ಹಾಸನ: ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ವೃದ್ಧಿಸಿದೆ.
ಹೇಮಾವತಿ ಜಲಾಶಯದ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಹಾಗಾಗಿ ಜಲಾಶಯಕ್ಕೆ ಭಾನುವಾರ 2124 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಸೋಮವಾರ 5 ಸಾವಿರ ಕ್ಯೂಸೆಕ್‌ಗೆ ಏರಿದೆ.
37.10 ಟಿಎಂಸಿ ಸಂಗ್ರಹಣಾ ಸಾಮರ್ಥಯದ ಜಲಾ ಶಯ ಕಳೆದ ವರ್ಷ ಈ ದಿನಕ್ಕೆ ಭರ್ತಿಯಾಗಿ ಹೆಚ್ಚುವರಿ ನೀರು ಕ್ರಸ್ಟ್‌ಗೇಟ್‌ಗಳ ಮೂಲಕ ಬೋರ್ಗೆರೆಯುತ್ತಾ ನದಿಗೆ ಹರಿಯುತ್ತಿತ್ತು. ಆದರೆ ಈ ವರ್ಷ ಜಲಾಶ ಯದಲ್ಲಿ 13.49 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 9.12 ಟಿಎಂಸಿ ಮಾತ್ರ. ಜಲಾಶಯದಲ್ಲಿ 22 ಟಿಎಂಸಿ ನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರುಗಳು ಸ್ಪಷ್ಟಪಡಿಸಿದ್ದಾರೆ.
22 ಟಿಎಂಸಿ ನೀರು ಸಂಗ್ರಹ ಸಾಧ್ಯತೆ: ಒಳಹರಿವಿನ ಪ್ರಮಾಣ ಪ್ರತಿದಿನವೂ 5 ರಿಂದ 10 ಸಾವಿರ ಕ್ಯೂಸೆಕ್‌ನಂತೆ ಮುಂದುವರಿದರೆ ಇನ್ನು 15 ದಿನಗಳಲ್ಲಿ 22 ಟಿಎಂಸಿ ನೀರು ಸಂಗ್ರಹವಾಗಬಹುದು ಎಂಬ ಆಶಾ ಭಾವ ಮೂಡಿದೆ. ಮುಂಗಾರು ಮಳೆ ಇನ್ನೂ ಒಂದೂ ವರೆ ತಿಂಗಳು ಇರುವುದರಿಂದ 22 ಟಿಎಂಸಿ ವರೆಗೆ ನೀರು ಸಂಗ್ರಹವಾಗಬಹುದೆಂಬ ನಿರೀಕ್ಷೆಯಿದೆ. ಸಮಾಧಾನಕರ ಅಂಶವೆಂದರೆ ಈಗ ಸಂಗ್ರಹವಾಗಿ ರುವ ನೀರನ್ನು ಕಾವೇರಿ ನದಿ ನೀರು ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ಹರಿಸದಿದ್ದರೆ ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಬಹುದು.
ಸಕಲೇಶಪುರ ತಾಲೂಕಿನಲ್ಲಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಾಡಿಕೆ ಮಳೆ 572 ಮಿಲಿಮೀಟರ್‌ಗೆ ಬದಲಾಗಿ 593 ಮಿಲಿ ಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ ಶೇ.4 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಹೇಮಾವತಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರಬೇಕಾದ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ವಾಡಿಕೆಗಿಂತ ಶೇ.7 ರಷ್ಟು ಮಳೆಯ ಕೊರತೆಯಾಗಿದ್ದರೆ, ಬೆಳಗೋಡು ಹೋಬಳಿಯಲ್ಲಿ ಶೇ.43 ಹಾಗೂ ಸಕಲೇಶಪುರ ಕಸಬಾ ಹೋಬಳಿಯಲ್ಲಿ ಶೇ.9 ರಷ್ಟು ಮಳೆಯ ಕೊರತೆಯಾಗಿದೆ.
● ಎನ್. ನಂಜುಂಡೇಗೌಡ