ಬೆಂಗಳೂರು: ಭಾರೀ ಮಳೆಯ ಜತೆಗೆ ರಾಜ್ಯದ ಹಲವೆಡೆ ಕಾಡಾನೆಗಳ ಹಾವಳಿಯೂ ತೀವ್ರಗೊಂಡಿದೆ. ಇದರ ಮಧ್ಯೆ ಮಡಿಕೇರಿಯ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆಯಲ್ಲಿ ಸುಮಾರು 20 ವರ್ಷದ ಗಂಡು ಕಾಡಾನೆಯೊಂದು ತೋಟದಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಬೇಲಿಗೆ ಬಳಸುವ ಮುಳ್ಳು ತಂತಿಯ ಉರುಳು ಕುತ್ತಿಗೆಯಲ್ಲಿರುವುದು ಕಂಡುಬಂದಿದೆ. ಅರಣ್ಯ ಇಲಾಖೆ ತನಿಖೆ ಕೈಗೊಂಡಿದೆ.
ಮೈಸೂರಿನ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಬಳಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ರವಿವಾರ ಮಧ್ಯಾಹ್ನ ಮದ್ದೂರು ಕಡೆಯಿಂದ ಬಂದಿರುವ ಕಾಡಾನೆಗಳ ಹಿಂಡು ರೈತರ, ಜಮೀನು, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿದೆ. ಇದರಿಂದ ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಹಲವೆಡೆ ಕಾಡಾನೆಗಳು ರೈತರ ತೋಟಗಳಿಗೆ ದಾಳಿ ಮಾಡಿ ಬೆಳೆ ಹಾಳು ಮಾಡುತ್ತಿವೆ. ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಭಾಗದಲ್ಲಿನ ಕಾಫಿ ತೋಟಗಳಿಗೆ 20ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಇಡುತ್ತಿದ್ದು, 60ಕ್ಕೂ ಹೆಚ್ಚು ರೈತರ ತೋಟಗಳಲ್ಲಿನ ಕಾಫಿ, ಕಾಳುಮೆಣಸು, ಬಾಳೆ, ಏಲಕ್ಕಿ, ಅಡಿಕೆ ಗಿಡಗಳನ್ನು ನಾಶಗೊಳಿಸಿವೆ.
ದ. ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಶನಿವಾರ ರಾತ್ರಿ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೊಳಿಸಿದೆ. ಮನೆ ಆವರಣಗೋಡೆ ಹಾನಿಗೊಂಡಿದೆ.