Advertisement
ಕೋವಿಡ್ ಕಾಲಘಟ್ಟದಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಉತ್ಸುಕರಾಗಿದ್ದು, ಖಾಸಗಿ ವಿದ್ಯಾ ಸಂಸ್ಥೆಗಳಿಂದಲೂ ಕೆಪಿಎಸ್‌ಗೆ ಪ್ರವೇಶ ಬಯಸುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವುದನ್ನು ದಾಖಲಾತಿ ಸಂಖ್ಯೆ ಪುಷ್ಟೀಕರಿಸಿದೆ.
Related Articles
Advertisement
ಕೆಪಿಎಸ್‌ನಲ್ಲಿ ಎಲ್‌ಕೆಜಿಯಿಂದ 12 ನೇ ತರಗತಿ ತನಕ ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದು ಈಗಾಗಲೇ ಒಟ್ಟು 1,144 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೆಯ್ಯೂರಿನಲ್ಲಿ 649, ಕುಂಬ್ರದಲ್ಲಿ 495 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2018-19ರ ಶೈಕ್ಷಣಿಕ ಸಾಲಿನಲ್ಲಿ ಇಡೀ ವರ್ಷದ ದಾಖಲಾತಿ ಪ್ರಕಾರ ಕೆಯ್ಯೂರಿನಲ್ಲಿ 542, ಕುಂಬ್ರದಲ್ಲಿ 504, 2019-20ರಲ್ಲಿ ಕೆಯ್ಯೂರಿನಲ್ಲಿ 639, ಕುಂಬ್ರದಲ್ಲಿ 578 ವಿದ್ಯಾರ್ಥಿಗಳು ದಾಖಲಾಗಿದ್ದರು.
ಈ ಬಾರಿ ಹಿಂದಿನ ಎರಡು ವರ್ಷದ ಸಂಖ್ಯೆಯನ್ನು ಮೀರಿದ ದಾಖಲಾತಿ ಆಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲಾತಿಗೆ ಮಿತಿ ಇಲ್ಲ :
ಸರಕಾರಿ ಶಾಲೆಗಳಿಗೆ ವಿದ್ಯಾ ರ್ಥಿಗಳನ್ನು ಆಕರ್ಷಿಸಲು ಮತ್ತು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆ ಗಳಲ್ಲಿಯೂ ಸಿಗಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಡಿ (ಕೆಪಿಎಸ್) ನೋಂದಾಯಿಸಲ್ಪಟ್ಟ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯ ಮವನ್ನು ಆರಂಭಿಸಿದೆ.
ಪ್ರಸ್ತುತ ಖಾಸಗಿ ವಿದ್ಯಾಸಂಸ್ಥೆಗಳಿಂದಲು ಕೆಪಿಎಸ್‌ಗೆ ಸೇರ್ಪಡೆ ಆಗುತ್ತಿರುವುದರಿಂದ ಸಂಖ್ಯಾ ಪ್ರಮಾಣ ವೃದ್ಧಿಸಿದೆ. ಸರಕಾರವು ತರಗತಿಗೆ 30 ವಿದ್ಯಾರ್ಥಿಗಳ ಮಿತಿ ವಿಧಿಸಿದ್ದರೂ ಆಸಕ್ತ ಯಾವುದೇ ವಿದ್ಯಾರ್ಥಿಯು ವಂಚಿತರಾಗಬಾರದು ಎಂಬ ಕಾರಣಕ್ಕೆ ಪ್ರವೇಶ ಬಯಸುವ ಎಲ್ಲ ವಿದ್ಯಾರ್ಥಿಗಳನ್ನು ದಾಖಲು ಮಾಡಿ ಕೊಳ್ಳಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಅವರಿಗೆ ಸೌಲಭ್ಯ ಒದಗಿಸಲಾಗುತ್ತದೆ.
ಆಲಂಕಾರು ಶಾಲೆಯತ್ತಲೂ ಚಿತ್ತ :
ಆಲಂಕಾರು: ರಾಜ್ಯ ಸರಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಲಂಕಾರು ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಅಂಗ್ಲ ಮಾಧ್ಯಮ ಶಿಕ್ಷಣ ನೀಡಲು ಅನುಮತಿ ನೀಡಿದ ಪರಿಣಾಮ ವಿದ್ಯಾರ್ಥಿ ಹಾಗೂ ಪೊಷಕರು ಆಲಂಕಾರು ಸರಕಾರಿ ಶಾಲೆಯತ್ತ ಆಕರ್ಷಿತರಾಗಿದ್ದಾರೆ. ಈಗಾಗಲೇ ಶಾಲಾ ದಾಖಲಾತಿ ಅತ್ಯಂತ ಬಿರುಸಿನಿಂದ ನಡೆಯುತ್ತಿದೆ. ಈ ಸರಕಾರಿ ಶಾಲೆಗೆ ಇದೀಗ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಿತ ರಾಗಿದ್ದಾರೆ. ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ 70 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. 1ನೇ ತರಗತಿಗೆ 54 ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ.
ಇಡೀ ಶೈಕ್ಷಣಿಕ ವರ್ಷದಲ್ಲಿ ಯಾವುದೇ ದಿನದಲ್ಲಿಯು ವಿದ್ಯಾರ್ಥಿ ಪ್ರವೇಶ ಬಯಸಿದರೆ ದಾಖಲು ಮಾಡಿಕೊಳ್ಳಲಾಗುವುದು. ಪ್ರಸ್ತುತ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಕಂಡಿದೆ. ಮುಂದಿನ ಬಾರಿ ಕಡಬ ತಾಲೂಕಿನ ಕೊಣಾಲು ಸರಕಾರಿ ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. –ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು