ತುರುವೇಕೆರೆ: ತಾಲೂಕಿನಲ್ಲಿ ಯೂರಿಯಾ, ಗೊಬ್ಬರದ ಅಭಾವ ಇದ್ದು, ಅಷ್ಟಿಷ್ಟು ದಾಸ್ತಾನು ಮಾಡಿಕೊಂಡಿರುವ ಪಟ್ಟಣದ ಅಂಗಡಿಯ ಮುಂದೆ ರೈತರು ಮುಗಿಬಿದ್ದ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
ತಾಲೂಕಾದ್ಯಂತ ಉತ್ತಮ ಮಳೆ ಸುರಿಯುತ್ತಿರುವುದರಿಂದ ರಾಗಿ, ಅವರೆ, ತೊಗರಿ ಸೇರಿದಂತೆ ಇತರೆ ಬೆಳೆಗಳಿಗೆ ಯೂರಿಯಾ, ಗೊಬ್ಬರದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ರೈತರು ತಮ್ಮ ಬೆಳೆಗಳಿಗೆ ಯೂರಿಯಾ ಸಿಗುವುದಿಲ್ಲ ಎಂಬ ಆತಂಕದಲ್ಲಿ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿ, ಗೊಬ್ಬರದ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಯೂರಿಯಾ, ಗೊಬ್ಬರ ಸಿಕ್ಕಂತಹರೈತರು ತಮ್ಮ ಬೈಕ್‌ನಲ್ಲಿ ಎರಡು ಮೂರು ಮೂಟೆ ತೆಗೆದುಕೊಂಡು ತೆರಳುತ್ತಿದ್ದು, ಕೆಲವರಿಗೆ ಸಿಗದಂತಾಗಿದೆ.
ಗೊಬ್ಬರ ಅಂಗಡಿ ಮಾಲಿಕರು ಅಂಗಡಿ ಮುಂದೆಜಮಾವಣೆಯಾದ ರೈತರಿಗೆ ಹಣ ಪಡೆದು ಚೀಟಿ ನೀಡಿ ಗೋಡೌನ್‌ಗಳಲ್ಲಿ ತೆಗೆದುಕೊಳ್ಳುವಂತೆ ಹೇಳಿ ಕಳುಹಿಸುತ್ತಿದ್ದರು.270 ರೂ.ನ ಒಂದು ಮೂಟೆಗೆ 300 ರೂ. ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಎಲ್ಲಿ ಎಷ್ಟು ಗೊಬ್ಬರ ಲಭ್ಯ: ತಾಲೂಕಿನ ದಂಡಿನಶಿವರ, ಸಂಪಿಗೆ ಸಹಕಾರ ಸಂಘ ತಲಾ 25 ಮೆಟ್ರಿಕ್ ಟನ್, ಪಟ್ಟಣದ ಟಿಎಪಿಸಿಎಂಎಸ್ 54 ಮೆಟ್ರಿಕ್ ಟನ್, ಅಯ್ಯಪ್ಪ ಸ್ವಾಮಿ ಪರ್ಟಿಲೈಸರ್ 49.9 ಎಂ.ಟಿ., ಜವರೇಗೌಡ ಫರ್ಟಿಲೈಸರ್ 20 ಎಂ.ಟಿ., ಮಾಯಸಂದ್ರ ಸಹಕಾರ ಸಂಘ 19.80 ಮೆಟ್ರಿಕ್‌ಟನ್ ಸೇರಿ ತಾಲೂಕಿನಲ್ಲಿ ಒಟ್ಟು 169 ಮೆಟ್ರಿಕ್ ಟನ್ ಗೊಬ್ಬರ ಲಭ್ಯವಿದೆ.
ತಾಲೂಕಿನಲ್ಲಿ ಯೂರಿಯಾ ಅಭಾವ ಇಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ. ಯೂರಿಯಾ ಸಿಗುವುದಿಲ್ಲ ಎಂದು ರೈತರು ಹೆಚ್ಚು ಬೆಲೆ ಕೊಟ್ಟು ಕೊಳ್ಳಬೇಡಿ, ಒಂದು ಮೂಟೆಗೆ 270 ರೂ.ಮಾತ್ರ ನೀಡಬೇಕು. ರೈತರು ಹೆಚ್ಚು ಹಣ ಪಡೆಯುವ ಅಂಗಡಿ ಬಗ್ಗೆ ದೂರು ನೀಡಿದ್ರೆ ಕ್ರಮಕೈಗೊಳ್ಳುತ್ತೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಹೇಳಿದ್ದಾರೆ.