ಚಿಕ್ಕೋಡಿ: ಗ್ರಾಮೀಣ ಭಾಗದಲ್ಲಿ ಜನರು ಮೂಢನಂಬಿಕೆಗೆ ಮೊರೆಹೋಗಿ ಪೂಜೆ ಪುನಸ್ಕಾರದ ನೆಪದಲ್ಲಿ ಪರಿಸರ ಮಾಲಿನ್ಯ ಜೊತೆಗೆ ನದಿಗಳನ್ನು ಕಲುಷಿತ ಮಾಡುತ್ತಿರುವುದರಿಂದ ಜನರು ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಮಾಂಜರಿ ಗ್ರಾಮದ ಹತ್ತಿರವಿರುವ ಕೃಷ್ಣಾ ನದಿ ತೀರದಲ್ಲಿ ಶಿವಶಕ್ತಿ ಶುಗರ್ ಲಿಮಿಟೆಡ್ ಸವದತ್ತಿ, ಹಮ್ಸರ್ ಡಿಸ್ಟಲರಿ ಯಡ್ರಾವ್, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾಮ ಪಂಚಾಯತ ಅಂಕಲಿ, ಪುರಸಭೆ ಚಿಕ್ಕೋಡಿ, ಕೆ.ಎಲ್.ಇ. ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕೃಷ್ಣಾ ನದಿ ಸ್ವಚ್ಛತಾ ಕಾರ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನದಿಗಳ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಯುವಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಐ.ಎಚ್.ಜಗದೀಶ ಮಾತನಾಡಿ, ನಿಸರ್ಗ ಸೌಂದರ್ಯ ಹೆಚ್ಚಿಸಲು ನಾಗರಿಕರು ಸಸಿ ನೆಟ್ಟು ಸಂರಕ್ಷಣೆ ಮಾಡಿದಾಗ ಮಾತ್ರ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಡಿಕೆಎಸ್‌ಎಸ್‌ಕೆ ಕಾರ್ಖಾನೆ ಪರಿಸರ ವಿಭಾಗಾಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಕಾಡು ಬೆಳೆದರೆ ನಾಡು ಉಳಿದಿತು ಎನ್ನುವಂತೆ ಗಿಡಗಳ ಸಂಖ್ಯೆ ಕಡಿಮೆಯಾಗಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕು ಎಂದರು.
ಚಿಕ್ಕೋಡಿ ಪುರಸಭೆ ಪರಿಸರ ಅಭಿಯಂತ ಪ್ರಿಯಂಕಾ ಹಾಗೂ ಮುಖ್ಯಾಧ್ಯಾಪಕಿ ಭಾರತಿ ಪಾಟೀಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಡಿಕೆಎಸ್‌ಎಸ್‌ಕೆ ನಿರ್ದೇಶಕರಾದ ಮಲ್ಲಪ್ಪಾ ಮೈಶಾಳೆ, ತಾತ್ಯಾಸಾಹೇಬ ಕಾಟೆ, ರಾಮಚಂದ್ರ ನಿಶಾನದಾರ, ತುಕಾರಾಮ ಪಾಟೀಲ, ಸುನೀಲ ರಾಜಗೀರೆ, ಆನಂದ ಕೋಟಬಾಗಿ, ಶ್ರೀಕಾಂತ ಕಬಾಡಗಿ, ಶಿವಶಕ್ತಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಕೃಷ್ಣನ್, ಪಿಂಟು ಹಿರೆಕುರಬರ, ಎಸ್.ಎಸ್.ಯಾದವ ಹಾಗೂ ಇನ್ನಿತರರು ಹಾಜರಿದ್ದರು.