ಮಹಾನಗರ: ದೇಶಾದ್ಯಂತ ಮಕ್ಕಳಲ್ಲಿ ಕಾಡುವ ಅಪೌಷ್ಟಿಕತೆ ಸರಕಾರ ಮತ್ತು ಮಕ್ಕಳ ಕುಟುಂಬಗಳಿಗೆ ಸವಾ ಲಾಗಿಯೇ ಪರಿಣಮಿಸಿದೆ. ಬಡತನ, ವಿಟಮಿನ್‌ಯುಕ್ತ ಆಹಾರ ಸೇವಿಸದೆ ಇರುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಜಾಸ್ತಿಯಾಗುತ್ತಿದೆ ಎಂಬ ಆತಂಕದ ನಡುವೆಯೂ ದ.ಕ. ಜಿಲ್ಲೆ ಯಲ್ಲಿ ಅಪೌಷ್ಟಿಕತೆಯ ಪ್ರಮಾಣ ನಿಯಂತ್ರ ಣದಲ್ಲಿದೆ ಎಂಬುದೇ ಸದ್ಯ ನಿರಾಳತೆಯ ವಿಷಯವಾಗಿದೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಮಾಣ ತೀರಾ ಕಡಿಮೆಯಿದೆ. ಜಿಲ್ಲೆಯಲ್ಲಿ ಪ್ರಸ್ತುತ 2,797 ಮಂದಿ 0-5 ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿದ್ದರೆ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ 55.
ಜಿಲ್ಲೆಯಲ್ಲಿ ಎಂಟು ತಿಂಗಳ ಅವಧಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ ಏರಿಳಿಕೆಯಾ ಗುತ್ತಿದ್ದರೂ ಹೆಚ್ಚಿನ ಆತಂಕಕ್ಕೆ ಎಡೆ ಮಾಡಿಕೊಟ್ಟಿಲ್ಲ. ಜನವರಿಯಲ್ಲಿ 3,261 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ 3,233ಕ್ಕೆ ಇಳಿದಿದೆ. ಮಾರ್ಚ್‌ನಲ್ಲಿ 3,147, ಎಪ್ರಿಲ್ 3,062, ಮೇ 2,832, ಜೂನ್ 2,652, ಜುಲೈ 2,800 ಮತ್ತು ಅಗಸ್ಟ್‌ನಲ್ಲಿ 2,797 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ 0-5 ವರ್ಷದ ಮಕ್ಕಳನ್ನು ತೂಕ ಮಾಡಲಾಗುತ್ತದೆ. ಈ ವೇಳೆ ಹಿಂದಿನ ತಿಂಗಳುಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಇನ್ನೊಂದು ಬಾರಿ ಸಾಮಾನ್ಯ ತೂಕ ಹೊಂದಿರಬಹುದು ಅಥವಾ ಒಂದಷ್ಟು ಹೊಸ ಮಂದಿಯ ಸೇರ್ಪಡೆಯೂ ಆಗಿರಬಹುದು. ಹೀಗಾಗಿ ಪ್ರತಿ ತಿಂಗಳು ಅಪೌಷ್ಟಿಕತೆ ಹೊಂದಿರುವವರ ಸಂಖ್ಯೆಯಲ್ಲಿ ಏರಿಕಳಿಕೆಯಾಗುತ್ತಿರುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾ ರಿಗಳು. ವಿಟಮಿನ್‌ಯುಕ್ತ ಆಹಾರ ಸೇವನೆಯ ಮೂಲಕ ಅಪೌಷ್ಟಿಕತೆಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ.
55 ಮಂದಿಯಲ್ಲಿ ತೀವ್ರ ಅಪೌಷ್ಟಿಕತೆ
ಜಿಲ್ಲೆಯಲ್ಲಿ ಸದ್ಯ 55 ಮಂದಿ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದ್ದು, ಕಡಿಮೆ ತೂಕ, ರಕ್ತಹೀನತೆ, ಹೃದಯದ ತೊಂದರೆ, ಬುದ್ಧಿಮಾಂದ್ಯತೆ, ಎತ್ತರ-ತೂಕದ ನಡು ವಿನ ಅತಿಯಾದ ಅಸಮತೋಲನ ಮುಂತಾದ ಸಮಸ್ಯೆಗಳನ್ನು ಇಂತಹ ಮಕ್ಕಳು ಎದುರಿಸುತ್ತಿದ್ದಾರೆ. ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಜನವರಿಯಲ್ಲಿ 51 ಇದ್ದರೆ, ಫೆಬ್ರವರಿಯಲ್ಲಿ 54, ಮಾರ್ಚ್‌ನಲ್ಲಿ 55ಕ್ಕೆ ಏರಿಕೆಯಾಗಿತ್ತು. ಬಳಿಕ ಎಪ್ರಿಲ್ 48, ಮೇ 49 ಸಂಖ್ಯೆ ಇರುವ ಮೂಲಕ ಇಳಿಕೆ ಕಂಡಿದ್ದರೆ, ಜೂನ್ ಬಳಿಕ ಮತ್ತೆ ಏರಿಕೆಯಾಗಿದೆ. ಜೂನ್ 55, ಜುಲೈ 58 ಮತ್ತು ಆಗಸ್ಟ್‌ನಲ್ಲಿ 55 ಮಂದಿ ಮಕ್ಕಳು ತೀವ್ರ ತರದ ಅಪೌಷ್ಟಿಕತೆಯಿಂದ ಬಳಲುತ್ತಿರುವವರಾಗಿದ್ದಾರೆ. ಇಂತಹ ಮಕ್ಕ ಳಿಗೂ ಅಂಗನವಾಡಿಗಳ ಮುಖಾಂತರ ನಿಯಮಿತವಾಗಿ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ವಿತರಿಸಲಾಗುತ್ತಿದೆ.
5 ವರ್ಷದೊಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ವಯಸ್ಸಿಗನುಗುಣವಾಗಿ ಅಪೌ ಷ್ಟಿಕತೆಯ ಪ್ರಮಾಣವನ್ನು ಅಳೆಯ ಲಾಗುತ್ತದೆ. 1 ವರ್ಷದ ಮಗುವಿನ ತೂಕ 7 ಕೆಜಿ ಮೇಲ್ಪಟ್ಟಿರಬೇಕು. ಸರಾಸರಿ 6 ಕೆಜಿ 900 ಗ್ರಾಂಗಿಂತ ಕಡಿಮೆ ತೂಕ ಹೊಂದಿದ ಮಕ್ಕಳಲ್ಲಿ ಅಪೌಷ್ಟಿಕತೆ ಇರುತ್ತದೆ. 8 ಕೆಜಿ 400 ಗ್ರಾಂಗಿಂತ ಕಡಿಮೆ ತೂಕ ಹೊಂದಿದ 2 ವರ್ಷದ ಮಕ್ಕಳು, 10 ಕೆಜಿಗಿಂತ ಕಡಿಮೆ ತೂಕ ಹೊಂದಿದ 3 ವರ್ಷದ ಮಕ್ಕಳು, 11 ಕೆಜಿ 200 ಗ್ರಾಂಗಿಂತ ಕಡಿಮೆ ತೂಕ ಹೊಂದಿದ 4 ವರ್ಷದ ಮಕ್ಕಳು ಹಾಗೂ 12 ಕೆಜಿ 300 ಗ್ರಾಂಗಿಂತ ಕಡಿಮೆ ತೂಕ ಹೊಂದಿದ 5 ವರ್ಷದ ಮಕ್ಕಳಲ್ಲಿ ಅಪೌಷ್ಟಿಕತೆ ಇರುತ್ತದೆ. ಎತ್ತರಕ್ಕೆ ತಕ್ಕ ತೂಕ ಹೊಂದಿರದ ಮಕ್ಕಳನ್ನೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕ ಳೆಂದು ಗುರುತಿಸಲಾಗುತ್ತದೆ. ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪೌಷ್ಟಿಕತೆ ಹೆಚ್ಚಳಕ್ಕೆ ಕಾರಣ
ಬಡತನ, ಗರ್ಭ ಧರಿಸಿದ ವೇಳೆ ತಾಯಿ ವಿಟಮಿನ್‌ಯುಕ್ತ ಆಹಾರ ಸೇವಿಸದೇ ಇರುವುದು ಮುಂತಾದ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಗನವಾಡಿಗಳ ಮುಖಾಂತರ ಸರಕಾರವೇ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಸೊಪ್ಪು ತರಕಾರಿ, ಹಣ್ಣು, ಒಣ ಹಣ್ಣು, ಮೊಟ್ಟೆ, ಮೀನು, ಹಾಲು, ಮೊಸರು ಮುಂತಾದವುಗಳ ಸೇವನೆಯಿಂದ ತಾಯಿ ಮತ್ತು ಮಗುವಿನ ದೇಹಕ್ಕೆ ವಿಟಮಿನ್ ದೊರೆಯುತ್ತದೆ.
ಸಂಪೂರ್ಣ ನಿಯಂತ್ರಣಕ್ಕೆ ಪ್ರಯತ್ನ
ಸದ್ಯ 55 ಮಂದಿ ಮಕ್ಕಳು ದ.ಕ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಇದು ತೀರಾ ಕಡಿಮೆ ಇದೆ. ಸಂಪೂರ್ಣ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ. ವಂಶಪಾರಂಪರ್ಯ, ಇತರ ಕಾರಣಗಳಿಂದಾಗಿಯೂ ಅಪೌಷ್ಟಿಕತೆ ಉಂಟಾಗುತ್ತದೆ.
- ಸುಂದರ ಪೂಜಾರಿ,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.
-ಧನ್ಯಾ ಬಾಳೆಕಜೆ