Advertisement
ನಗರಕ್ಕೆ ಹೊಂದಿಕೊಂಡಂತೆ ಕೆಲವರು ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಗುಂಡ್ಲುಪೇಟೆ, ತುಮಕೂರು ಮತ್ತಿತರ ಕಡೆ ನೆಲೆಸಿದ್ದಾರೆ. ನಿತ್ಯ ಬೆಂಗಳೂರಿಗೆ ಬಂದು, ಕರ್ತವ್ಯದ ಮೇಲೆ ಬಸ್‌ಗಳಲ್ಲಿ ಊರೆಲ್ಲ ತಿರುಗಾಡಿ, ವಾಪಸ್ ತಮ್ಮ ಊರುಗಳಿಗೆ ತೆರಳಬೇಕಾಗಿದೆ. ಆದರೆ, ಕೋವಿಡ್ 19 ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಸಿಬ್ಬಂದಿಯನ್ನು ಸ್ಥಳೀಯರು ಅನುಮಾನ ಮತ್ತು ಆತಂಕದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವೆಡೆ ಸ್ವತಃ ಸಿಬ್ಬಂದಿ ಭಯದಿಂದ ಮನೆಯಿಂದ ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ.
Related Articles
Advertisement
“ಬಿಎಂಟಿಸಿ ಬಸ್‌ಗಳಲ್ಲಿ ಈ ಮೊದಲು ನಿತ್ಯ ಸರಾಸರಿ ಹತ್ತು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಿಂದ 1.20 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ, ಎರಡು-ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಸುಮಾರು ಏಳು ಲಕ್ಷಕ್ಕೆ ಕುಸಿದಿದ್ದು, ಒಂದು ಕೋಟಿಗಿಂತ ಕಡಿಮೆ ಆದಾಯ ಹರಿದುಬರುತ್ತಿದೆ. ರಾತ್ರಿಪಾಳಿಯಲ್ಲಿ ಹೆಚ್ಚು ಬಿಸಿ ತಟ್ಟಿದೆ. ಅಂದಾಜು 3-4 ಸಾವಿರ ಚಾಲನಾ ಸಿಬ್ಬಂದಿ ಗೈರುಹಾಜರಾಗಿದ್ದಾರೆ’ ಎಂದು ಸಂಸ್ಥೆ ಅಧಿಕಾರಿಗಳು ವಿವರಿಸಿದರು.
ರೂಂ ಮಾಡಿಕೊಂಡಿರಿ…!: ನಿತ್ಯ ನೀವು (ಚಾಲನಾ ಸಿಬ್ಬಂದಿ) ನೂರಾರು ಜನರೊಂದಿಗೆ ಬೆಂಗಳೂರು ಸುತ್ತಾಡಿ ಊರಿಗೆ ಬರುತ್ತೀರಾ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಲ್ಪ ದಿನ ಅಲ್ಲಿಯೇ ರೂಂ ಮಾಡಿಕೊಂಡು ಇದ್ದುಬಿಡಿ… – ಹೀಗಂತ ಊರಿನವರು ಸೂಚಿಸುತ್ತಿದ್ದಾರೆ ಎಂದು ಗುಂಡ್ಲುಪೇಟೆಯ ಮಹೇಶ್ ಅಲವತ್ತುಕೊಂಡರು.
“ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಬೆಳಗ್ಗೆ ಡ್ಯೂಟಿಗೆ ಹೋದವನು, ಮರುದಿನ ಮಧ್ಯಾಹ್ನ ವಾಪಸ್ಸಾಗುತ್ತೇನೆ. ಆಗ ಊರಿನವರು ಅನುಮಾನದಿಂದ ನೋಡುತ್ತಾರೆ. ಕೆಲವರು ಬೆಂಗಳೂರಿನಲ್ಲೇ ಸ್ವಲ್ಪ ದಿನದ ಮಟ್ಟಿಗೆ ರೂಂ ಮಾಡಿಕೊಂಡು ಇರಬಹುದಲ್ಲಾ? ಎಂದು ಉಚಿತ ಸಲಹೆಯನ್ನೂ ನೀಡಿದ್ದಾರೆ. ಆದರೆ, ಈಗಿನ ಸ್ಥಿತಿಯಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು ಬೆಂಗಳೂರಿನಲ್ಲಿ ಇರುವುದು ಹೇಗೆ ಎಂದು ಅವರು ಕೇಳಿದರು.
ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ: ಬಿಎಂಟಿಸಿ ಮಾತ್ರವಲ್ಲ; ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸರ್ಕಾರಿ ನೌಕರರು ನಗರಕ್ಕೆ ಹೊಂದಿಕೊಂಡ ಊರುಗಳಿಂದ ನಿತ್ಯ ಬೆಂಗಳೂರಿಗೆ ಬಂದುಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯರಿಗೆ ಆತಂಕ ಮನೆ ಮಾಡಿದೆ. ಆದರೆ, ನೌಕರರು ನೇರವಾಗಿ ಕಚೇರಿಗಳಿಗೆ ಹೋಗಿಬರುತ್ತಾರೆ. ಹಾಗಾಗಿ, ಅವರ ಬಗ್ಗೆ ಅಷ್ಟೇನೂ ತಕರಾರುಗಳು ಕೇಳಿಬರುತ್ತಿಲ್ಲ ಎಂದು ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ನಾನಾ ಕಡೆಗಳಿಂದ ಆಗಮಿಸುವ ಸರ್ಕಾರಿ ನೌಕರರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
* ವಿಜಯಕುಮಾರ್ ಚಂದರಗಿ