ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಬಿ.ತಿಮ್ಮೇಗೌಡರ ಅವಧಿ ಮುಗಿದ ನಂತರ ಖಾಲಿಯಾಗಿದ್ದ ಕುಲಪತಿ ಹುದ್ದೆಗೆ ಮೂರನೇ ಬಾರಿಗೆ ಹಂಗಾಮಿ ಕುಲಪತಿಯಾಗಿ ಬೆಂವಿವಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡೀನ್ ಪ್ರೊ.ಎಚ್.ಎನ್. ರಮೇಶ್ ಶನಿವಾರ ಅಧಿಕಾರ ವಹಿಸಿಕೊಂಡರು.
ಹಂಗಾಮಿ ಕುಲಪತಿ ಡಾ.ಎಂ.ಮುನಿರಾಜು ಅವರ ಡೀನ್ ಅವಧಿ ಮುಗಿದಿರುವುದರಿಂದ ವಿವಿಯ ಹಿರಿಯ ಡೀನ್ ಆಗಿರುವ ಪ್ರೊ.ಎಚ್.ಎನ್. ರಮೇಶ್ ಅವರನ್ನು ಜೇಷ್ಠತೆಯ ಆಧಾರದಲ್ಲಿ ರಾಜ್ಯಪಾಲರು ಪ್ರಭಾರ ಕುಲಪತಿಯಾಗಿ ನೇಮಿಸಿದ್ದಾರೆ. ಪ್ರೊ.ಬಿ. ತಿಮ್ಮೇಗೌಡ ಅವರ ಅವಧಿ ಮುಗಿದ ನಂತರ ಒಂದು ತಿಂಗಳ ಕಾಲ ಸಮೂಹ ಸಂವಾಹನ ವಿಭಾಗದ ಡಾ. ಜಗದೀಶ್ ಪ್ರಕಾಶ್ ಅವರು ಹಂಗಾಮಿ ಕುಲಪತಿಯಾಗಿದ್ದರು. ಅವರ ನಂತರ ಆ ಹುದ್ದೆ ಅಲಂಕರಿಸಿರುವ ಡಾ.ಎಂ.ಮುನಿರಾಜು ಅವರು ಸುಮಾರು 4 ತಿಂಗಳು ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂರನೇ ಹಂಗಾಮಿ ಕುಲಪತಿಯಾಗಿ ಪ್ರೊ. ಎಚ್.ಎನ್. ರಮೇಶ್ ನೇಮಕಗೊಂಡಿದ್ದಾರೆ.
ಶನಿವಾರ ಬೆಂವಿವಿ ಜ್ಞಾನಭಾರತಿ ಆಡಳಿತ ಕಚೇರಿಯಲ್ಲಿ ಡಾ.ಎಂ.ಮುನಿರಾಜು ಅವರು ಪ್ರಭಾರ ಕುಲಪತಿ ಅಧಿಕಾರವನ್ನು ಪ್ರೊ.ಎಚ್.ಎನ್. ರಮೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ, ಕುಲಸಚಿವ ಪ್ರೊ.ಬಿ.ಕೆ.ರವಿ, ಕುಲಸಚಿವ (ಮೌಲ್ಯಮಾಪನ) ಪ್ರೊ. ಎಂ. ಶಂಕರ ರೆಡ್ಡಿ, ವಿತ್ತಾಧಿಕಾರಿ ಡಾ.ಎ.ಲೋಕೇಶ್, ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸಿಂಹ ಹಾಗೂ ಬಿ.ಶಿವಣ್ಣ ಉಪಸ್ಥಿತರಿದ್ದರು.
ಕುಲಪತಿ ನೇಮಕ ಯಾವಾಗ?: ಬೆಂವಿವಿ ಕುಲಪತಿ ಹುದ್ದೆಗೆ ಎರಡು ಹೆಸರು ಅಂತಿಮಗೊಳಿಸಿ ಸರ್ಕಾರ ಈಗಾಗಲೇ ಕಡತವನ್ನು ರಾಜ್ಯಪಾಲರಿಗೆ ಕಳುಹಿಸಿದೆ. ಆದರೆ, ರಾಜ್ಯಪಾಲರು ಇನ್ನು ಅಂತಿಮ ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಬೆಂವಿವಿ ಕುಲಪತಿ ನೇಮಕ ಯಾವಾಗ ಎಂಬ ಚರ್ಚೆ ದಟ್ಟವಾಗಿದೆ.
ಬೆಂವಿವಿ ಕುಲಪತಿ ಹುದ್ದೆಗೆ ಬೆಂಗಳೂರು ಯುನಿರ್ವಸಿಟಿ ಕಾಲೇಜ್ ಆಫ್ಎಂಜಿನಿಯರಿಂಗ್(ಯುವಿಸಿಇ) ಪ್ರಾಂಶುಪಾಲರಾದ ಪ್ರೊ. ಕೆ.ಆರ್.ವೇಣುಗೋಪಾಲ್, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ನಾಗಭೂಷಣ್ ಹಾಗೂ ಪ್ರೊ. ಸಂಗಮೇಶ್ ಪಾಟೀಲ್ ಅವರ ಹೆಸರನ್ನು ಶೋಧಾನ ಸಮಿತಿ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಸಲ್ಲಿಸಿತ್ತು.
ಸರ್ಕಾರ ಪ್ರೊ. ಕೆ.ಆರ್.ವೇಣುಗೋಪಾಲ್ ಹಾಗೂ ಪ್ರೊ. ಸಂಗಮೇಶ್ ಪಾಟೀಲ್ ಅವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಸಲ್ಲಿಸಿತ್ತು. ಹತ್ತು ದಿನ ಕಳೆದರೂ ಕುಲಪತಿ ನೇಮಕ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಈ ಮಧ್ಯೆ, ಬೆಂವಿವಿಗೆ ಪ್ರೊ. ಕೆ.ಆರ್.ವೇಣುಗೋಪಾಲ್ ಅವರನ್ನು ಕುಲಪತಿಯಾಗಿ ಏಕೆ ನೇಮಕ ಮಾಡಬಾರದು ಎಂದು ರಾಜ್ಯಪಾಲರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.