ಕೋವಿಡ್ ಸಂಕಷ್ಟವು ಆರಂಭವಾಗುತ್ತಿದ್ದಂತೆಯೇ, ಕೆಲವೇ ಸಮಯದಲ್ಲಿ ಭಾರತ ಸೇರಿದಂತೆ ಪ್ರಪಂಚದ ಬೃಹತ್ ಅರ್ಥವ್ಯವಸ್ಥೆಗಳೆಲ್ಲ ತತ್ತರಿಸಿಹೋದವು. ಆದರೆ ಇನ್ನೊಂದೆಡೆ ಜಾಗತಿಕ ಕೋವಿಡ್ ಸಂಕಷ್ಟಕ್ಕೆ ಕಾರಣವಾದ, ಆ ವೈರಸ್‌ಗೆ ಮೊದಲು ತುತ್ತಾದ ಚೀನ ಮಾತ್ರ ತನ್ನ ಅರ್ಥವ್ಯವಸ್ಥೆಯನ್ನು ಸದೃಢವಾಗಿ ಉಳಿಸಿಕೊಂಡಿದೆ. ಡ್ರ್ಯಾಗನ್ ರಾಷ್ಟ್ರದ ಈ ದೃಢತೆಗೆ ಅದು ಸ್ವಾವಲಂಬಿಯಾಗಿರುವುದೇ ಕಾರಣ ಎಂದು ವಿಶ್ವದ ವಿತ್ತ ಪರಿಣತರೆಲ್ಲ ಸ್ಪಷ್ಟವಾಗಿ ಹೇಳುತ್ತಾರೆ. ಈ ಕಾರಣಕ್ಕಾಗಿಯೇ, ಕೋವಿಡ್‌ನ ಈ ಅವಧಿಯಲ್ಲಿ ಬಹುತೇಕ ರಾಷ್ಟ್ರಗಳು ಸ್ವಾವಲಂಬನೆಯ ಮಾರ್ಗದಲ್ಲಿ ಸಾಗಲು ಚಿಂತನೆ ನಡೆಸಿವೆ.
ಇಂಥದ್ದೊಂದು ಚಿಂತನೆ ಭಾರತದಲ್ಲಿ ದಶಕಗಳಿಂದಲೇ ಇದೆಯಾದರೂ, ಈ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನಗಳು ಆಗಿರಲಿಲ್ಲ. ಈ ಕಾರಣಕ್ಕಾಗಿಯೇ ನರೇಂದ್ರ ಮೋದಿ ಸರ್ಕಾರ ತಂದ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳು ಮಹತ್ವ ಪಡೆಯುತ್ತವೆ. ಎಂಎಸ್‌ಎಂಇಗಳು ಸೇರಿದಂತೆ ದೇಶದ ಉತ್ಪಾದನಾ ವಲಯ, ತಂತ್ರಜ್ಞಾನ ಕ್ಷೇತ್ರ, ಕೃಷಿ-ಕೈಗಾರಿಕೆ ಸೇರಿದಂತೆ ಬಹುತೇಕ ವಲಯಗಳಲ್ಲಿ ಭಾರತ ಎಷ್ಟರ ಮಟ್ಟಿಗೆ ಸ್ವಾವಲಂಬಿಯಾಗುತ್ತಾ ಸಾಗುತ್ತದೋ, ಅಷ್ಟರಮಟ್ಟಿಗೆ ಭವಿಷ್ಯದ ಜಾಗತಿಕ ಪಟಲದಲ್ಲಿ ಭಾರತದ ವರ್ಚಸ್ಸು ಸ್ಥಾಪನೆಯಾಗುತ್ತದೆ. ಹಾಗೆಂದು, ಆತ್ಮನಿರ್ಭರವಾಗುವುದು ಎಂದರೆ ಜಾಗತಿಕ ವ್ಯಾಪಾರದಿಂದ ವಿಮುಖವಾಗುವುದು ಎಂದರ್ಥವಲ್ಲ, ಬದಲಾಗಿ ಆಮದನ್ನು ಮಾಡಿಕೊಳ್ಳುವ ಉತ್ಪನ್ನಗಳು, ತಂತ್ರಜ್ಞಾನದ ಪ್ರಮಾಣವನ್ನು ತಗ್ಗಿಸುತ್ತಾ, ರಫ¤ನ್ನು ಹೆಚ್ಚಿಸುವುದೂ ಈ ಪರಿಕಲ್ಪನೆಯ ಪ್ರಮುಖ ಗುರಿ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶೀಯ ಉತ್ಪಾದನೆಗೆ, ಬೆಳವಣಿಗೆಗೆ ಪೂರಕವಾಗುವಂಥ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಸರಕಾರ ಘೋಷಿಸಿದ್ದು, ಮತ್ತಷ್ಟು ಉತ್ಪಾದನೆ-
ಹೂಡಿಕೆ ಸ್ನೇಹಿ ನೀತಿಗಳನ್ನೂ ಸೃಷ್ಟಿಸುವ ನಿರೀಕ್ಷೆಯಿದೆ. ದೇಶವನ್ನು ಸ್ವಾವಲಂಬನೆಯ ದಾರಿಯಲ್ಲಿ ಸಾಗಿಸುವ ಉದ್ದೇಶಕ್ಕಾಗಿ ಈಗಾಗಲೇ ಎಲೆಕ್ಟ್ರಾನಿಕ್ಸ್ ಪರಿಕರಗಳು, ಔಷಧೋದ್ಯಮ ಸೇರಿದಂತೆ ಉತ್ಪಾದನಾ ರಂಗಗಳಲ್ಲಿ ಹೂಡಿಕೆ, ಎಂಎಸ್‌ಎಂಇಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಗುರುವಾರ ಘೋಷಿಸಲಾದ 3ನೇ ಹಂತದ ಪ್ಯಾಕೇಜ್‌ನಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ. ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆಯ ಮೂಲಕ ಹೊಸದಾಗಿ ಉದ್ಯೋಗ ನೀಡುವ ಸಂಸ್ಥೆಗಳಿಗೆ ಸಬ್ಸಿಡಿ, ವಿಶೇಷ ಇಪಿಎಫ್ ಘೋಷಿಸಲಾಗಿದೆ.
ಆದರೆ ಇವೆಲ್ಲದರ ಜತೆಯಲ್ಲೇ ದೇಶದಲ್ಲಿನ ಸಂಶೋಧನೆ ಹಾಗೂ ಅಭಿವೃದ್ಧಿ ವಲಯದಲ್ಲೂ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವಿದೆ. ಭಾರತಕ್ಕೆ ಹೋಲಿಸಿದರೆ ಕಳೆದೆರಡು ದಶಕಗಳಲ್ಲಿ ಅಮೆರಿಕ ಹಾಗೂ ಚೀನ ಸಂಶೋಧನಾ ವಲಯಕ್ಕೆ ಕೊಟ್ಟಿರುವ ಉತ್ತೇಜನ ಹುಬ್ಬೇರಿಸುವಂತಿದೆ. ತಂತ್ರಜ್ಞಾನ ವಲಯದಲ್ಲಿ ಈ ರಾಷ್ಟ್ರಗಳು ಸಾಧಿಸಿರುವ ಪಾರಮ್ಯವು ಸರ್ಕಾರಗಳ ಪ್ರಯತ್ನಗಳ ಫಲ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಉದಾಹರಣೆಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಇನ್ನೊಂದು ದಶಕದಲ್ಲಿ ಜಗತ್ತನ್ನೇ ಆಳಲಿದೆ. ಆದರೆ, ಚೀನ, ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಈ ನಿಟ್ಟಿನಲ್ಲಿ ನಾವಿನ್ನೂ ಅಂಬೆಗಾಲಿಡುತ್ತಿದ್ದೇವೆ. ನಮ್ಮಲ್ಲಿ ಅನೇಕ ಅತ್ಯುತ್ತಮ ವಿವಿಗಳು ಇವೆಯಾದರೂ, ಅಭೂತಪೂರ್ವವೆನಿಸುವಂಥ ಕೃತಕಬುದ್ಧಿಮತ್ತೆ ಸಂಸ್ಥೆಗಳಿಲ್ಲ. ಇಂದಿನ ಜಾಗತಿಕ ಎಐ ಮಾಡೆಲ್‌ಗಳಲ್ಲಿ ಭಾರತೀಯ ಸಂಶೋಧಕರ ಹೆಸರೇ ಕಾಣಿಸುವುದಿಲ್ಲ. ಆದರೆ, ಕೆಲವು ವರ್ಷಗಳಿಂದ ನಮ್ಮಲ್ಲಿ ಜನ್ಮತಾಳುತ್ತಿರುವ ಸ್ಟಾರ್ಟ್‌ಅಪ್‌ಗ್ಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಹು ಆಯಾಮದ ಪ್ರಯೋಗಕ್ಕೆ ಪ್ರಯತ್ನಿಸುತ್ತಿರುವುದಂತೂ ಸತ್ಯ. ಈ ಕಾರಣಕ್ಕಾಗಿಯೇ, ಆತ್ಮನಿರ್ಭರ ಪರಿಕಲ್ಪನೆಯಡಿ ಇಂಥ ರಂಗಗಳಲ್ಲೂ ಭಾರತ ವೇಗವಾಗಿ ಮುನ್ನಡೆಯಲೇಬೇಕಿದೆ.