Advertisement

ಕಾಳಮ್ಮವಾಡಿ ಡ್ಯಾಂನಲ್ಲಿ ಹೆಚ್ಚಿದ ಸೋರಿಕೆ: ದುರಸ್ತಿಗೆ ನೀತಿ ಸಂಹಿತೆ ಅಡ್ಡಿ

04:54 PM Jun 01, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಜೀವಜಲ ಒದಗಿಸುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೀರು ಸೋರಿಕೆ ಆಗುತ್ತಿದ್ದು, ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಒಂದು ವೇಳೆ ಜಲಾಶಯ ಆಸುಪಾಸು ಪ್ರಬಲ ತೀವ್ರತೆಯ ಭೂಕಂಪ ಸಂಭವಿಸಿದರೆ ಜಲಾಶಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.

Advertisement

ಕೊಲ್ಲಾಪುರದಲ್ಲಿ ದೂಧಗಂಗಾ ನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಒಪ್ಪಂದದಿಂದ ಕಾಳಮ್ಮವಾಡಿ ಜಲಾಶಯ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಶೇ.80ರಷ್ಟು ಅನುದಾನ ಒದಗಿಸಿದ್ದರೆ, ಕರ್ನಾಟಕ ಶೇ.15ರಷ್ಟು ಅನುದಾನ ನೀಡಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಸುಮಾರು 41 ಸಾವಿರ ಹೆಕ್ಟೆರ್‌ ಜಮೀನಿಗೆ ವರದಾನವಾಗಿದ್ದರೆ, ಕರ್ನಾಟಕದ ಕೃಷಿ ಭೂಮಿಗೂ ಇದು ಜೀವಜಲವಾಗಿದೆ. ಕರ್ನಾಟಕಕ್ಕೆ ಪ್ರತಿ ವರ್ಷ 4 ಟಿಎಂಸಿ ಅಡಿ ನೀರು ಹರಿದು ಬರುತ್ತದೆ.

ಸದ್ಯ ಕಾಳಮ್ಮವಾಡಿ ಜಲಾಶಯದಲ್ಲಿ ನೀರು ಸೋರಿಕೆ ಆಗುತ್ತಿದ್ದು, ಇದರ ದುರಸ್ತಿಗಾಗಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ 80 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಕೆಲಸ ಆರಂಭಿಸಬೇಕೆಂದರೆ ಮುಂಗಾರು ಮಳೆ ಶುರುವಾಗಲಿದೆ. ಹೀಗಾಗಿ ಮುಂದಿನ ವರ್ಷವೇ ಈ
ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ 2023, ಆ.15ರಂದು ಕಳೆದ ವರ್ಷದ ಮಳೆಗಾಲ ಮುಗಿಯುತ್ತಿದ್ದಂತೆ ಸೋರಿಕೆ ತಡೆಯುವ ಕಾಮಗಾರಿ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿಯೂ ಚರ್ಚೆ ಆಗಿತ್ತು. ಆದರೆ ಈಗ ಎರಡನೇ ವರ್ಷದ ಮಳೆಗಾಲ ಶುರುವಾದರೂ ಕೆಲಸ ಆಗಲಿಲ್ಲ. ಒಂದೆಡೆ ಜಲಾಶಯದಲ್ಲಿ ಬಿರುಕು ಉಂಟಾಗಲಿದೆ ಎಂದು ಜನರಿಗೆ ಭಯ ಹುಟ್ಟಿಸುತ್ತಿರುವ ಅಲ್ಲಿನ ಜನಪ್ರತಿನಿಧಿಗಳು, ಇನ್ನೊಂದೆಡೆ ಕಾಮಗಾರಿ ವಿಳಂಬ ಮಾಡಿ ನಿರ್ಲಕ್ಷ್ಯ ತೋರುತ್ತಿದ್ದಾರೆ.

Advertisement

ಸದ್ಯಕ್ಕಂತೂ ಕಾಳಮ್ಮವಾಡಿ ಜಲಾಶಯಕ್ಕೆ ಯಾವುದೇ ಅಪಾಯ ಇಲ್ಲ. ಒಂದು ವೇಳೆ ಭೂಕಂಪ ಸಂಭವಿಸಿದರೆ ಜಲಾಶಯಕ್ಕೆ ಬಿರುಕು ಉಂಟಾಗುವ ಸಾಧ್ಯತೆ ಇದೆ. 1963-64ರಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದಾಗ ದೊಡ್ಡ ಅನಾಹುತ ಆಗಿತ್ತು. ಅದರಂತೆ ಮಹಾರಾಷ್ಟ್ರದ ಲಾತೂರ್‌ನಲ್ಲಿಯೂ ದೊಡ್ಡ ಭೂಕಂಪ ಸಂಭವಿಸಿತ್ತು. ಆದರೆ ನಮ್ಮ ಭಾಗದಲ್ಲಿ ಅಂಥ ಭೂಕಂಪ ಆಗಿಲ್ಲ. ಕಾಳಮ್ಮವಾಡಿ ಜಲಾಶಯದಲ್ಲಿ 6.5 ತೀವರತೆಯ ಭೂಕಂಪ ಸಂಭವಿಸಿದರೆ ಮಾತ್ರ ಜಲಾಶಯಕ್ಕೆ ಆತಂಕ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕರ್ನಾಟಕದ ನದಿ, ಉಪಕಾಲುವೆಗಳಿಗೆ ನೀರು
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಿಂದ ಕರ್ನಾಟಕಕ್ಕೂ ನೀರು ಹರಿದು ಬರುತ್ತದೆ. ಕಾಳಮ್ಮವಾಡಿಯಿಂದ ನಿಡೋರಿ ಹಾಗೂ ಬಿದರಿ ಉಪಕಾಲುವೆಗಳಿಗೆ ನೀರು ಹರಿಬಿಟ್ಟರೆ, ದೂಧಗಂಗಾ ಹಾಗೂ ವೇದಗಂಗಾ ನದಿಗೂ ನೀರು ಬರುತ್ತದೆ. 4 ಟಿಎಂಸಿ ಅಡಿ ನೀರು ನೀಡಬೇಕೆಂಬ ನಿಯಮವಿದ್ದು, ಅದರಂತೆ ಈ ಜಲಾಶಯದಿಂದ ಕರ್ನಾಟಕದ ನದಿ ಹಾಗೂ ಉಪಕಾಲುವೆಗಳಿಗೆ ಮಹಾರಾಷ್ಟ್ರ ಸರ್ಕಾರ ನೀರು ಬಿಡುತ್ತದೆ.

ಕೊಲ್ಲಾಪುರದ ಕಾಳಮ್ಮವಾಡಿ ಜಲಾಶಯದಲ್ಲಿ 7-8 ವರ್ಷಗಳಿಂದ ನೀರು ಸೋರಿಕೆ ಆಗುತ್ತಿದೆ. ಇದರಿಂದ ಜಲಾಶಯಕ್ಕೆ ಅಪಾಯ ಇಲ್ಲ. ಸೋರಿಕೆ ತಡೆಯಲು ಮಹಾರಾಷ್ಟ್ರ ಸರ್ಕಾರ ಅನುದಾನ ಮಂಜೂರು ಮಾಡಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲಸ ಆರಂಭಗೊಂಡಿಲ್ಲ. ಭಾರೀ ತೀವ್ರತೆಯ ಭೂಕಂಪ ಸಂಭವಿಸಿದರೆ ಮಾತ್ರ ಜಲಾಶಯದಲ್ಲಿ ಬಿರುಕು ಉಂಟಾಗುತ್ತದೆ.
●ಸಿ.ಡಿ. ಪಾಟೀಲ, ನಿವೃತ್ತ
ಕಾರ್ಯನಿರ್ವಾಹಕ ಎಂಜಿನಿಯರ್‌

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next