Advertisement
ವರ್ಷಾರಂಭದಿಂದ ಈವರೆಗೂ ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ 1,228 ಮಂದಿಯಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 1,830 ಮಂದಿಯಲ್ಲಿ ಡೆಂಘೀ ಸೊಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಗೆ ಆರೋಗ್ಯ ಇಲಾಖೆಯು ಬಿಬಿಎಂಪಿ ಆರೋಗ್ಯ ವಿಭಾಗಕ್ಕೆ ಸೂಚಿಸುತ್ತಲೇ ಬಂದಿತ್ತು.
Related Articles
Advertisement
ಎರಡು ವರ್ಷಗಳ ಹಿಂದೆ ಇದೇ ಪರಿಸ್ಥಿತಿ: 2017ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಮಾಣ ಮಳೆಗಾಲದಲ್ಲಿ ತೀವ್ರವಾಗಿ ಹೆಚ್ಚಳ ಕಂಡಿತ್ತು. ಮೇ ಅಂತ್ಯಕ್ಕೆ ಬೆರಳೆಣಿಕೆಯಷ್ಟಿದ್ದು, ಪ್ರಕರಣಗಳ ಸಂಖ್ಯೆ ಜೂನ್ ಒಂದೇ ತಿಂಗಳಲ್ಲಿ ಸಾವಿರ ಗಡಿ ದಾಟಿತ್ತು. ಆ ವರ್ಷಾಂತ್ಯಕ್ಕೆ ಸೋಂಕಿತರ ಸಂಖ್ಯೆ ಏಳು ಸಾವಿರ ದಾಟಿತ್ತು. ಒಟ್ಟಾರೆ ರಾಜ್ಯದಲ್ಲಿ 17 ಸಾವಿರ ಡೆಂಘೀ ಪ್ರಕರಣ ದೃಢಪಟ್ಟಿದ್ದವು.
ಆದರೆ, ಕಳೆದ ವರ್ಷ ಆರೋಗ್ಯ ಇಲಾಖೆ ಮುಂಜಾಗೃತಿ ಹಿಂದೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದವು. ಆದರೆ, ಈ ಬಾರಿ ತಿಂಗಳ ಅಂತರಲ್ಲಿ ರಾಜ್ಯದಲ್ಲಿ ದುಪ್ಪಟ್ಟು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಪಟ್ಟು ಹೆಚ್ಚಾಗಿರುವುದು ಸಾಕಷ್ಟು ಜನರಲ್ಲಿ ಆತಂಕ ಮೂಡಿಸುತ್ತಿದೆ.
ಬಿಳಿರಕ್ತ ಕಣಗಳಿಗೆ ಅಭಾವ: ಈಡಿಸ್ ಈಜಿಪ್ಟೆ ಸೊಳ್ಳೆ ಕಚ್ಚುವ ಮೂಲಕ ಹರಡುವ ಈ ಡೆಂಘೀ ಜ್ವರ ಮನುಷ್ಯನ ದೇಹ ಪ್ರವೇಶಿಸಿದ ತಕ್ಷಣ ಬಿಳಿರಕ್ತ ಕಣಗಳನ್ನು ನಾಶ ಮಾಡುತ್ತದೆ. ಪ್ರತಿ ಆರೋಗ್ಯವಂತ ಮನುಷ್ಯನಲ್ಲಿ ಬಳಿ ರಕ್ತಕಣಗಳ ಸಂಖ್ಯೆ ಕನಿಷ್ಠ 1.5 ಲಕ್ಷದಿಂದ 3.5 ಲಕ್ಷದಷ್ಟು ಇರಬೇಕು. 1.5 ಲಕ್ಷಕ್ಕಿಂತ ಕಡಿಮೆಯಾದರೆ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ.
ಡೆಂಘೀ ತೀವ್ರವಾಗಿರುವವರಲ್ಲಿ ಬಿಳಿರಕ್ತ ಕಣಗಳ ಸಂಖ್ಯೆಯು ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕುಸಿಯುತ್ತಾ ಬರುತ್ತದೆ. ನಿಧಾನವಾಗಿ ಬಿಳಿ ರಕ್ತಕಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾದರೆ ಡೆಂಘೀ ಪೀಡಿತರ ಜೀವ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ, ರೋಗಿಯ ದೇಹದಲ್ಲಿ ಬಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ರಕ್ತದ ಮಾದರಿಯಲ್ಲಿಯೇ ಬಳಿ ರಕ್ತ ಕಣಗಳನ್ನು ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ.
ಆದರೆ, ನಗರದಲ್ಲಿ ರಕ್ತದಾನಿಗಳ ಸಂಖ್ಯೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಗರದ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ಈ ಸಮಯದಲ್ಲಿ ನಿರಂತರವಾಗಿ ರಕ್ತದಾನ ಅವಶ್ಯಕವಾಗಿದೆ. ರಾಜಧಾನಿಯಲ್ಲಿ ಕಳೆದ ಒಂದು ತಿಂಗಳಿಂದ ಡೆಂಘೀ ಹೆಚ್ಚಳವಾಗಿ ಬಿಳಿ ರಕ್ತ ಕಣಗಳಿಗೆ ಬೇಡಿಕೆ ಹೆಚ್ಚಿದೆ. ಬಿಳಿ ರಕ್ತ ಕಣಗಳಿಗಾಗಿ ರಕ್ತನಿಧಿ ಕೇಂದ್ರಗಳ ಮುಂದೆ ಜನರು ನಿತ್ಯವೂ ಸರದಿ ನಿಲ್ಲುತ್ತಿದ್ದಾರೆ. ನಗರದಲ್ಲಿ ಇದೇ ರೀತಿ ಡೆಂಘೀ ಸೋಂಕಿನ ಪ್ರಮಾಣ ನಿರಂತರವಾಗಿ ಹೆಚ್ಚಾದರೆ ಬಿಳಿರಕ್ತ ಕಣಗಳ ಅಭಾವ ಉಂಟಾಗಲಿದೆ.
ಮಗಳಿಗೆ ಡೆಂಘೀ ಬಂದಿದ್ದು, ಬಿಳಿ ರಕ್ತ ಕಣ ಕಡಿಮೆ ಇದೆ ಎಂದು ವೈದ್ಯರು ಚೀಟಿ ಬರೆದುಕೊಟ್ಟರು. ಪರಿಚಯಸ್ಥ ರಕ್ತದಾನಿಗಳು ಇಲ್ಲದ ಕಾರಣ ರಕ್ತನಿಧಿ ಕೇಂದ್ರಗಳಿಗೆ ಅಲೆದಾಟ ನಡೆಸಿದ್ದೇನೆ. ಎಲ್ಲಿ ಹೋದಾರು ಸ್ಟಾಕ್ ಇಲ್ಲ ಎನ್ನುತ್ತಾರೆ. ಕೊನೆಗೆ ವಿಜಯಪುರದಿಂದ ರಕ್ತ ಕೊಟ್ಟು, ಬಿಳಿ ರಕ್ತ ಕಣ ತಂದುಕೊಟ್ಟೆ. -ಮಾಲತೇಶ್ ವಾಲೀಕಾರ, ರೋಗಿ ತಂದೆ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ ಡೆಂಘೀ ಹತೋಟಿಗೆ ಸೂಚನೆ ನೀಡಿದ್ದೇವೆ. ರಕ್ತ ನಿಧಿ ಕೇಂದ್ರಗಳ ಬಳಿ, ಆಸ್ಪತ್ರೆಗಳಲ್ಲಿ ರಕ್ತದಾನಿಗಳ ಪಟ್ಟಿ ಇದ್ದು, ಮನವಿ ಮಾಡಿ ರಕ್ತದಾನ ಮಾಡಿಸಬೇಕಿದೆ. ಆರೋಗ್ಯ ಇಲಾಖೆ ಸಹಾಯವಾಣಿ 104 ಕರೆ ಮಾಡಿದರೆ ರಕ್ತನಿಧಿ ಕೇಂದ್ರಗಳಲ್ಲಿ ಬಿಳಿ ರಕ್ತ ಕಣಗಳ ಲಭ್ಯತೆ ತಿಳಿಸುತ್ತಾರೆ.
-ಶಿವರಾಜ್ ಸಜ್ಜನ್ ಶೆಟ್ಟಿ, ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ. * ಜಯಪ್ರಕಾಶ್ ಬಿರಾದಾರ್