಾಗೂ ರಸ್ತೆ ಬುನಾದಿ ಸೇರಿದಂತೆ ಇತ್ಯಾದಿ ಕೆಲಸಕ್ಕೆ ಈಗಾಗಲೇ 11 ಕೋಟಿ ರೂ. ವ್ಯಯ ಮಾಡಲಾಗಿದೆ. ಆದರೆ ಈಗ ಮಾರುಕಟ್ಟೆಯನ್ನೇ ಒಕ್ಕಲೆಬ್ಬಿಸಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇಶದ ಯಾವುದೇ ಮೂಲೆಯಲ್ಲಿ ವ್ಯಾಪಾರ, ಉದ್ಯೋಗ ಮಾಡುವ ಮೂಲಭೂತ ಹಕ್ಕು ಉಲ್ಲಂಘಿಸಿ ಎಪಿಎಂಸಿ ಪ್ರಾಂಗಣದಲ್ಲಿ ಮಾತ್ರ ತರಕಾರಿ ವ್ಯಾಪಾರ ಮಾಡಲು ಪ್ರಯತ್ನ ನಡೆದಿದೆ. ಇದಕ್ಕೆ ನಮ್ಮ ಸಂಘದ ಸಂಪೂರ್ಣ ವಿರೋಧವಿದೆ. ಮುಂದೆ ನಮಗೆ ಯಾವುದೆ ತೊಂದರೆ ಆಗದಂತೆ ಕಾನೂನು ಸಂರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತರು ಹಾಗೂ ಎಪಿಎಂಸಿ ಪದಾಧಿಕಾರಿಗಳಿಗೆ ಸೂಚಿಸಬೇಕು. ಮಳಿಗೆಗಳನ್ನು ಸ್ಥಳಾಂತರ ಮಾಡದಂತೆ ಆದೇಶ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ದಿವಾಕರ ಪಾಟೀಲ, ಕೆ.ಕೆ. ಬಾಗವಾನ್ ಸೇರಿದಂತೆ ಇತರರು ಇದ್ದರು.
Advertisement
ಫೋರ್ಟ್ ರಸ್ತೆಯ ಮಾರುಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವ್ಯಾಪಾರಸ್ಥರು ಹಾಗೂ ರೈತರು, ಎಪಿಎಂಸಿ ಹಾಗೂ ಜಿಲ್ಲಾಡಳಿತ ಈಗ ಏಕಾಏಕಿ ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗುತ್ತಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.