Advertisement
ಫಸಲ್ ವಿಮಾ ಯೋಜನೆಯಲ್ಲಿ ಭತ್ತ, ಪ್ರಧಾನಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಳಿಗೆ ವಿಮೆ ಸೌಲಭ್ಯ ಸಿಗುತ್ತಿದೆ. ಆರಂಭದಲ್ಲಿ ವಿಮಾ ಕಂತಿನ ಮೊತ್ತ ಹೆಚ್ಚಾಯಿತು ಎಂದು ರೈತರು ಅಪಸ್ವರ ಎತ್ತಿದ್ದರು. ಪ್ರಾ.ಕೃ.ಪ.ಸ. ಸಂಘದ ಸಿಬಂದಿ ಕೆಲವು ರೈತರನ್ನು ವಿಮೆ ವ್ಯಾಪ್ತಿಗೆ ಒಳಪಡಿಸುವಷ್ಟರಲ್ಲಿ ಹೈರಾಣಾಗಿದ್ದರು. ಆರಂಭದ ವರ್ಷದಲ್ಲಿ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಹೆಚ್ಚು ಪ್ರಯೋಜನಕ್ಕೆ ಬಂದಿರಲಿಲ್ಲ. 2 ಹಾಗೂ 3ನೇ ವರ್ಷ ಪರಿಹಾರ ಮೊತ್ತ ದೊರೆತಿದೆ.
ಉಪಗ್ರಹ ಸಮೀಕ್ಷೆ ಆಧಾರಿತ ಈ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಕೃಷಿ ಹಾನಿಗೆ ಅವರು ಪಾವತಿಸಿದ ಕಂತಿನ 20ಕ್ಕಿಂತಲೂ ಹೆಚ್ಚು ಪಟ್ಟು ಪರಿಹಾರ ದೊರ ಕಿದೆ. ಮಳೆ ಪ್ರಮಾಣ ಹೆಚ್ಚಾದರೂ, ಕಡಿಮೆ ಯಾದರೂ, ಉಷ್ಣಾಂಶ ಏರು ಪೇರಾದರೂ ರೈತರ ಬೆಳೆಗೆ ಹಾನಿಯಾಗುವ ಅಂಶ ವನ್ನು ಪತ್ತೆ ಹಚ್ಚಲಾಗುತ್ತದೆ. ನಿಗದಿತ ಅವಧಿಯಲ್ಲಿ ಮಳೆಯಾಗದಿದ್ದರೆ, ಬೆಳೆಗೆ ಪೂರಕ ವಾಗುವಷ್ಟು ಬಿಸಿಲು ಇಲ್ಲದಿದ್ದರೆ, ಪ್ರಾಕೃತಿಕ ವಿಕೋಪ ಕಂಡುಬಂದರೆ ಉಪಗ್ರಹ ಸಮೀಕ್ಷೆ ಆಧಾರದಲ್ಲೇ ಗುರುತಿಸಿ, ಪರಿಹಾರ ಮೊತ್ತ ನಿಗದಿ ಮಾಡಲಾಗುತ್ತದೆ. ಅರ್ಧ ಎಕ್ರೆ ಜಾಗದ ಪಹಣಿ ಪತ್ರ, ಅಡಿಕೆ, ಕಾಳುಮೆಣಸು ಕೃಷಿ ಇದ್ದರೂ ವಿಮೆ ಮಾಡಿಸಬಹುದು. ವಿಮಾ ಕಂತಿನ ಮೊತ್ತವನ್ನು ಎಕ್ರೆಗೆ 2,500 ರೂ. ನಿಗದಿಪಡಿಸಲಾಗಿದೆ. ಸರಕಾರವೂ ಅಷ್ಟೇ ಮೊತ್ತವನ್ನು ಭರಿಸುತ್ತದೆ. ಒಬ್ಬ ರೈತನಲ್ಲಿ ಎಷ್ಟು ಎಕರೆ ಅಡಿಕೆ ಅಥವಾ ಕಾಳಮೆಣಸು ಕೃಷಿ ಇದ್ದರೂ ಅದಕ್ಕೆ ವಿಮೆ ಮಾಡಿಸಬಹುದು.
Related Articles
ಪ್ರಧಾನಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 5,650 ರೈತರು ಅಡಿಕೆ ಹಾಗೂ ಕಾಳು ಮೆಣಸು ಬೆಳೆಗೆ 1,45,25,000 ರೂ. ವಿಮಾ ಕಂತು ಪಾವತಿಸಿದ್ದರು. ಇದರಲ್ಲಿ 4,516 ರೈತರ ಖಾತೆಗಳಿಗೆ 26 ಕೋಟಿ ರೂ. ಪರಿಹಾರ ಜಮೆಯಾಗಿದೆ. ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ 21.5 ಕೋಟಿ ರೂ. ಜಮೆಯಾದರೆ, ಪ್ರಾ.ಕೃ.ಪ.ಸ. ಸಂಘಗಳ ಖಾತೆಗಳಿಗೆ 4.5 ಕೋಟಿ ರೂ. ಜಮೆಯಾಗಿದೆ. 57,000 ರೂ ವಿಮಾ ಕಂತು ಪಾವತಿ ಮಾಡಿದ ರೈತ ಮುಳ್ಳಂಕೋಚ್ಚಿ ಅರವಿಂದ ಭಟ್ ಅವರು 8.05 ಲಕ್ಷ ರೂ. ಪರಿಹಾರ ಪಡೆದಿದ್ದು, ಇದು ಜಿಲ್ಲೆಯಲ್ಲೇ ಗರಿಷ್ಠ ಮೊತ್ತವಾಗಿದೆ. ಕೆಲವು ರೈತರು 3 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಪರಿಹಾರ ಪಡೆದಿದ್ದಾರೆ.
Advertisement
ಆಲಂಕಾರು ಪ್ರಥಮದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿಕರು ಕಡಿಮೆಯಿರುವುದರಿಂದ ಕಳೆದ ಸಾಲಿನಲ್ಲಿ ಫಸಲ್ ವಿಮಾ ಯೋಜನೆಗೆ ಒಳಪಟ್ಟ ರೈತರ ಸಂಖ್ಯೆಯೂ ಕಡಿಮೆಯಿದೆ. ಈ ಬಾರಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳ ಕೆಲವು ಭತ್ತದ ಕೃಷಿಕರು ಬೆಳೆ ವಿಮೆ ಮಾಡಿಸಿದ್ದಾರೆ. ಕಾಳುಮೆಣಸು ಹಾಗೂ ಅಡಿಕೆಗೆ ಪ್ರಧಾನಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಆಲಂಕಾರು ಪ್ರಾ.ಕೃ.ಪ.ಸ. ಸಂಘ ಜಿಲ್ಲೆಯಲ್ಲೇ ಅತೀ ಹೆಚ್ಚು ರೈತರನ್ನು ವಿಮೆಗೆ ಒಳಪಡಿಸಿದೆ. ಈ ಬಾರಿ ಜಿಲ್ಲೆಯ 24,805 ರೈತರು ಬೆಳೆ ವಿಮೆ ಮಾಡಿಸಿದ್ದು, 4,24,94,000 ರೂ. ಕಂತು ಪಾವತಿಸಿದ್ದಾರೆ. 100 ಕೋಟಿ ರೂ.ಗಳಿಗೂ ಹೆಚ್ಚು ವಿಮಾ ಪರಿಹಾರ ನಿರೀಕ್ಷಿಸಲಾಗಿದೆ. ಕೊಳೆರೋಗ ಪರಿಹಾರ, ಸಹಾಯಧನಕ್ಕಿಂತ ಈ ಯೋಜನೆ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹೆಚ್ಚು ಪ್ರಯೋಜನಕಾರಿ
ನನಗೆ 8.05 ಲಕ್ಷ ರೂ. ವಿಮಾ ಪರಿಹಾರ ದೊರೆತಿದೆ. ಇದರಲ್ಲಿ ಅಡಿಕೆಗೆ 6 ಲಕ್ಷ ರೂ ಹಾಗೂ ಕಾಳುಮೆಣಸಿಗೆ 2.05 ಲಕ್ಷ ರೂ. ಆ ವರ್ಷ ಕೊಳೆ ರೋಗದಲ್ಲಿ 40 ಕ್ವಿಂಟಲ್ ಅಡಕೆ ಹಾಗೂ 15 ಕ್ವಿಂಟಲ್ ಕಾಳುಮೆಣಸು ನಾಶವಾಗಿದೆ. 300 ಅಡಿಕೆ ಮರಗಳು ಗಾಳಿಗೆ ಉರುಳಿವೆ. ಒಟ್ಟು 20 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿತ್ತು. ನಾನು ಪ್ರಧಾನಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಕಂತಾಗಿ 57,000 ರೂ. ಪಾವತಿಸಿದ್ದೇನೆ. ಅದರ ಪರಿಹಾರ ಮೊತ್ತ ಬರುವಾಗ ತಡವಾಗಿತ್ತು. ಈ ಬಾರಿಯೂ ವಿಮಾ ಕಂತು ಪಾವತಿಸಿದ್ದೇನೆ. ಕೊಳೆರೋಗ ಪರಿಹಾರ, ಸಹಾಯಧನಕ್ಕಿಂತ ಇಂತಹ ವಿಮಾ ಯೋಜನೆ ರೈತನಿಗೆ ಹೆಚ್ಚು ಪ್ರಯೋಜನವಾಗಲಿದೆ.
- ಮುಳ್ಳಂಕೋಚಿ ಅರವಿಂದ ಭಟ್,ಪ್ರಗತಿಪರ ಕೃಷಿಕರು, ಆಲಂಕಾರು ಬೆಳೆ ವಿಮೆ ಕಡ್ಡಾಯ
ಇನ್ನು ಪ್ರಧಾನ ಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಸಹಕಾರಿ ಸಂಘದ ರೈತರಿಗೆ ಕಡ್ಡಾಯವಾಗಲಿದೆ. ಸಂಘದಲ್ಲಿ ಬೆಳೆ ಸಾಲ ಪಡೆಯುವ ರೈತರು ವಿಮೆ ಮಾಡಿಸದಿದ್ದರೆ ಸಬ್ಸಿಡಿಯಂತಹ ಸವಲತ್ತುಗಳು ಸಿಗುವುದಿಲ್ಲ. ನಮ್ಮ ಸಂಘದಲ್ಲಿ 2017-18ರಲ್ಲಿ 253 ಸದಸ್ಯರು 10,11,000 ರೂ. ವಿಮಾ ಕಂತು ಪಾವತಿಸಿದ್ದರು. ಅವರಿಗೆ 1,56,70,000 ರೂ. ಪರಿಹಾರ ದೊರಕಿದೆ. 2018-19ರ ಸಾಲಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು 1,461 ಸದಸ್ಯರು ಒಟ್ಟು 40,67,000 ರೂ. ಕಂತು ಪಾವತಿಸಿದ್ದಾರೆ. ಈ ಯೋಜನೆಯ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ಸಿಗಬೇಕಾಗಿದೆ.
- ರಮೇಶ್ ಭಟ್ಟ ಉಪ್ಪಂಗಳ, ಅಧ್ಯಕ್ಷರು, ಆಲಂಕಾರು ಪ್ರಾ.ಕೃ.ಪ.ಸ. ಸಂಘ ಸದಾನಂದ ಆಲಂಕಾರು