Advertisement

ನೇತ್ರಾವತಿ ನದಿಯಲ್ಲಿ ಹರಿವು ಹೆಚ್ಚಳ

02:07 AM Jun 15, 2020 | Sriram |

ಬಂಟ್ವಾಳ: ಕರಾವಳಿ ಪ್ರದೇಶದಲ್ಲಿ ಮುಂಗಾರು ಚುರುಕು ಗೊಂಡಿರುವ ಜತೆಗೆ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಂಟ್ವಾಳದಲ್ಲಿ ರವಿವಾರ ಬೆಳಗ್ಗೆ ನೀರಿನ ಮಟ್ಟ 5.1 ಮೀ.ನಲ್ಲಿತ್ತು. ಮಳೆಗಾಲವನ್ನೆದುರಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸಹಿತ ಎಲ್ಲ ಇಲಾಖೆಗಳು ಸಿದ್ಧತೆ ನಡೆಸಿಕೊಂಡಿವೆ.

Advertisement

ನಿತ್ಯ ನೀರಿನ ಮಟ್ಟ ಅಳತೆ
ಮಳೆಗಾಲದಲ್ಲಿ ತಾ| ಆಡಳಿತವು ಪ್ರತಿದಿನ ಬಿ. ಮೂಡ ಗ್ರಾಮದ ಚಿಕ್ಕಯಮಠ, ಗೂಡಿನಬಳಿ ಪ್ರದೇಶದಲ್ಲಿ ಅಳವಡಿಸಲಾದ ಮಾಪನದ ಮೂಲಕ ನೀರಿನ ಮಟ್ಟ ಅಳೆಯಲಾಗುತ್ತಿದ್ದು, ಕಳೆದ ಮೂರು ದಿನಗಳಿಗೆ ಹೋಲಿಸಿದಾಗ ನೀರಿನ ಮಟ್ಟ ಏರಿಕೆಯಾಗುತ್ತಾ ಸಾಗಿದೆ.
ನದಿಯಲ್ಲಿ ಜೂ. 12ರಂದು ನೀರಿನ ಮಟ್ಟ 4.5 ಮೀ. ಇದ್ದು, 13ರಂದು 4.9 ಮೀ. ಹಾಗೂ 14ರಂದು 5.1 ಮೀ.ನಲ್ಲಿತ್ತು. ಜೂ. 11ರಂದು 5.5 ಮೀ. ಏರಿಕೆಯಾಗಿದ್ದ ನೀರಿನ ಮಟ್ಟ ಬಳಿಕ ಇಳಿಕೆಯಾಗಿತ್ತು.

8.5 ಮೀ. ಅಪಾಯದ ಮಟ್ಟ
ಬಂಟ್ವಾಳದಲ್ಲಿ ನೇತ್ರಾವತಿಯ ನೀರಿನ ಮಟ್ಟ 8.5 ಮೀ.ಅಪಾಯದ ಮಟ್ಟವಾಗಿದ್ದು, ಆ ಸಂದರ್ಭ ಹೆಚ್ಚಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಆದರೆ ಕಳೆದ ವರ್ಷ ಆ. 10ರಂದು ನೀರಿನ ಮಟ್ಟ 11.6 ಮೀ. ಕೂಡ ದಾಟಿ ತಾಲೂಕಿನ ಬಹುತೇಕ ಪ್ರದೇಶಗಳು ಪ್ರವಾಹದಿಂದ ಮುಳುಗಿದ್ದವು. ಹೀಗಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಪ್ರವಾಹದ ಭೀತಿಯೂ ಎದುರಾಗುವುದರಿಂದ ಎಚ್ಚರಿಕೆ ಅಗತ್ಯವಾಗಿದೆ.

ತುಂಬೆಯಲ್ಲಿ
5.5 ಮೀ. ನೀರು
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ಪ್ರಸ್ತುತ 5.5 ಮೀ. ನೀರು ನಿಲ್ಲಿಸಲಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಗೇಟ್‌ಗಳನ್ನು ತೆರೆದು ನೀರನ್ನು ಹೊರಕ್ಕೆ ಬಿಡಲಾಗುತ್ತದೆ.
– ನರೇಶ್‌ ಶೆಣೈ, ಮನಪಾ ಎಇಇ

Advertisement

Udayavani is now on Telegram. Click here to join our channel and stay updated with the latest news.

Next