ಶ್ರೀರಂಗಪಟ್ಟಣ: ವಾಯುಭಾರ ಕುಸಿತದಿಂದಾಗಿ ಕೊಡಗು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಗಿದ್ದು, ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ಕ್ಕೂ ಹೆಚ್ಚಿನ ನೀರನ್ನು ಹೊರ ಬಿಡಲಾಗಿದೆ.
ಬಲಮುರಿಯಲ್ಲಿ ನೀರು: ತಾಲೂಕಿನ ಪ್ರವಾಸಿ ತಾಣಗಳಾದ ಎಡಮುರಿ ಹಾಗೂ ಬಲಮುರಿ ಜಲಪಾತಗಳಲ್ಲಿ ನೀರು ಭೋರ್ಗರೆಯುತ್ತಿದೆ. ಪ್ರವಾಸಿಗರು ತುಂಬಿ ಹರಿಯುತ್ತಿರುವ ಜಲಪಾತಗಳ ಜಲವೈಭವ ವೀಕ್ಷಿಸುವ ಪ್ರವಾಸಿಗರು ಅಲ್ಲಿಂದ ಕೆಆರ್‌ಎಸ್ ಬೃಂದಾವನದತ್ತ ಪ್ರಯಾಣ ಬೆಳೆಸುತ್ತಿರುವುದು ಕಂಡು ಬರುತ್ತಿದೆ.
ದೋಣಿ ವಿಹಾರ ಸ್ಥಗಿತ: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಜಲಾಶಯದಿಂದ ಹೊರ ಬಿಡುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ನೀರಾವರಿ ಇಲಾಖೆಯ ಸೂಚನೆ ಮೇರೆಗೆ ಪ್ರಸಿದ್ಧ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿವಿಹಾರ ಸ್ಥಗಿತಗೊಳಿಸಲಾಗಿದೆ ಎಂದು ರಂಗನತಿಟ್ಟು ಪಕ್ಷಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ನದಿಗೆ ಹೆಚ್ಚು ನೀರು ಹರಿಯುತ್ತಿರುವುದರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ದೋಣಿವಿಹಾರ ಬಿಟ್ಟು ಪ್ರವೇಶ ಮಾತ್ರ ನೀಡಲಾಗುತ್ತಿದೆ.
ಈಗಾಗಲೇ ಪಕ್ಷಿಧಾಮದ ಮುಂಭಾಗದಲ್ಲಿ ಬೋರ್ಡ್ ಹಾಕಿ ಸೂಚನೆ ನೀಡಲಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ 124.80. ಅಡಿಯಿದ್ದು, ಒಳಹರಿವು 13,194 ಕ್ಯೂಸೆಕ್ ಹರಿದು ಬರುತ್ತಿದ್ದು, 15,701 ಕ್ಯೂಸೆಕ್ ಹೊರಹರಿವು ಬಿಡಲಾಗಿದೆ. 49.452 ಟಿಎಂಸಿ= ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.