Advertisement

Kundadri ಬೆಟ್ಟದಲ್ಲಿ ಹೆಚ್ಚಿದ ಅಕ್ರಮ ಚಟುವಟಿಕೆ; ಪ್ರವಾಸಿಗರ ಗೋಳು ಕೇಳೋದ್ಯಾರು?

06:04 PM Nov 06, 2023 | Team Udayavani |

ತೀರ್ಥಹಳ್ಳಿ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕುಂದಾದ್ರಿ ಬೆಟ್ಟ ಇತ್ತೀಚಿಗೆ ಅವ್ಯವಸ್ಥೆಯ ಆಗರವಾಗಿದೆ. ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸುವ ಪ್ರವಾಸಿಗರು ತಾವೇ ಗೇಟಿನ ಬೀಗ ತೆರೆಯುವ ದುಃಸ್ಥಿತಿ ಇದೆ. ಅಕ್ರಮ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ.

Advertisement

ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ ಮತ್ತು ನಂಟೂರು ಗ್ರಾಮ ವ್ಯಾಪ್ತಿಯ ವಿಶಾಲವಾದ ಬಂಡೆಯ ಮೇಲೆ ವ್ಯಾಪಿಸಿರುವ ಈ ಪ್ರದೇಶವು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಮೇಲ್ಭಾಗದ 4 ಎಕರೆ ಪ್ರದೇಶ ಹುಂಚದ ಹೊಂಬುಜ ಜೈನ ಮಠಕ್ಕೆ ಸೇರಿದ್ದು ಎನ್ನಲಾಗಿದೆ. ನಿತ್ಯ ನೂರಾರು ಪ್ರವಾಸಿಗರು ಬೆಟ್ಟದ ಸೌಂದರ್ಯ ಆಸ್ವಾದಿಸಲು ಇತ್ತ ಹೆಜ್ಜೆ ಹಾಕುತ್ತಾರೆ. ಬಹುತೇಕರು ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗಾಗಿಯೇ ಇಲ್ಲಿಗೆ ಭೇಟಿ ನೀಡುವುದು ವಾಡಿಕೆ.

ಸಮುದ್ರ ಮಟ್ಟದಿಂದ ಅಂದಾಜು 826 ಮೀಟರ್ ಎತ್ತರವಿರುವ ಇಲ್ಲಿ ಮೋಡಗಳ ಚಲನೆಯನ್ನು ಕಣ್ತುಂಬಿಕೊಳ್ಳಬಹುದು. ಆದರೆ, ಗುಡ್ಡದ ತಪ್ಪಲಿನಲ್ಲಿ ಬೃಹತ್ ಗೇಟ್ ಅಳವಡಿಸಿರುವುದು ಸೂರ್ಯೋದಯ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿದೆ. ಇಲ್ಲಿ ಕೆಲ ವ್ಯಕ್ತಿಗಳು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಬೆಟ್ಟದ ಮೇಲಿನ ಪರಿಸರ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಅದೂ ಹಣ ನೀಡಿ, ಕಾಡಿ ಬೇಡಿದರೆ ಮಾತ್ರ ಗೇಟಿನ ಕೀ ನೀಡುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

ಗುಡ್ಡದ ಮೇಲೆ ಪ್ರವಾಸಿಗರು ಬೇಕಾಬಿಟ್ಟಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಪ್ರದೇಶದಲ್ಲಿ ಬಿದ್ದ ಪ್ಲಾಸ್ಟಿಕ್ ಜೋರಾಗಿ ಬೀಸುವ ಗಾಳಿಗೆ ಸಿಲುಕಿ ತಪ್ಪಲಿನ ಸಾಗುವಳಿ ಜಮೀನಿಗೆ ಸೇರುತ್ತಿದೆ. ತಿಂಡಿ ಪೊಟ್ಟಣಗಳು ಕಾಡು ಪ್ರಾಣಿಗಳ ಆಹಾರವಾಗುತ್ತಿವೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಅಕ್ರಮದ ಕೇಂದ್ರ ಸ್ಥಾನ
ಬೆಟ್ಟವು ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿ ಇರುವ ಕಾರಣ ಇಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಗಾಂಜಾ, ಮದ್ಯ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಗೇಟ್ ಕೀಗಾಗಿ ಯಾರದ್ದೋ ಮನೆಯಲ್ಲಿ ಅಂಗಲಾಚುವ ಸ್ಥಿತಿ ಇದೆ. ವೀಕ್ಷಣಾ ಗೋಪುರ ಗಾಳಿಗೆ ಹಾರಿ ಹೋಗಿದೆ. ಮಳೆ, ಬಿಸಿಲಿನ ಬೇಗೆಯಲ್ಲಿ ಪ್ರವಾಸಿಗರು ಪರದಾಡಬೇಕು. ಕುಂದಾದ್ರಿ ಜೈನ ಬಸದಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರನ್ನು ಬೆದರಿಸಿ ಸುಲಿಗೆ ಮಾಡುವ ಕೃತ್ಯಗಳು ನಡೆಯುತ್ತಿದೆ. ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂಬುದು ಸ್ಥಳೀಯರ ಆರೋಪ

Advertisement

ಅವ್ಯವಸ್ಥೆಯ ಶೌಚಾಲಯ
ಬೆಟ್ಟಕ್ಕೆ ಬರುವ ಪ್ರವಾಸಿಗರಿಗಾಗಿ 2017ರಲ್ಲಿ ನಿರ್ಮಿತಿ ಕೇಂದ್ರದಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ವೀಕ್ಷಣಾ ಗೋಪುರದ ಕಂಬಿಗಳು ಮಾತ್ರ ಉಳಿದಿವೆ. ಬೆಟ್ಟದ ಮೇಲ್ಭಾಗದ ಕಬ್ಬಿಣದ ತಡೆಗೋಡೆ ಬಣ್ಣವಿಲ್ಲದೆ ತುಕ್ಕು ಹಿಡಿಯುತ್ತಿದೆ. ಶೌಚಾಲಯ ಬಾಗಿಲುಗಳು ಮುರಿದಿದ್ದು ಮಹಿಳೆಯರ ಬಳಕೆಗೆ ಲಭ್ಯವಿಲ್ಲ. ನೀರಿನ ಸೌಲಭ್ಯವಿದ್ದರೂ ಮೋಟರ್ ಅಳವಡಿಸಿಲ್ಲ. ಗಲೀಜಿನಿಂದ ಶೌಚಾಲಯ ಗಬ್ಬುನಾರುತ್ತಿದೆ.

ಅಪಾಯಕಾರಿ ರಸ್ತೆ

ಕುಂದಾದ್ರಿ ಗುಡ್ಡದ ಮೇಲ್ಬಾಗದವರೆಗೂ ಸಲೀಸಾಗಿ ವಾಹನ ಚಾಲನೆ ಮಾಡಬಹುದು. ಆದರೆ ಅತ್ಯಂತ ಕಡಿದಾದ ರಸ್ತೆ ಇರುವ ಕಾರಣ ನಿರಂತರವಾಗಿ ಅವಘಡ ಸಂಭವಿಸುತ್ತಿರುತ್ತವೆ. ಅಪಾಯಕಾರಿ ತಿರುವಿನಿಂದ ಕೂಡಿದ್ದರೂ ತಡೆಗೋಡೆ ನಿರ್ಮಿಸಿಲ್ಲ. ಮಳೆಗಾಲ ಮತ್ತು ಮಂಜು ಕವಿದ ವಾತಾವರಣದಲ್ಲಿ ವಾಹನ ಚಾಲನೆ ಮಾಡುವುದು ತೀರಾ ಕಷ್ಟ. ಕೆಲವೇಳೆ ಕೆಲ ಪ್ರವಾಸಿಗರ ಜೋಶ್ ಇತರರಿಗೂ ತೊಂದರೆಯುಂಟು ಮಾಡುತ್ತಿದೆ. ಹೊಂಡ ಗುಂಡಿಗಳಿಂದ ರಸ್ತೆ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next